Ad image

Election: ಮೂರು ರಾಜ್ಯಗಳ ಚುನಾವಣೆ ಗೆಲುವು: ಬಿಜೆಪಿ ವಿಜಯೋತ್ಸವ

ಹಿಂದುತ್ವ ವಿರೋಧಿ, ಓಲೈಕೆ ಆಡಳಿತಕ್ಕೆ ಮತದಾರರ ಪಾಠ: ಟೀಕೆ

MASTER ADMIN
3 Min Read

Tumkur news

ತುಮಕೂರು: ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಜಿಲ್ಲಾ ಬಿಜೆಪಿ ಸೋಮವಾರ ನಗರದಲ್ಲಿ ವಿಜಯೋತ್ಸವ ಆಚರಿಸಿತು. ನಗರದ ಬಿಜಿಎಸ್ ವೃತ್ತದಲ್ಲಿ ಪಕ್ಷದ ಮುಖಂಡರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿಜೆಪಿ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಜನಿಸಿದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ದುಷ್ಟ ಸರ್ಕಾರದ ವಿರುದ್ಧ ಅಲ್ಲಿನ ಜನ ಸೆಟೆದು ನಿಂತು ಆ ಸರ್ಕಾರವನ್ನು ಕೊನೆಗಾಣಿಸಿದ್ದಾರೆ. ದೇಶ ವಿರೋಧಿಗಳಿಗೆ ಆಧಾರ್ ಕಾರ್ಡ್, ಎಲೆಕ್ಷನ್ ಐಡಿ ಕೊಟ್ಟು ಪೋಷಿಸಿ ದೇಶದ ಭದ್ರತೆಯ ಸಮಸ್ಯೆಗೆ ಕಾರಣವಾಗಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ತೆಗದುಕೊಂಡು ದಿಟ್ಟ ಕ್ರಮವನ್ನು ಅಲ್ಲಿನ ಜನ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಬಾಂಗ್ಲಾದ ದುರಾಡಳಿತದ ವಿರುದ್ಧ ರೊಚ್ಚಿಗೆದ್ದ ಅಲ್ಲಿನ ಮತದಾರರು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಅಲ್ಲಿನ ಮತದಾರರು, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಈ ವಿಜಯವನ್ನು ಮುಡುಪಾಗಿಡಬೇಕು. ನಮ್ಮ ರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಇದೇ ಫಲಿತಾಂಶ ನಿರೀಕ್ಷಿಸಬಹುದಾಗಿದೆ ಎಂದರು.

ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಭ್ರಷ್ಟಾಚಾರ, ತುಷ್ಟಿಕರಣ ರಾಜಕಾರಣಕ್ಕೆ ಆಯಾ ರಾಜ್ಯದ ಜನ ತಕ್ಕ ಪಾಠ ಕಲಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಎಂದೂ ಸಾಧ್ಯವಿಲ್ಲ ಎಂಬ ಪ್ರತೀತಿಯನ್ನು ಈ ಸಾರಿ ಅಲ್ಲಿನ ಜನರು ಸುಳ್ಳು ಮಾಡಿದ್ದು ಅಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಅಭಿವೃದ್ಧಿ ಪರ ರಾಜಕಾರಣಕ್ಕೆ ಸಂದ ದೊಡ್ಡ ಗೆಲುವು. ಬಾಂಗ್ಲಾದಲ್ಲಿ ಜನಿಸಿದ ಜನಸಂಘ ಸ್ಥಾಪಕ ಶಾಮ್ ಪ್ರಕಾಶ್ ಮುಖರ್ಜಿಯವರಿಗೆ ಬಾಂಗ್ಲಾ ಚುನಾವಣೆ ಗೆಲುವನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿ ಇದ್ದ ಅವರು ಶತಾಯ ಗತಾಯ ಮತ್ತೆ ಅಧಿಕಾರಕ್ಕೆ ಬರಲು ಎಲ್ಲ ಪ್ರಯತ್ನ ಮಾಡುತ್ತಿದ್ದರು. ಆದರೆ, ಜನರು ಅವರ ವಿರುದ್ಧ ತೀವ್ರವಾಗಿ ಬಂಡೆದ್ದುದಕ್ಕೆ ಈಗ ಬಂದಿರುವ ಫಲಿತಾಂಶವೇ ನಿದರ್ಶನ. ಬಾಂಗ್ಲಾದಿಂದ ಬಂದ ನುಸುಳುಕೋರರನ್ನು ಓಲೈಸಿಕೊಂಡು ಅವರು ಇದುವರೆಗೆ ಚುನಾವಣೆ ಗೆಲ್ಲುತ್ತಿದ್ದರು. ಅದು ಭಾರತದಲ್ಲಿಯೇ ವಾಸವಾಗಿದ್ದ ಹಿಂದೂಗಳನ್ನು ಕಡೆಗಣಿಸಿದ್ದರ ಪರಿಣಾಮ ಈ ಫಲಿತಾಂಶ ಎಂದರು.

ರಾಜ್ಯದಲ್ಲಿಯೂ ಸಿಎಂ ಸಿದ್ದರಾಮಯ್ಯ ಕೂಡ ಮುಸ್ಲಿಂ ತುಷ್ಟಿಕರಣದ ರಾಜಕಾರಣದಲ್ಲಿ ತೊಡಗಿದ್ದಾರೆ. ಪಶ್ಚಿಮ ಬಂಗಾಲದ ಚುನಾವಣೆ ಫಲಿತಾಂಶ ಅವರಿಗೂ ಒಂದು ಎಚ್ಚರಿಕೆಯ ಗಂಟೆ. ತಮಿಳುನಾಡಿನ ಸಿಎಂ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಮಾರನ್ ಹಿಂದೂ ಅಸ್ಮಿತೆಯ ವಿರುದ್ಧ ಇದ್ದರು. ಸನಾತನ ಧರ್ಮದ ವಿರುದ್ಧ ಅವರು ಮಾಡಿದ ದುರುದ್ದೇಶದ ಟೀಕೆಗಳನ್ನು ಜನರು ಮರೆತಿಲ್ಲ. ಅದಕ್ಕಾಗಿಯೇ ಅಲ್ಲಿ ಡಿಎಂಕೆ ಪಕ್ಷವನ್ನು ಜನರು ಮನೆಗೆ ಕಳಿಸಿದ್ದಾರೆ ಎಂದು ಸುರೇಶ್‌ಗೌಡ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದಚೇರಿ ರಾಜ್ಯದಲ್ಲಿ ಬಿಜೆಪಿ ನೇತೃತ್ವಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಓಲೈಕೆ ರಾಜಕಾರಣಕ್ಕೆ ಬೆಲೆ ಇಲ್ಲ, ಅಭಿವೃದ್ಧಿಗೆ ಮಾತ್ರ ಬೆಲೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ. ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಚುನಾವಣೆ ಮೂರು ತಿಂಗಳ ಮೊದಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು. ಅವರ ಪಕ್ಷವನ್ನು ಆಲ್ಲಿನ ಮತದಾರರು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಓಲೈಕೆ, ಆಮಿಷದ ಸರ್ಕಾರವನ್ನು ಜನ ನಂಬುವುದಿಲ್ಲ. ಇದೇ ನೀತಿ ಅನುಸರಿಸಿಕೊಂಡು ಬರುತ್ತಿರುವ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನೂ ಜನ ಮನೆಗೆ ಕಳಿಸುತ್ತಾರೆ ಎಂದರು.

ಮುಖಂಡ ಎಸ್.ಪಿ. ಚಿದಾನಂದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಹೆಚ್. ಹನುಮಂತರಾಜು, ಮುಖಂಡರಾದ ಹೆಚ್.ಎಂ. ರವೀಶಯ್ಯ, ಬಾವಿಕಟ್ಟೆ ನಾಗಣ್ಣ, ಮಲ್ಲಿಕಾರ್ಜುನ್, ಸತ್ಯಮಂಗಲ ಜಗದೀಶ್, ವಿರೂಪಾಕ್ಷಪ್ಪ, ಜ್ಯೋತಿ ತಿಪ್ಪೇಸ್ವಾಮಿ, ವಸಂತಮ್ಮ, ಗಣೇಶ್‌ಪ್ರಸಾದ್, ಹನುಮಂತರಾಜು, ಪ್ರೀತಂ ಜೈನ್, ಗಂಗಾಧರ್, ಕೊಪ್ಪಲ್ ನಾಗರಾಜು ಮತ್ತಿತರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *