ತುಮಕೂರು,ಜೂ.21: tumkurnews.in:
ನಮ್ಮೆಲ್ಲರ ಬದುಕು, ಬಡಿವಾರ, ಬಂಡವಾಳಗಳಿಗೆ ‘ಸಡನ್’ ಆಗಿ ಬ್ರೆಕ್ ಹಾಕಿದ ಕೊರೊನಾದ ವಿರುದ್ಧ ಬ್ರಹ್ಮಾಸ್ತ್ರವನ್ನು ಬಳಸುವುದು ಬೇಡ. ಯೋಗಾಸ್ತ್ರವನ್ನು ಬಳಸಿ. ಯೋಗಾಸ್ತ್ರ ಬಳಸಿದರೆ ಸಾಕು. ಯೋಗಾಸ್ತ್ರದ ಮುಂದೆ ಕೊರೊನಾದ ಆಟ ಮತ್ತು ಪಾಠಗಳೆರಡೂ ನಡೆಯುವುದಿಲ್ಲ. ಯೋಗಾಸ್ತ್ರದ ಹೆಸರು ಕೇಳಿದರೆ ಸಾಕು, ಕೊರೊನಾದ ನರ, ನಾಡಿಗಳಷ್ಟೇ ಅಲ್ಲ, ಸರ್ವಸ್ವವೂ ಶಿಥಿಲವಾಗುತ್ತವೆ. ಯೋಗಾಸ್ತ್ರಕ್ಕೆ ಬ್ರಹ್ಮಾಸ್ತ್ರದ ಶಹಬ್ಬಾಶ್‍ಗಿರಿ ಕೂಡ ಸಿಕ್ಕಿದೆ. ಯೋಗಾಸ್ತ್ರವನ್ನು ಬಳಸುವುದಕ್ಕೆ ಸಿದ್ಧರಾಗಿ, ಸನ್ನದ್ಧರಾಗಿ. ಯೋಗಸೇನಾನಿಗಳಾಗಿ. ಕೊರೊನಾ ವಾರಿಯರ್ಸ್ ಅಥವಾ ಕೊರೊನಾ ಸೇನಾನಿಗಳಿಗಿಂತ ಕೊರೊನಾ ಯೋಗಸೇನಾನಿಗಳಿಗೆ ಹೆಚ್ಚು ಹೆದರುತ್ತದೆ. ಅವರ ಸುತ್ತಮುತ್ತ, ಅವರ ಅಕ್ಕಪಕ್ಕ ಅಷ್ಟೇ ಏಕೆ, ಅವರಿರುವ ದಿಕ್ಕಿನತ್ತ ತಲೆಹಾಕಿ ಮಲಗುವ ಧೈರ್ಯ ಕೂಡ ಅದಕ್ಕಿಲ್ಲ ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಅಂತಾರಾಷ್ಟ್ರೀಯ ಯೋಗದಿನದಂದು ಹಿರೇಮಠವು ಏರ್ಪಡಿಸಿದ್ದ ಆನ್‍ಲೈನ್ ಯೋಗವಂದನಾ ಸಮಾರಂಭವನ್ನು ಉದ್ಘಾಟಿಸಿ ಈ ಮೇಲಿನ ಮಾತುಗಳನ್ನು ಹೇಳಿದರು.
ಮುಂದುವರಿದು, ಅವತ್ತಿನ ಆ ಕಾಲಘಟ್ಟದಲ್ಲಿ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಅರ್ಜುನನ ಎದುರಿನಲ್ಲಿ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕøತಾಮ್‍ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಎಂದು ಹೇಳಿದ ಆ ನಮ್ಮ ಕೃಷ್ಣಪರಮಾತ್ಮನು ಈಗ ಇದ್ದರೆ ಹೀಗೆ ಹೇಳುತ್ತಿದ್ದನೇನೋ?
ಹೇ ಭಾರತದೇಶದ ನನ್ನ ಪ್ರಿಯಜನಗಳೇ, ಅನಾರೋಗ್ಯಕ್ಕೆ ಹೆದರಬೇಡಿ. ಅನಾರೋಗ್ಯದಿಂದ ಬಳಲಬೇಡಿ. ಅನಾರೋಗ್ಯದ ನಿವಾರಣೆಗಾಗಿ ಮತ್ತು ಅನಾರೋಗ್ಯವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡುವುದಕ್ಕಾಗಿ ನಾನು ಯೋಗವಾಗಿ ಹುಟ್ಟಿಬರುತ್ತೇನೆ. ನಾನು ಯೋಗಾವತಾರವನ್ನು ತಾಳುತ್ತೇನೆ.
ಈಗಾಗಲೇ ಜನಮನದ ಮಧ್ಯದಲ್ಲಿ ಪ್ರಚಲಿತವಾಗಿರುವ ನನ್ನ ದಶಾವತಾರಗಳೊಂದಿಗೆ ನನ್ನ ಈ ಹೊಸ ಯೋಗಾವತಾರವನ್ನು ಕೂಡ ಸೇರಿಸಿಬಿಟ್ಟು ನನ್ನ ದಶಾವತಾರಕ್ಕೆ ಏಕಾದಶಾವತಾರ ದೀಕ್ಷೆಯನ್ನು ಕೊಟ್ಟುಕೊಂಡು ನನ್ನನ್ನು ಪೂಜಿಸಿಕೊಂಡಿರಬಹುದು.
ಅದಕ್ಕೋಸ್ಕರ ಈ ಬಾರಿ ನಾನು ಹೀಗೆ ಹೇಳುತ್ತಿದ್ದೇನೆ,
ಯದಾ ಯದಾ ಹಿ ಆರೋಗ್ಯಸ್ಯ ಗ್ಲಾನಿರ್ಭವತಿ,
ಅಭ್ಯುತ್ಥಾನಮನಾರೋಗ್ಯಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಅನಾರೋಗ್ಯಪೀಡಿತಾನಾಂ
ವಿನಾಶಾಯ ಚ ಅನಾರೋಗ್ಯಂ|
ಆರೋಗ್ಯ, ಸದೃಢ ಆರೋಗ್ಯಸಂಸ್ಥಾಪನಾರ್ಥಾಯ ಸಂಭವಾಮಿ ಯೋಗೇ ಯೋಗೇ|| ಎಂದು.
ಇಡೀ ಪ್ರಪಂಚಕ್ಕೆ ಯೋಗಗುರುವಾಗಿ ಪಾಠಮಾಡಿದ ನಮ್ಮ ಭಾರತದಲ್ಲಿ ಯೋಗಿಗಳ ಮತ್ತು ಯೋಗಸೇನಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಿಕೊಳ್ಳಬೇಕು ಎಂದು ಹೃತ್ಪೂರ್ವಕವಾಗಿ ಆಶಿಸುತ್ತೇವೆ ಎಂದು ಹೇಳಿದರು.
+ There are no comments
Add yours