ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಹಾಗೂ ಅಧಿಕಾರಿಗಳ ವೇತನವನ್ನು ಶೇ.12.50ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಈ ವೇತನ ಪರಿಷ್ಕರಣೆ ಅನ್ವಯವಾಗಲಿದೆ.
2025ರ ಮಾರ್ಚ್ ಅಂತ್ಯದ ವೇಳೆಗೆ ಪಡೆಯುತ್ತಿದ್ದ ಮೂಲ ವೇತನದ ಆಧಾರದ ಮೇಲೆ ಈ ಹೆಚ್ಚಳ ಜಾರಿಗೆ ಬರಲಿದ್ದು, ಪರಿಷ್ಕೃತ ವೇತನವನ್ನು 2025ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲಾಗಿದೆ. ಜುಲೈ ತಿಂಗಳ ವೇತನದಲ್ಲೇ ಹೊಸ ವೇತನ ಪಾವತಿಯಾಗಲಿದೆ ಎಂದು ತಿಳಿದುಬಂದಿದೆ.
ಏಪ್ರಿಲ್ 2025ರಿಂದ ಜೂನ್ 2026ರವರೆಗೆ ಬಾಕಿ ಇರುವ ವೇತನ ಮೊತ್ತವನ್ನು ಹಂತ ಹಂತವಾಗಿ ಪಾವತಿಸಲು ಸರ್ಕಾರ ತೀರ್ಮಾನಿಸಿದೆ. ಈ ವೇತನ ಹೆಚ್ಚಳದಿಂದ ನಾಲ್ಕು ನಿಗಮಗಳಿಗೆ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ನೌಕರರಿಗೆ ಲಾಭವಾಗಲಿದೆ.
ಇನ್ನೊಂದೆಡೆ, ಸಾರಿಗೆ ನೌಕರರ ಸಂಘಟನೆಗಳು ಶೇ.25ರಷ್ಟು ವೇತನ ಹೆಚ್ಚಳಕ್ಕೆ ಒತ್ತಾಯ ಮುಂದುವರಿಸಿದ್ದು, ಸರ್ಕಾರ ಘೋಷಿಸಿರುವ ಹೆಚ್ಚಳ ಸಮರ್ಪಕವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿವೆ.
