ತುಮಕೂರು ನ್ಯೂಸ್.ಇನ್, ಜೂ.16:
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಟಾನದಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಂದ ಈವರೆಗೆ ಒಟ್ಟು 11,26,832 ಮಾನವ ದಿನಗಳ ಸೃಜನೆ ಮಾಡಿದ್ದು, ಜೂನ್ ತಿಂಗಳ ನಿಗಧಿತ ಗುರಿಯಲ್ಲಿ ಈಗಾಗಲೇ ಶೇ.58.11ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ವೈಯಕ್ತಿಕ ಫಲಾನುಭವಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ಈಗಾಗಲೇ ಚಾಲನೆಯಲ್ಲಿರುವ ಬದುನಿರ್ಮಾಣ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಸುಮಾರು 3000ಕ್ಕೂ ಹೆಚ್ಚು ಮಂದಿ ರೈತರು ಈಗಾಗಲೇ ನೊಂದಣಿಯಾಗಿದ್ದು, 2000ಕ್ಕೂ ಹೆಚ್ಚಿನ ಬದು ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನು ರೈತರ ಜಮೀನುಗಳಲ್ಲಿ ಮಳೆ ನೀರು ಸಂಗ್ರಹಿಸುವ ಸಲುವಾಗಿ ಕೃಷಿಹೊಂಡಗಳನ್ನು ನಿರ್ಮಿಸಲು ಸಹ ರೈತರು ಮುಂದೆ ಬರುತ್ತಿದ್ದು, ಈಗಾಗಲೇ 2800ಕ್ಕೂ ಹೆಚ್ಚು ಮಂದಿ ರೈತರು ನೊಂದಣಿ ಮಾಡಿಸಿದ್ದು, 1800ಕ್ಕೂ ಹೆಚ್ಚು ಕೃಷಿಹೊಂಡ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.
ಜಿಲ್ಲೆಯ 10 ತಾಲ್ಲೂಕುಗಳು ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಟಾನದಲ್ಲಿ ಮುಂದಾಗಿದ್ದು, ಮಧುಗಿರಿ ತಾಲ್ಲೂಕು ನರೇಗಾ ಕಾಮಗಾರಿಗಳ ಅನುಷ್ಟಾನದಲ್ಲಿ ಮೊದಲ ಸ್ಥಾನದಲ್ಲಿದೆ. ತುಮಕೂರು ತಾಲ್ಲೂಕು ಕೊನೆಯ ಸ್ಥಾನದಲ್ಲಿದೆ. ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2020-21ನೇ ಸಾಲಿನ ಮೇ ತಿಂಗಳಿನಲ್ಲಿ ಪ್ರಾರಂಭಗೊಂಡ ಜಿಲ್ಲೆಯ ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮದ ರಂಗಸಮುದ್ರದ ಸರ್ವೆ ನಂಬರ್: 431ರ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿಯು ಪ್ರಗತಿಯಲ್ಲಿದೆ.
ಈ ಕಾಮಗಾರಿಯ ಅಂದಾಜು ಮೊತ್ತ 3 ಲಕ್ಷ ರೂಪಾಯಿಗಳಾಗಿರುತ್ತದೆ. ಅದರಲ್ಲಿ ಕೂಲಿ ವೆಚ್ಚ 2,81,616 ರೂ. ಸಾಮಗ್ರಿ ವೆಚ್ಚ 18,384 ರೂಪಾಯಿಗಳಾಗಿರುತ್ತದೆ. ಈ ಕಾಮಗಾರಿಯಿಂದಾಗಿ ಪ್ರತಿ ದಿನಕ್ಕೆ ಒಬ್ಬ ಅಕುಶಲ ಕೂಲಿ ಕಾರ್ಮಿಕನಿಗೆ 275 ರೂಪಾಯಿಗಳಂತೆ ಒಟ್ಟು 1024 ಮಾನವ ದಿನಗಳ ಸೃಜನೆಯಾಗಲಿದೆ. ಈ ಕಾಮಗಾರಿಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಅನೇಕ ಕುಟುಂಬಗಳಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೂಳೆತ್ತುವ ಕಾಮಗಾರಿಯಿಂದಾಗಿ ಒಟ್ಟು 2,81,616 ರೂಪಾಯಿಗಳು ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ. ಕೊರೋನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ಹಾತೊರೆಯುತ್ತಿದ್ದ ಮರಿದಾಸನಹಳ್ಳಿ ಗ್ರಾಮದ ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯು ವರದಾನವಾಗಿದೆ. ಸ್ವಸಹಾಯ ಸಂಘಗಳ ಮೂಲಕ ನೂರಾರು ಕುಟುಂಬಗಳಿಗೆ ಇಲ್ಲಿ ಉದ್ಯೋಗ ದೊರೆತಿದೆ ಎಂದು ಕೂಲಿ ಕಾರ್ಮಿಕ ರಾಮಯ್ಯ ಸಂತಸದ ವ್ಯಕ್ತಪಡಿಸಿದ್ದಾರೆ.
+ There are no comments
Add yours