ಕುಡಿಯುವ ನೀರಿನ ಸಮಸ್ಯೆ: ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿ ಕೇಂದ್ರ: ಶುಭ ಕಲ್ಯಾಣ್
Tumkur news
ತುಮಕೂರು: ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ, ಕುಡಿಯುವ ನೀರು ಹಾಗೂ ಮೇವಿನ ಪರಿಸ್ಥಿತಿ ಕುರಿತಂತೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು. ಸಹಾಯವಾಣಿ ಕೇಂದ್ರವು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆಯನ್ನು ತ್ವರಿತವಾಗಿ ವಿಶ್ಲೇಷಿಸಿ, ಅಗತ್ಯವಿದ್ದಾಗ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು. ಸಹಾಯವಾಣಿ ಕೇಂದ್ರದಲ್ಲಿ ದಾಖಲಾಗುವ ಸಾರ್ವಜನಿಕರ ಸಮಸ್ಯೆ ಹಾಗೂ ಪರಿಹಾರ ಕ್ರಮದ ವರದಿಯನ್ನು ಪ್ರತಿದಿನ ತಮಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ತಲೆದೋರಿದಾಗ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಜನ-ಜಾನುವಾರುಗಳಿಗೆ ನೀರಿನ ಪೂರೈಕೆ, ಶುದ್ಧೀಕರಣ ಮತ್ತು ಲಭ್ಯತೆ ಬಗ್ಗೆ ಮುಂದಿನ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೊಳವೆ ಬಾವಿ ಕೊರೆದು ಮೂರ್ನಾಲ್ಕು ತಿಂಗಳಾದರೂ ವಿದ್ಯುತ್ ಸಂಪರ್ಕವಿಲ್ಲದೆ ಹಲವಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿಯಮಿತವಾಗಿ ಪರೀಕ್ಷಿಸಬೇಕು. ದುರಸ್ತಿಯಲ್ಲಿರುವ ನೀರಿನ ಘಟಕಗಳನ್ನು ತ್ವರಿತವಾಗಿ ಸರಿಪಡಿಸಬೇಕು ಎಂದರು.
ನಂತರ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ನಗರ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇರುವುದಿಲ್ಲ. ಸಹಾಯವಾಣಿ ಕೇಂದ್ರದಲ್ಲಿ ಈವರೆಗೂ 88 ದೂರುಗಳು ದಾಖಲಾಗಿದ್ದು, ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪಶು ವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಗಿರೀಶ್‌ಬಾಬು ರೆಡ್ಡಿ ಸಭೆಗೆ ಮಾಹಿತಿ ನೀಡಿ, ಜಾನುವಾರುಗಳಿಗೆ ಸದ್ಯಕ್ಕೆ ಮೇವಿನ ಕೊರತೆ ಇರುವುದಿಲ್ಲ. ಮೇವು ಉತ್ಪಾದಿಸಲು ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್ ತಿಪ್ಪೇಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಯೋಗಾನಂದ, ಬೆಸ್ಕಾಂ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ತುಮಕೂರು: ನಿಗದಿತ ಸಮಯಕ್ಕೆ ಕಚೇರಿ ಕೆಲಸಕ್ಕೆ ಹಾಜರಾಗಿ: ಜಿಲ್ಲಾಧಿಕಾರಿ ಸೂಚನೆ
+ There are no comments
Add yours