ಕೆರೆ ಮಣ್ಣು ತೆಗೆಯಲು ರೈತರಿಗೆ ಅವಕಾಶ; ಅಧಿಕಾರಿಗಳು ಅಡ್ಡಿ ಪಡಿಸುವಂತಿಲ್ಲ: ವಿ.ಸೋಮಣ್ಣ
ಗಣಿ ಇಲಾಖೆಯ ನಿಂಗರಾಜು ಅಮಾನತಿಗೆ ಶಾಸಕ ಸುರೇಶ್ ಗೌಡ ಒತ್ತಾಯ
Tumkur news
ತುಮಕೂರು: ಕೆರೆ ಮಣ್ಣು ತೆಗೆಯಲು ಇನ್ಮುಂದೆ ರೈತರಿಗೆ ಅಡ್ಡಿ ಪಡಿಸಬಾರದು ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ದಿಶಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುರೇಶ್ ಗೌಡ ಆಕ್ರೋಶ: ಕೆರೆಯಿಂದ ಮಣ್ಣು ತೆಗೆಯುವ ರೈತರಿಂದ ಗಣಿ ಇಲಾಖೆ ಅಧಿಕಾರಿಗಳು ದಂಡದ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಕೆರೆಯಿಂದ ಮಣ್ಣು ತೆಗೆಯಲು ಯಾವುದೇ ಅಧಿಕಾರಿಗಳು ಅಡ್ಡಿ ಪಡಿಸಬಾರದು. ಗಣಿ ಇಲಾಖೆಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ, ರೈತರ ಟ್ರಾಕ್ಟರ್, ಟಿಪ್ಪರ್’ಗಳನ್ನು ಅಡ್ಡ ಹಾಕಿ 50ರಿಂದ 1 ಲಕ್ಷ ರೂ. ಲಂಚ ಪಡೆಯುತ್ತಿದ್ದಾರೆ. ಹಣ ನೀಡಲು ನಿರಾಕರಿಸುವ ರೈತರ ಟ್ರಾಕ್ಟರ್, ಟಿಪ್ಪರ್’ಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ, ಪೊಲೀಸರು ಕೆರೆಯ ಮಣ್ಣು ತೆಗೆದ ರೈತರ ಮೇಲೆ ಕೇಸ್ ಮಾಡುತ್ತಿದ್ದಾರೆ, ಈ ಎಲ್ಲಾ ಶೋಷಣೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಶಾಸಕ ಟಿ.ಬಿ ಜಯಚಂದ್ರ, ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಹಾಗೂ ತುರುವೇಕೆರೆ ಶಾಸಕ ಎಂ.ಟಿ ಕೃಷ್ಣಪ್ಪ ಧ್ವನಿಗೂಡಿಸಿದರು.
ಸೋಮಣ್ಣ ಖಡಕ್ ಸೂಚನೆ: ಶಾಸಕರುಗಳ ತೀವ್ರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಸಭಾಧ್ಯಕ್ಷ ಹಾಗೂ ವಿ.ಸೋಮಣ್ಣ, ಕೆರೆ ಮಣ್ಣು ತೆಗೆಯಲು ರೈತರಿಗೆ ಅಡ್ಡಿ ಪಡಿಸಬಾರದು, ಮಣ್ಣು ತೆಗೆಯುವ ವಿಚಾರದಲ್ಲಿ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಎಸ್.ಪಿ ಅಶೋಕ್ ಕೆ.ವಿ ಅವರಿಗೆ ಸೂಚನೆ ನೀಡಿದರು.
