ಹೆಚ್ಚಾಗುತ್ತಿದೆ ಡೆಂಗ್ಯೂ; ಸಾವು, ನೋವಾಗದಂತೆ ಎಚ್ಚರವಹಿಸಿ; ಜಿಲ್ಲಾಧಿಕಾರಿ ಸೂಚನೆ

1 min read

 

Tumkurnews
ತುಮಕೂರು; ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಶುಚಿತ್ವದ ಕಡೆ ಗಮನ ಹರಿಸುವಂತೆ ಆರೋಗ್ಯ ಇಲಾಖೆ ಪ್ರಚಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.
ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಎಲ್ಲಿಯೂ ಸಹ ಡೆಂಗ್ಯೂ ಸಾವು, ನೋವು ವರದಿಯಾಗದಂತೆ ಎಚ್ಚರ ವಹಿಸಿ ಸ್ವಚ್ಚತೆಯ ಕಡೆ ಗಮನಹರಿಸಬೇಕೆಂದು ಎಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆಗಳನ್ನು ಆದ್ಯತೆಯ ಮೇಲೆ ಲಸಿಕಾಕರಣ ನಡೆಸಿ ಸೆ.15 ರೊಳಗೆ ಪೂರ್ಣಗೊಳಿಸಬೇಕು. ಶಿರಾ, ತಿಪಟೂರು, ತುಮಕೂರು ಆರ್‍ಟಿಪಿಸಿಆರ್ ಕೇಂದ್ರಗಳಲ್ಲಿ ಉಳಿದಿರುವ ಟೆಸ್ಟಿಂಗ್ ಕಿಟ್‍ಗಳು ಬಳಕೆಯಾಗದಿದ್ದಲ್ಲಿ ಇಲಾಖೆಗೆ ಹಿಂದಿರುಗಿಸಲು ಸೂಕ್ತ ಕ್ರಮವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಮಳೆಯಿಂದ ಆಗುತ್ತಿರುವ ಅವಘಡಗಳನ್ನು ಎದುರಿಸಲು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಿದ್ದರಿರಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರಸ್ಥಾನದಲ್ಲಿರದೆ ಸಮಸ್ಯೆಗಳನ್ನು ಆಲಿಸಲು ಹಳ್ಳಿಗಳಿಗೆ ತೆರಳಬೇಕು. ತುರ್ತಾಗಿ ಸ್ಪಂದಿಸಬೇಕು ಈ ಕುರಿತು ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕೆಂದು ಸೂಚಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಎ/ಬಿ1/ಬಿ2/ಸಿ ಕೆಟಗೆರಿಗಳಾಗಿ ವಿಂಗಡಿಸಿ ಜಿಪಿಎಸ್ ಮಾಡಲಾಗುತ್ತಿದೆ. ನಿಗದಿತ ತಂತ್ರಾಂಶದಡಿ ಅಪ್ಲೋಡ್ ಮಾಡಲು ಬಾಕಿ ಇರುವ ಪ್ರಕರಣಗಳನ್ನು ಸೆ.15ರೊಳಗೆ ವಿಲೇವಾರಿ ಮಾಡಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ಕೆ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ ಅಜಯ್, ತಹಸೀಲ್ದಾರ್ ಮೋಹನ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ ವೀರಭದ್ರಯ್ಯ, ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

About The Author

You May Also Like

More From Author

+ There are no comments

Add yours