1,454
Tumkurnews.in
ತುಮಕೂರು; ಜಿಲ್ಲೆಯ ಎಲ್ಲಾ 331 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಮ್ಯಾನ್ಯುಯಲ್ ಸಮೀಕ್ಷೆ ಮಾಡುವ ಮೂಲಕ ಬರುವ ಫೆ.15ರೊಳಗಾಗಿ ಪಂಚತಂತ್ರದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಜಿಪಂ ವ್ಯಾಪ್ತಿಯ ಎಲ್ಲಾ ಆಸ್ತಿಗಳ ಸಮೀಕ್ಷೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಜಿಲ್ಲೆಯ ಎಲ್ಲಾ ತಾಪಂ ಇಓಗಳು ಮತ್ತು ಪಿಡಿಓಗಳಿಗೆ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆ ಹಾಗೂ ತರಬೇತಿ ಕಾರ್ಯಗಾರವನ್ನುದ್ದೇಶಿಸಿ ಅವರು ಮಾತನಾಡಿದರು. ಸರ್ಕಾರವು 2019-20ರ ಆಯವ್ಯಯದಲ್ಲಿ ಮ್ಯಾನ್ಯುಯಲ್ ಸಮೀಕ್ಷೆಗೆ ಅನುಮೋದನೆ ನೀಡಿದೆ. ಕಳೆದ ವರ್ಷ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಡಗೂರು ಗ್ರಾಮ ಪಂಚಾಯತ್ನಲ್ಲಿ ಪ್ರಾಯೋಗಿಕವಾಗಿ ಮ್ಯಾನ್ಯುಯಲ್ ಸಮೀಕ್ಷೆಯ ಪೈಲಟ್ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿ ಕಳೆದ ವರ್ಷ ಜನವರಿ 24 ರಿಂದ ಪ್ರತಿ ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿವಾರು ಸಾಧಿಸಿದ ಮ್ಯಾನ್ಯುಯಲ್ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಸಕ್ತ ವರ್ಷದಿಂದ ಜಿಲ್ಲೆಯ ಎಲ್ಲಾ 331 ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕಾಗಿದೆ. ಪ್ರತಿ ತಾಲ್ಲೂಕಿನಿಂದ ಆಯ್ದ 5 ಗ್ರಾಮ ಪಂಚಾಯಿತಿಗಳ ಪಿಡಿಓಗಳಿಗೆ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸಮೀಕ್ಷೆ ಮಾಡಿದ ನಂತರ ಉಪನೊಂದಣಾಧಿಕಾರಿಗಳ(ಎಸ್ಆರ್ ಒ) ಆಸ್ತಿಗಳ ನಿಗದಿತ ಮೌಲ್ಯದ ಆಧಾರದಲ್ಲಿ ಕಡ್ಡಾಯವಾಗಿ ತೆರಿಗೆ ಪರಿಷ್ಕರಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾಗೂ ಇದುವರೆಗೂ ತೆರಿಗೆಗೆ ಒಳಪಡಿಸದೆ ಇರುವ ಆಸ್ತಿಗಳನ್ನು ಗುರುತಿಸಿ ನಿಗದಿತ ನಮೂನೆಗಳಾದ ನಮೂನೆ-9 ನಮೂನೆ-9ಎ, 11ಎ, ಮತ್ತು 11ಬಿ ವಹಿಗಳಲ್ಲಿ ದಾಖಲಿಸುವುದು ಬಹುಮುಖ್ಯವಾಗಿರುತ್ತದೆ ಎಂದರು.
ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರ್ಪಡೆಗೊಳ್ಳದೇ ಇರುವ ಆಸ್ತಿಗಳನ್ನು ಗುರುತಿಸಿ ಸೇರ್ಪಡೆಗೊಳಿಸುವುದು ಮತ್ತು ಸದರಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವುದು, ಪಂಚತಂತ್ರ ತಂತ್ರಾಂಶದಲ್ಲಿ ಸೇರ್ಪಡೆಗೊಂಡಿದ್ದರೂ ಕೂಡ ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿಲ್ಲದೆ ಇರುವ ಆಸ್ತಿಗಳನ್ನು ಸೇರ್ಪಡೆಗೊಳಿಸಿ ತೆರಿಗೆ ವ್ಯಾಪ್ತಿಗೆ ತರುವುದು, ಈಗಾಗಲೇ ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿರುವ ಆಸ್ತಿಗಳನ್ನು ಪರಿಶೀಲಿಸಿ ದೃಢೀಕರಿಸಿರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಓ ಶುಭಾ ಕಲ್ಯಾಣ್ ಮಾತನಾಡಿ, ಫೆ.15ನೇ ತಾರೀಖಿನೊಳಗೆ ಗ್ರಾಮ ಪಂಚಾಯಿತಿಗಳಲ್ಲಿ ಮ್ಯಾನ್ಯುಯಲ್ ಸಮೀಕ್ಷೆ ಪೂರ್ಣಗೊಳಿಸಲು ಎಲ್ಲಾ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಉಪಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ.ರಮೇಶ್, ಪಂಚಾಯತ್ ರಾಜ್ ಆಯುಕ್ತಾಲಯದ ಉಪನಿರ್ದೇಶಕರು, ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ರಾಜ್ಯ ಸಂಪನ್ಮೂಲಗಳ ವ್ಯಕ್ತಿಗಳಾದ ಕೆ.ಜಿ ಜಗದೀಶ್ ಮತ್ತಿತರರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/