Blog

  • ತುಮಕೂರು: ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಭದ್ರತೆಗೆ 15 ಸಾವಿರ ಪೊಲೀಸರ ನಿಯೋಜನೆ

    ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಭೇಟಿ: ನಗರದಲ್ಲಿ ಪೊಲೀಸ್ ಭದ್ರತೆ, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ

    Tumkur news
    ತುಮಕೂರು: ಏಪ್ರಿಲ್ 1ರಂದು ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರದಾದ್ಯಂತ ಅಂದು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇರಲಿದೆ.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅತಿಗಣ್ಯರ ಭದ್ರತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಈಗಾಗಲೇ ತುಮಕೂರು ಜಿಲ್ಲೆಗೆ ಉಪರಾಷ್ಟ್ರಪತಿ, ಕೇಂದ್ರ ಗೃಹ ಸಚಿವರು, ರಾಜ್ಯಪಾಲರು ಸೇರಿದಂತೆ ಗಣ್ಯರು ಆಗಮಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಜರುಗಿಸಲಾಗಿದೆ. ಪ್ರಸ್ತುತ ರಾಷ್ಟ್ರಪತಿಯವರ ಕಾರ್ಯಕ್ರಮ ಅತಿಗಣ್ಯರ ಭದ್ರತೆ ಹೊಂದಿರುವುದರಿಂದ ಯಾವುದೇ ಲೋಪವಿಲ್ಲದಂತೆ ಭದ್ರತೆ ಒದಗಿಸುವ ಸಲುವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ನಿಯೋಜನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
    ಭದ್ರತೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
    ರಾಷ್ಟ್ರಪತಿ ಅವರ ಭದ್ರತೆಗೆ ಸುಮಾರು 15,000 ಪೊಲೀಸ್ ಸಿಬ್ಬಂದಿ ನಿಯೋಜಿಸಲು ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ ಅವರು, ರಾಷ್ಟ್ರಪತಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿರ್ಗಮಿಸುವವರೆಗೆ ತುಮಕೂರು ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿರುತ್ತದೆ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹೆಲಿಪ್ಯಾಡ್, ವಾಹನ ಸಂಚರಿಸುವ ರಸ್ತೆ ಮಾರ್ಗಗಳು ಹಾಗೂ ಕಾರ್ಯಕ್ರಮ ನಡೆಯುವ ಜಾಗ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಪ್ರತ್ಯೇಕವಾದ ತಂಡಗಳನ್ನು ರಚಿಸಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಅಲ್ಲದೆ, ಮಾರ್ಚ್ 31ರಂದೇ ತಾಲೀಮು ಪ್ರಕ್ರಿಯೆ ಹಾಗೂ ಪೊಲೀಸ್ ಸಿಬ್ಬಂದಿಗೆ ಮಾಹಿತಿ ಹಾಗೂ ಇನ್ನಿತರ ಚಟುವಟಿಕೆಗಳನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
    ನಗರದಾದ್ಯಂತ ಎಲ್ಲಾ ರಸ್ತೆಗಳನ್ನು ಪೊಲೀಸ್ ಬಂದೋಬಸ್ತ್’ನಲ್ಲಿ ಇರಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗುವುದು. ಅಲ್ಲದೆ, ಕಾರ್ಯಕ್ರಮ ನಡೆಯುವ ಜಾಗಕ್ಕೆ ಸಾರ್ವಜನಿಕರು, ಭಕ್ತರು ತೆರಳಲು ಪ್ರತ್ಯೇಕ ಪ್ರವೇಶ ದ್ವಾರಗಳನ್ನು ನಿಗದಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
    ಸಭೆಯಲ್ಲಿ ಭಾಗವಹಿಸಿದ್ದ ಕೇಂದ್ರ ಗುಪ್ತಚರ ಇಲಾಖೆಯ ಸುಹಾಸ್ ಸೂಡ ಅವರು, ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಅತಿಗಣ್ಯರ ಭದ್ರತೆ ಇರುವುದರಿಂದ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತದಿಂದ ಅಧಿಕಾರಿಗಳನ್ನು ನಿಯೋಜಿಸಿ ಜವಾಬ್ದಾರಿ ವಹಿಸಿರುವುದು ಸ್ವಾಗತಾರ್ಹ. ಅಂತೆಯೇ, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ನಿರ್ವಹಿಸಬೇಕಿದೆ ಎಂದರು.
    ರಾಜ್ಯ ಗುಪ್ತಚರ ಇಲಾಖೆಯ ಪೊಲೀಸ್ ಅಧೀಕ್ಷಕ ಸುರೇಶ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಸಿದ್ಧಗಂಗಾ ಮಠದ ಪ್ರತಿನಿಧಿ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
    ಸಭೆಯ ನಂತರ ತುಮಕೂರು ವಿಶ್ವವಿದ್ಯಾನಿಲಯದ ಹೆಲಿಪ್ಯಾಡ್ ಹಾಗೂ ಸಿದ್ದಗಂಗಾ ಮಠದ ಕಾರ್ಯಕ್ರಮ ನಡೆಯುವ ವೇದಿಕೆ ಇತ್ಯಾದಿ ಪ್ರದೇಶಗಳಿಗೆ ನಿಯೋಗ ಭೇಟಿ ನೀಡಿ ಪರಿಶೀಲಿಸಿತು.

    ಚಿತ್ರ: ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಎಸ್.ಪಿ ಸೇರಿದಂತೆ ಇತರೆ ಅಧಿಕಾರಿಗಳು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಶ್ರೀಗಳೊಂದಿಗೆ ಚರ್ಚಿಸಿದರು.

  • ಟಾಟಾ ಐಪಿಎಲ್: ಉಚಿತ ವೀಕ್ಷಣೆಗೆ ಅವಕಾಶ

    ಟಾಟಾ ಐಪಿಎಲ್: ಉಚಿತ ವೀಕ್ಷಣೆಗೆ ಅವಕಾಶ

    ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರ: ಬಿಸಿಸಿಐನ ಅಲ್ಪಿನ್ ಗಾಯಕವಾಡ್ ಹೇಳಿಕೆ

    Tumkur news
    ತುಮಕೂರು: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಸಿಸಿಐ ವತಿಯಿಂದ ಟಾಟಾ ಐಪಿಎಲ್ 2026ರ ಆರಂಭಿಕ ಎರಡು ಮ್ಯಾಚ್‌ಗಳ ನೇರ ಪ್ರಸಾರವನ್ನು ಉಚಿತವಾಗಿ ದೊಡ್ಡ ಪರದೆಯ ಮೇಲೆ ಆಯೋಜಿಸಲಾಗಿದೆ ಎಂದು ಬಿಸಿಸಿಐನ ಅಲ್ಪಿನ್ ಗಾಯಕವಾಡ್ ತಿಳಿಸಿದ್ದಾರೆ.
    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಟಾಟಾ ಐಪಿಎಲ್ ಪ್ಯಾನ್ ಪಾರ್ಕು ಆಯೋಜಿಸಿರುವ ಈ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾರ್ಚ್ 28 ಶನಿವಾರ ಸಂಜೆ 7.30ಕ್ಕೆ ರಾಯಲ್‌ಚಾಲೆಂಜರ‍್ಸ್ ಬೆಂಗಳೂರು ಮತ್ತು ಸನ್‌ರೈಸರ್ ಹೈದ್ರಾಬಾದ್ ತಂಡಗಳ ನಡುವಿನ ಮ್ಯಾಚ್ ಹಾಗೂ ಮಾರ್ಚ್ 29ರ ಭಾನುವಾರ ಸಂಜೆ 7.30ಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಕಲ್ಕತ್ತಾ ನೈಟ್ ರೈಡರ‍್ಸ್ ತಂಡಗಳ ನಡುವಿನ ಮ್ಯಾಚ್ ಉಚಿತವಾಗಿ ವಿಕ್ಷೀಸಲು ಅವಕಾಶವಿದ್ದು, ಸುಮಾರು 10 ಸಾವಿರ ಜನರು ನೆಲದ ಮೇಲೆ ಕುಳಿತು ನೋಡಲು ಬೇಕಾದ ವ್ಯವಸ್ಥೆ ಮಾಡಿದ್ದು, ಸ್ಟೇಡಿಯಂನಲ್ಲಿಯ ಮ್ಯಾಚ್ ನೋಡುತ್ತಿರುವ ಅನುಭವ ನೀಡಲಿದೆ ಎಂದರು.
    ಕ್ರಿಕೆಟ್ ನೋಡುಗರ ಸಂಖ್ಯೆಯನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಬಿಸಿಸಿಐ ದೇಶದ ಐವತ್ತು ಕಡೆಗಳಲ್ಲಿ ಈ ರೀತಿಯ ದೊಡ್ಡ ಪರದೆಗಳ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಉಚಿತವಾಗಿ ಮ್ಯಾಚ್ ವೀಕ್ಷಿಸುವ ಅವಕಾಶ ಕಲ್ಪಿಸಿದೆ. ಕರ್ನಾಟಕದ ಮೈಸೂರು ಮತ್ತು ತುಮಕೂರಿನಲ್ಲಿ ಎರಡು ದಿನಗಳ ಕಾಲ ಮ್ಯಾಚ್ ನೋಡಬಹುದು. ಮ್ಯಾಚ್ ವೀಕ್ಷಿಸಲು ಬರುವ ಕ್ರಿಕೆಟ್ ಪ್ರಿಯರಿಗೆ ಏಳು ರೀತಿ ಮೋಜಿನ ಆಟಗಳ ಜೊತೆಗೆ, ಒಂದೊಂದು ಲಕ್ಕಿ ಕೂಪನ್ ವಿತರಿಸಲಾಗುವುದು. ಅಂತಿಮವಾಗಿ ಲಕ್ಕಿ ಕೂಪನ್ ಡ್ರಾ ದಲ್ಲಿ ವಿಜೇತರಾದವರಿಗೆ ಬಿಸಿಸಿಐ ಅಧಿಕೃತ ಟೀ ಶರ್ಟ್ ನೀಡಲಾಗುವುದು ಎಂದರು.
    ಕಳೆದ ಎರಡು ವರ್ಷಗಳಿಂದ ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಸಿಸಿಐ ವತಿಯಿಂದ ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ವತಿಯಿಂದ ಈ ರೀತಿ ಉಚಿತವಾಗಿ ದೊಡ್ಡ ಪರದೆಯ ಮೇಲೆ ಕ್ರಿಕೆಟ್ ಆಟವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿ ನಾಲ್ಕೈದು ಸಾವಿರ ಜನ ಕ್ರಿಕೆಟ್ ಪ್ರೇಮಿಗಳು ಒಂದೆಡೆ ಸೇರಿ ಮ್ಯಾಚ್ ವೀಕ್ಷಿಸಿದ್ದರು. ಈ ಬಾರಿ ಅವರ ಸಂಖ್ಯೆ ದ್ವಿಗುಣವಾಗಲಿದೆ ಎಂಬ ನಂಬಿಕೆ ನಮ್ಮದು, ಮ್ಯಾಚ್ ವೀಕ್ಷಣೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಬಿಸಿಸಿಐ ಮಾಡಿದೆ. ವೀಕ್ಷಣೆಗೆ ಬರುವ ಕ್ರಿಕೆಟ್ ಪ್ರೇಮಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ವಿನ್ ಗಾಯಕವಾಡ್ ತಿಳಿಸಿದರು.
    ಈ ವೇಳೆ ಕೆ.ಎಸ್.ಸಿ.ಎ ಆಡಳಿತ ಮಂಡಳಿ ಸದಸ್ಯ ಸಿ.ಆರ್.ಹರೀಶ್ ಉಪಸ್ಥಿತರಿದ್ದರು.

  • ತುಮಕೂರು ಹಾಲು ಒಕ್ಕೂಟ: ಮರು ಮತ ಎಣಿಕೆಯಲ್ಲಿ ಇಬ್ಬರಿಗೆ ಗೆಲುವು

    ತುಮಕೂರು ಹಾಲು ಒಕ್ಕೂಟ: ಮರು ಮತ ಎಣಿಕೆಯಲ್ಲಿ ಇಬ್ಬರಿಗೆ ಗೆಲುವು

    Tumkur news
    ತುಮಕೂರು: ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳಿಗೆ ಹೈಕೋರ್ಟ್ ಆದೇಶದ ಮೇರೆಗೆ ಮರು ಮತ ಎಣಿಗೆ ನಡೆದು ಇಬ್ಬರು ನೂತನ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ.
    ತುಮಕೂರು ಹಾಲು ಒಕ್ಕೂಟಕ್ಕೆ 2024ರ ನವೆಂಬರ್ 10ರಂದು ಚುನಾವಣೆ ನಡೆದಿತ್ತು. ಬಳಿಕ ಎರಡು ತಿಂಗಳ ನಂತರ ಮತ ಎಣಿಕೆಯೂ ನಡೆದಿತ್ತು. ಆ ಸಂದರ್ಭದಲ್ಲಿ ಪಾವಗಡ ಕ್ಷೇತ್ರದಿಂದ ಚಂದ್ರಶೇಖರರೆಡ್ಡಿ ಮತ್ತು ಮಧುಗಿರಿ ಕ್ಷೇತ್ರದಿಂದ ಬಿ. ನಾಗೇಶ್‌ಬಾಬು ಆಯ್ಕೆಯಾಗಿದ್ದರು. ಇವರುಗಳ ಆಯ್ಕೆಯನ್ನು ಪ್ರಶ್ನಿಸಿ ಮಧುಗಿರಿ ಕ್ಷೇತ್ರದಿಂದ ಪರಾಭವಗೊಂಡಿದ್ದ ಕೊಂಡವಾಡಿ ಚಂದ್ರಶೇಖರ್ ಹಾಗೂ ಪಾವಗಡ ಕ್ಷೇತ್ರದಿಂದ ಚನ್ನಮಲ್ಲಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
    ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದಾಖಲಾಗಿದ್ದ ರಿಟ್ ಅಫೀಲು ಅರ್ಜಿಯ ವಿಚಾರಣೆ ನಡೆದು ತುಮಕೂರು ಹಾಲು ಒಕ್ಕೂಟದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳ ನಿರ್ದೇಶಕರ ಸ್ಥಾನದ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು.
    ತುಮಕೂರು ಹಾಲು ಒಕ್ಕೂಟದ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರ ನೇತೃತ್ವದಲ್ಲಿ ಇಂದು ಮರು ಮತ ಎಣಿಕೆ ನಡೆಸಿದಾಗ ಪಾವಗಡ ಕ್ಷೇತ್ರದಿಂದ ಚನ್ನಮಲ್ಲಯ್ಯ ಅವರು 25 ಮತ ಹಾಗೂ ಈ ಹಿಂದೆ ಗೆಲುವು ಸಾಧಿಸಿದ್ದ ಚಂದ್ರಶೇಖರರೆಡ್ಡಿ 21 ಮತ ಪಡೆದಿರುವುದು ಬೆಳಕಿಗೆ ಬಂದಿತು. ಹೀಗಾಗಿ ಈ ಹಿಂದೆ ಪರಾಭವಗೊಂಡಿದ್ದ ಚನ್ನಮಲ್ಲಯ್ಯ ರವರು ಇಂದಿನ ಮರು ಮತ ಎಣಿಕೆಯಲ್ಲಿ 25 ಮತಗಳನ್ನು ಪಡೆದು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
    ಹಾಗೆಯೇ ಮಧುಗಿರಿ ಕ್ಷೇತ್ರದಿಂದ ನಾಗೇಶ್ ಬಾಬು ಅವರು ಅನರ್ಹಗೊಂಡಿರುವುದರಿಂದ ಪ್ರತಿಸ್ಪರ್ಧಿ ಕೊಂಡವಾಡಿ ಚಂದ್ರಶೇಖರ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ.

  • ಸಿದ್ಧಗಂಗಾ ಮಠವೂ ಸೇರಿದಂತೆ ಕುಡಿಯುವ ನೀರಿನ ಎಲ್ಲ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಗೆ ಕ್ರಮ

    ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಬಿ. ಸುರೇಶ್‌ ಗೌಡರ ಪ್ರಶ್ನೆಗೆ ಸರ್ಕಾರದ ಉತ್ತರ

    ಸಿದ್ಧಗಂಗಾ ಮಠವೂ ಸೇರಿದಂತೆ ಕುಡಿಯುವ ನೀರಿನ ಎಲ್ಲ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಗೆ ಕ್ರಮ

    Tumkur news
    ಬೆಂಗಳೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು-ಗೂಳೂರು, ಬೆಳ್ಳಾವಿ ಏತ ನೀರಾವರಿ ಯೋಜನೆ, ಸಿದ್ಧಗಂಗಾ ಮಠಕ್ಕೆ ನೀರು ಪೂರೈಸುವ ಮತ್ತು ದೇವರಾಯಪಟ್ಟಣ ಏತ ನೀರಾವರಿ ಯೋಜನೆಗಳ ವಿದ್ಯುತ್‌ ಬಿಲ್‌ ಬಾಕಿ ಪಾವತಿ ಮಾಡಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.
    ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿದರು. ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯ ವಿದ್ಯುತ್‌ ಬಿಲ್‌ ಬಾಕಿ 9 ಕೋಟಿ ರೂಪಾಯಿಗಳನ್ನು ಮತ್ತು ಇನ್ನು ಎರಡು ಕುಡಿಯುವ ನೀರಿನ ಯೋಜನೆಗಳ ತಲಾ 30 ಲಕ್ಷ ರೂಪಾಯಿ ಮತ್ತು 50 ಲಕ್ಷ ರೂಪಾಯಿಗಳನ್ನು ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
    ಕುಡಿಯುವ ನೀರು ಪೂರೈಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
    ಇದಕ್ಕೂ ಮುಂಚೆ ಪ್ರಶ್ನೆ ಕೇಳಿದ ಸುರೇಶ್‌ ಗೌಡರು ಕಾವೇರಿ, ಕೃಷ್ಣಾ, ವಿಶ್ವೇಶ್ವರಯ್ಯ ಮತ್ತು ಕೆಬಿಜೆಎನ್ಎಲ್‌ ನಿಗಮಗಳಿಂದ ವಿವಿಧ ಎಸ್ಕಾಂಗಳಿಗೆ ಪಾವತಿ ಮಾಡಬೇಕಾದ ವಿದ್ಯುತ್‌ ಬಾಕಿ ಕಳೆದ ಮೂರು ವರ್ಷಗಳಲ್ಲಿ 2158 ಕೋಟಿ ರೂಪಾಯಿ ಎಂದು ಜಲಸಂಪನ್ಮೂಲ ಸಚಿವರು ಉತ್ತರ ಕೊಟ್ಟಿದ್ದಾರೆ. ಇಷ್ಟು ಬಾಕಿ ಉಳಿಸಿಕೊಂಡಿರುವುದರಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಈ ಬಾಕಿ ಉಳಿಯಬಾರದು ಎಂದರೆ ಮೀನು ಸಾಕಣೆ, ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ವಿದ್ಯುತ್‌ ಬಿಲ್‌ ಬಾಕಿ ಉಳಿಯದಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್‌ ಅವರು ತಿಳಿಸಿದ್ದರು. ಅದು ಏನೂ ಆದಂತೆ ಕಾಣುವುದಿಲ್ಲ ಎಂದು ಟೀಕಿಸಿದರು.
    ಸರ್ಕಾರದ ಆರ್ಥಿಕ ಸ್ಥಿತಿ ಬಹಳ ಚೆನ್ನಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ, ಇಷ್ಟು ಚಿಕ್ಕ ಮೊತ್ತವನ್ನು ಮೂರು ವರ್ಷಗಳಿಂದ ಏಕೆ ಉಳಿಸಿಕೊಂಡಿದ್ದಾರೆ? ಇದರಿಂದ ಸಿದ್ಧಗಂಗಾ ಮಠಕ್ಕೆ ನೀರು ಪೂರೈಕೆ ಮಾಡುವ ದೇವರಾಯಪಟ್ಟಣ ಏತ ನೀರಾವರಿ ಯೋಜನೆ ಮಾತ್ರವಲ್ಲದೆ, ಹೆಬ್ಬೂರು ಏತ ನೀರಾವರಿ ಮತ್ತು ಬೆಳ್ಳಾವಿ ಏತ ನೀರಾವರಿ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಯಾಗದ ಕಾರಣ ಬೆಸ್ಕಾಂ ನವರು ಆಗಾಗ ವಿದ್ಯುತ್‌ ಸಂಪರ್ಕ ಕಡಿತ ಮಾಡುತ್ತಾರೆ. ನಾವು ನೀರು ಪೂರೈಕೆ ಆಗುವುದನ್ನೂ ನೋಡಬೇಕು. ಆಗ ವಿದ್ಯುತ್‌ ಇದೆಯೋ ಇಲ್ಲವೋ ಎಂಬುದನ್ನೂ ನೋಡಬೇಕಾಗಿದೆ. ವಿದ್ಯುತ್‌ ಸಂಪರ್ಕ ಕಡಿತವಾದ ಸಮಯದಲ್ಲಿ ಬೆಸ್ಕಾಂ ಎಂ.ಡಿ ಅವರಿಗೆ ಕರೆ ಮಾಡಿದರೆ ಅವರು ನಮ್ಮ ಕರೆಯನ್ನೂ ಸ್ವೀಕರಿಸುವುದಿಲ್ಲ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

  • ತುಮಕೂರಿನಲ್ಲೇ ಕೆಲಸ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ತುಮಕೂರಿನಲ್ಲೇ ಕೆಲಸ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    Tumkur news
    ತುಮಕೂರು: ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಖಾಲಿಯಿರುವ ಕಚೇರಿ ಸಹಾಯಕ, ಅಟೆಂಡರ್ ಹಾಗೂ ವಾಚ್‌ಮನ್, ಗಾರ್ಡನರ್ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
    ಕಚೇರಿ ಸಹಾಯಕ ಹುದ್ದೆಗೆ BSW/BA/B.Com ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಮೂಲ ಲೆಕ್ಕ ನಿರ್ವಹಣೆ ಮಾಡುವ ಅರ್ಹತೆ ಹೊಂದಿದ್ದು, ಸ್ಥಳೀಯ ಭಾಷೆಯನ್ನು ಅಡೆತಡೆಯಿಲ್ಲದೆ ಮಾತನಾಡುವಂತಿರಬೇಕು. ವಿದ್ಯಾರ್ಹತೆಗೆ ತಕ್ಕಂತೆ ಹಿಂದಿ, ಇಂಗ್ಲೀಷ್ ಬಲ್ಲವರಾಗಿರಬೇಕು. ಎಂಎಸ್ ಆಫೀಸ್(ವರ್ಡ್ ಮತ್ತು ಎಕ್ಸೆಲ್), ಟ್ಯಾಲಿ, ಇಂಟರ್ನೆಟ್, ಸ್ಥಳೀಯ ಹಾಗೂ ಇಂಗ್ಲೀಷ್ ಭಾಷೆಯ ಬೆರಳಚ್ಚು ತಿಳಿದಿರಬೇಕು. ಬೆರಳಚ್ಚು ಮಾಡುವಲ್ಲಿ ವೇಗವನ್ನು ಹೊಂದಿದವರಿಗೆ ಆದ್ಯತೆ ನೀಡಲಾಗುವುದು.
    ಅಟೆಂಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ. ಪಾಸಾದ ಕನ್ನಡ ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಾಚ್‌ಮನ್, ಗಾರ್ಡನರ್ ಹುದ್ದೆಗೆ 7ನೇ ತರಗತಿ ಪಾಸಾಗಿದ್ದು, ಕೃಷಿಯ ಬಗ್ಗೆ ತಿಳುವಳಿಕೆ ಹೊಂದಿರುವ, ಕನ್ನಡ ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
    ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 22 ರಿಂದ 40 ವರ್ಷ ವಯೋಮಾನದವರಾಗಿರಬೇಕು. ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ತಮ್ಮ ಸ್ವವಿವರ, ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ. ಮತ್ತು ಪದವಿ ಅಂಕಪಟ್ಟಿ ಹಾಗೂ ಭಾವಚಿತ್ರದೊಂದಿಗೆ ಮಾರ್ಚ್ 31ರೊಳಗಾಗಿ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ ಗೇಟ್, ತುಮಕೂರು-೫೭೨೧೬೮ ಇವರಿಗೆ ಸಲ್ಲಿಸಬಹುದಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
    ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.0816-2243386 ಅನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ವಾದಿರಾಜ ಕೆ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ತುಮಕೂರು: ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ: ಜಿಲ್ಲಾಧಿಕಾರಿ

    ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ “ಜಿಲ್ಲಾ ಮಟ್ಟದ ಬೃಹತ್ ಜನತಾ ದರ್ಶನ”: ಜಿಲ್ಲಾಧಿಕಾರಿ

    Tumkur news
    ತುಮಕೂರು: ಜಿಲ್ಲೆಯ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರೋಪಾಯವನ್ನು ಒದಗಿಸಲು ಏಪ್ರಿಲ್ 4ರಂದು ಬೆಳಿಗ್ಗೆ 11 ಗಂಟೆಗೆ ತುಮಕೂರು ನಗರದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ “ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
    ಈಗಾಗಲೇ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಗಳನ್ನು ನೀಡಲಾಗಿದೆ. ಅಲ್ಲದೆ, ಹಲವಾರು ವರ್ಷಗಳಿಂದ ನನೆಗುದಿ ಬಿದ್ದಿದ್ದ ಜಟಿಲ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರವನ್ನು ನೀಡಲಾಗಿದೆ. ಅಂತೆಯೇ, ಏಪ್ರಿಲ್ 4ರಂದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಅಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ: ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಮುಂಭಾಗದಲ್ಲಿ ನಿರ್ಮಿಸಲಾಗುವ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಜಾಗದಲ್ಲಿ 10 ವಿವಿಧ ಪ್ರಮುಖ ಇಲಾಖೆಗಳ ಮಳಿಗೆಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು. ಅಲ್ಲದೆ, ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
    ಕಾರ್ಯಕ್ರಮ ಸ್ಥಳದಲ್ಲಿ ನಿರ್ಮಿಸಲಾಗುವ ತಾತ್ಕಾಲಿಕ ಮಳಿಗೆಗಳಲ್ಲಿ ಐಪಿಜಿಆರ್‌ಎಸ್ ತಂತ್ರಾಂಶ ಒಳಗೊಂಡ ಡಾಟಾ ಎಂಟ್ರಿ, ಕಂಪ್ಯೂಟರ್ ವ್ಯವಸ್ಥೆ, ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮ ರೂಪಿಸುವ ಬಗ್ಗೆ ಆದೇಶವನ್ನು ನೀಡಲಾಗಿದ್ದು, ತಮಗೆ ವಹಿಸಿದ ಜವಾಬ್ದಾರಿಯನ್ನು ಲೋಪವಿಲ್ಲದೆ ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಜಿಲ್ಲಾದ್ಯಂತ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಒದಗಿಸಲು ಕ್ರಮವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವರು ತಿಳಿಸಿದ್ದಾರೆ.

  • ಶ್ರೀ ಕೆಂಪಮ್ಮದೇವಿ ರಥೋತ್ಸವ

    ಶ್ರೀ ಕೆಂಪಮ್ಮದೇವಿ ರಥೋತ್ಸವ

    Tumkur news
    ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಗೆ ಸೇರಿದ ಕಾಡಸೂರು ಶ್ರೀ ಕೆಂಪಮ್ಮದೇವಿ ರಥೋತ್ಸವವು ಏಪ್ರಿಲ್ 11 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಇದರ ಅಂಗವಾಗಿ ಏ.10 ರಂದು ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಧ್ವಜಾರೋಹಣ, ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಪೂಜಾ ಕಾರ್ಯಕ್ರಮ, ಮಹಾಮಂಗಳಾರತಿ ನಡೆಯಲಿದೆ.
    ಏ.11 ರಂದು ಬೆಳಗ್ಗೆ ದೇವಿ ಸುಪ್ರಭಾತ ಸೇವೆ, ಮಧ್ಯಾಹ್ನ 12.30ಕ್ಕೆ ಭಕ್ತಾದಿಗಳಿಂದ ಅನ್ನಸಂತರ್ಪಣೆ ಮಧ್ಯಾಹ್ಮ 3 ಗಂಟೆಗೆ ಕೆಂಪಮ್ಮದೇವಿ ಜಾತ್ರೆ ಮತ್ತು ರಥೋತ್ಸವ, ಏ.12 ರಂದು ರಾತ್ರೊ 8.30ಕ್ಕೆ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀ ಕೆಂಪಮ್ಮದೇವಿ ದೇವರ ಸೇವಾ ಸಮಿತಿ ಕೋರಿದೆ.

     

  • ತುಮಕೂರು: ಆಸ್ತಿ ಮಾಲೀಕರಿಗೆ ‘ಶುಭ’ ಸುದ್ದಿ

    ತುಮಕೂರು: ಆಸ್ತಿ ಮಾಲೀಕರಿಗೆ ‘ಶುಭ’ ಸುದ್ದಿ

    Tumkur News
    ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಪ್ರಸಕ್ತ 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು 2026ರ ಏಪ್ರಿಲ್ ತಿಂಗಳ ಅಂತ್ಯದೊಳಗೆ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5ರಷ್ಟು ರಿಯಾಯತಿ ನೀಡಲಾಗುವುದು ಎಂದು ಪಾಲಿಕೆ ಆಯುಕ್ತೆ ಶುಭ ಬಿ. ತಿಳಿಸಿದ್ದಾರೆ.
    ಆಸ್ತಿ ಮಾಲೀಕರು ಆಸ್ತಿ ತೆರಿಗೆ, ನೀರಿನ ಶುಲ್ಕ ಮತ್ತು ಯು.ಜಿ.ಡಿ. ಶುಲ್ಕವನ್ನು ಏಪ್ರಿಲ್ 30ರೊಳಗಾಗಿ ನಗದು ಪಾವತಿ ಕೌಂಟರ್’ಗಳ ಮೂಲಕ, ಕರ್ನಾಟಕ ಒನ್ ಕೇಂದ್ರ, ಆನ್‍ಲೈನ್ www.tumakurucity.mrc.gov.in ಮೂಲಕ ಹಾಗೂ ವಾರ್ಡ್ ಬಿಲ್ ಕಲೆಕ್ಟರ್‍’ಗಳಲ್ಲಿ ನೇರವಾಗಿ ಪಾವತಿಸಿ ರಸೀದಿ ಪಡೆಯಬಹುದು.
    ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

  • ತುಮಕೂರು ನ್ಯೂಸ್ ವೆಬ್‌ಸೈಟ್ ಪುನರಾರಂಭ – ಹೊಸ ರೂಪದಲ್ಲಿ ಮತ್ತೆ ನಿಮ್ಮ ಮುಂದೆ

    ತುಮಕೂರು: ಕಲ್ಪತರುನಾಡು ತುಮಕೂರಿನಿಂದ 06-08-2020 ರಂದು ಆರಂಭವಾದ *ತುಮಕೂರು ನ್ಯೂಸ್* ವೆಬ್‌ಸೈಟ್ ಇದೀಗ ನವೀಕೃತ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಪುನರಾರಂಭಗೊಂಡಿದೆ.

    ಸ್ಥಳೀಯ ಸುದ್ದಿಗಳನ್ನು ಜನರಿಗೆ ವೇಗವಾಗಿ ಮತ್ತು ನಿಖರವಾಗಿ ತಲುಪಿಸುವ ಉದ್ದೇಶದಿಂದ ಆರಂಭವಾದ ಈ ಡಿಜಿಟಲ್ ವೇದಿಕೆ, ತುಮಕೂರು ಜಿಲ್ಲೆಯ ಜನರ ವಿಶ್ವಾಸವನ್ನು ಗಳಿಸಿದೆ. ಈಗ ಹೊಸ ತಂತ್ರಜ್ಞಾನ ಮತ್ತು ಸುಧಾರಿತ ವಿನ್ಯಾಸದೊಂದಿಗೆ, ಬಳಕೆದಾರರಿಗೆ ಇನ್ನಷ್ಟು ಸುಲಭ ಮತ್ತು ವೇಗದ ಅನುಭವವನ್ನು ಒದಗಿಸಲು ವೆಬ್‌ಸೈಟ್ ಅನ್ನು ಮರುರಚಿಸಲಾಗಿದೆ.

    ಈ ವೆಬ್‌ಸೈಟ್‌ನ ಮುಖ್ಯ ಸಂಪಾದಕರಾಗಿ (Editor-in-Chief) **ಅಶೋಕ್ ಆರ್.ಪಿ.** ಅವರು ಕಾರ್ಯನಿರ್ವಹಿಸುತ್ತಿದ್ದು, ನಿಖರ ಮತ್ತು ನಂಬಿಕಸ್ಥ ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

    ವಿಶೇಷವಾಗಿ, *ತುಮಕೂರು ನ್ಯೂಸ್* ವೆಬ್‌ಸೈಟ್ 60 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು (60 Lakhs+ Viewers) ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. ಇದು ಜನರ ವಿಶ್ವಾಸ ಮತ್ತು ಬೆಂಬಲದ ಪ್ರತೀಕವಾಗಿದೆ.

     

    ವೆಬ್‌ಸೈಟ್‌ನ ಪ್ರಮುಖ ವೈಶಿಷ್ಟ್ಯಗಳು:

     

    * ಬ್ರೇಕಿಂಗ್ ನ್ಯೂಸ್‌ಗಳ ತ್ವರಿತ ಅಪ್‌ಡೇಟ್

    * ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ

    * ಮೊಬೈಲ್ ಸ್ನೇಹಿ ಮತ್ತು ವೇಗವಾದ ಬ್ರೌಸಿಂಗ್

    * ಜಾಹೀರಾತು ಮತ್ತು ಪ್ರಚಾರಕ್ಕೆ ವಿಶೇಷ ಅವಕಾಶ

    ತುಮಕೂರು ಜಿಲ್ಲೆಯ ರಾಜಕೀಯ, ಅಪರಾಧ, ಶಿಕ್ಷಣ, ಕೃಷಿ, ಕ್ರೀಡೆ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಕ್ಷೇತ್ರಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವುದು ನಮ್ಮ ಉದ್ದೇಶವಾಗಿದೆ.

    ಜನರ ಧ್ವನಿಯಾಗಿ, ಸಮಸ್ಯೆಗಳು ಮತ್ತು ಸಾಧನೆಗಳನ್ನು ಸಮಾಜದ ಮುಂದೆ ತರುವಲ್ಲಿ *ತುಮಕೂರು ನ್ಯೂಸ್* ಮುಂದುವರೆಯಲಿದೆ.

     

    **ತುಮಕೂರು ನ್ಯೂಸ್ – ನಿಮ್ಮ ಜಿಲ್ಲೆಯ ನಂಬಿಕಸ್ಥ ಸುದ್ದಿ ವೇದಿಕೆ!**