ಮಡಿವಾಳ ಸಮಾಜಕ್ಕೆ MLC ಸ್ಥಾನ, MLA ಟಿಕೆಟ್; ಸಿದ್ದರಾಮಯ್ಯ ಭರವಸೆ

1 min read

 

Tumkurnews
ತುಮಕೂರು; ಮಡಿವಾಳ‌ ಸಮಾಜಕ್ಕೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕೆಂಬ ಸಮುದಾಯದ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಹೆಗ್ಗರೆಯ ಶ್ರೀಸಿದ್ದಾರ್ಥ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಡಿವಾಳ ಸಮಾಜದ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತ, ಅವಕಾಶ ವಂಚಿತ ಸಮಾಜಗಳ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಸರಕಾರಗಳ ಅದ್ಯ ಕರ್ತವ್ಯವಾಗಿದೆ. ಮಡಿವಾಳ ಸಮಾಜ ಅತ್ಯಂತ ಹಿಂದುಳಿದ ಸಮಾಜ, ಇಷ್ಟು ದೊಡ್ಡ ಸಮಾವೇಶ ನಡೆಸುವುದು ಅವರಿಗೆ ಸವಾಲೇ ಸರಿ‌. ಮೇಲು, ಕೀಳು ಎಂಬ ಅಸಮಾನತೆಗೆ ವ್ಯವಸ್ಥೆಯೇ ಕಾರಣ. ಅಕ್ಷರದಿಂದ ವಂಚಿತರಾದವರು, ಅಸಮಾನತೆ ಅನುಭವಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಕಳೆದರೂ ಇಂದಿಗೂ ಕೆಲ ಸಮುದಾಯಗಳಿಗೆ ಸಮಾನತೆ ಎಂಬುದು ಕನ್ನಡಿಯೊಳಗಿನ ಗಂಟಾಗಿದೆ. ಸಂವಿಧಾನದ ಆಶಯದಂತೆ ಈ ದೇಶದ ಸಂಪತ್ತು, ಅಧಿಕಾರ ಎರಡರಲ್ಲಿಯೂ ಆಯಾಯ ಜನಸಂಖ್ಯೆಗೆ ಅನುಗುಣವಾಗಿ ಪಾಲು ದೊರೆಯಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ಬಸವಣ್ಣನ ಸಮಕಾಲೀನರು ವೀರ ಮಾಚಿದೇವರು, ಶರಣರ ರಕ್ಷಣೆಗೆ ಕತ್ತಿ ಹಿಡಿದು ಹೋರಾಟ ಮಾಡಿದವರು. ಅವರ ಹೆಸರಿನಲ್ಲಿ ಸಂಘಟಿತರಾಗಿ, ತಮ್ಮ ಹಕ್ಕುಗಳ ಕೇಳುತ್ತಿರುವುದು ಸಂತೋಷದ ವಿಚಾರ. ಯಾರು ಕೂಡ ನಿಮ್ಮ ಮನೆ ಬಾಗಿಲಿಗೆ ಸವಲತ್ತುಗಳನ್ನು ನೀಡಲ್ಲ. ಬಾಬಾ ಸಾಹೇಬರ ಶಿಕ್ಷಣ ಸಂಘಟನೆ, ಹೋರಾಟ ಎಂಬ ಮೂರು ಮುಖ್ಯ ಅಂಶಗಳೊಂದಿಗೆ ಮುನ್ನೆಡೆದರೆ ಜಯ ಸಿಗುತ್ತದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈ ಸಮಾಜವನ್ನು ಗುರುತಿಸಿ, ರಾಜಕೀಯ ಅಧಿಕಾರ ನೀಡಲಾಗಿದೆ. ಮುಂದೆಯೂ ನೀಡಲಿದ್ದೇವೆ. ನಿಮ್ಮಗಳ ಕೋರಿಕೆಯಂತೆ ವಿಧಾನಪರಿಷತ್ ಸದಸ್ಯರ ಜೊತೆಗೆ, ಅಗತ್ಯವಿದ್ದಲ್ಲಿ ವಿಧಾನಸಭೆಯ ಟಿಕೆಟ್ ನೀಡಲು ಪಕ್ಷ ಸಿದ್ದವಿದೆ. ಅನ್ನಪೂರ್ಣಮ್ಮ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದರು.


ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ನಾನು ಹಲವು ವರ್ಷಗಳಿಂದ ಹತ್ತಿರದಿಂದ ಸಮಾಜವನ್ನು ನೋಡಿದ್ದೇನೆ. ಸಮಾಜದ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತಿದೆ. ಯಾವ ವೃತ್ತಿಯೂ ಕೀಳಲ್ಲ. ವಿಷ ಸರ್ಪ ಸೇರಿರುವ ಹುತ್ತವನ್ನೇ ದೇವರೆಂದು ಪೂಜಿಸುವವ ಸಂಸ್ಕೃತಿ ನಮ್ಮದು. ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್ ಪಕ್ಷ ಎಲ್ಲಾ ಶ್ರಮಜೀವಿಗಳ ಜೊತೆ ಇದೆ. ಮುಂದೆಯೂ ಇರುತ್ತದೆ. ಕಾಂಗ್ರೆಸ್ ಈ ಸಮುದಾಯಕ್ಕೆ ಅರ್ಥಿಕ, ಶೈಕ್ಷಣಿಕ, ರಾಜಕೀಯ ಬಲ ನೀಡಲು ಸಿದ್ದವಿದೆ. ಸಮಾಜದ ಕೋರಿಕೆಯಂತೆ ಹೆಚ್.ಎಂ ಗೋಪಿಕೃಷ್ಣ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಲು ಸಿದ್ದರಿದ್ದೇವೆ. ಪರಸ್ವರ ಕೈಜೋಡಿಸಿ, ದೇಶ ಮತ್ತು ಸಮಾಜದ ಅಭಿವೃದ್ದಿಗೆ ದುಡಿಯೋಣ ಎಂದು ತಿಳಿಸಿದರು.
ಮಾಜಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ, ಅಸ್ಪೃಶ್ಯತೆಯ ನೋವುಂಡಿರುವ ಎಲ್ಲಾ ಸಮುದಾಯಗಳು ಒಗ್ಗೂಡಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದರಂತೆ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವುದರಲ್ಲಿ ನಮ್ಮ ವಿರೋಧವಿಲ್ಲ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡುವುದು ಒಳ್ಳೆಯದು. ಹಾಗಾದಾಗ ಮಾತ್ರ ಈಗಾಗಲೇ ಆ ಜಾತಿಪಟ್ಟಿಯಲ್ಲಿರುವ ಸಮುದಾಯಗಳಿಗೆ ತೊಂದರೆಯಾಗುವುದು ತಪ್ಪಿದಂತಾಗುತ್ತದೆ. ಸಿದ್ದರಾಮಯ್ಯ ಅವರನ್ನು ಸೋಲಿಸಿದ ಶೋಷಿತ ಸಮುದಾಯಗಳಿಗೆ ತಮ್ಮ ತಪ್ಪಿನ ಅರಿವಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾವೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ ಎಂದರು.


ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ರಾಜ್ಯವನ್ನು ಹಸಿವು ಮುಕ್ತ ಮಾಡಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಆದರೆ ನಾವು ಯೋಜನೆಯ ಹಿಂದಿನ ಸಮಾಜಿಕ ಕಳಕಳಿಯನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದೆವು. ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕೆಂದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ತಳಸಮುದಾಯಗಳಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಅವುಗಳನ್ನು ಬಳಸಿಕೊಂಡು ನಾವೆಲ್ಲರೂ ಒಗ್ಗೂಡಿ ಸಮ ಸಮಾಜ ನಿರ್ಮಾಣಕ್ಕೆ ಹೋರಾಡೋಣ ಎಂದರು.
ಮಡಿವಾಳ ಸಮಾಜದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮಾತನಾಡಿ, 2016-17ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಾಡಿದ ಸಮಾವೇಶದ ಫಲವಾಗಿ ಸಿದ್ದರಾಮಯ್ಯ ಅವರು ಐದು ನಿಗಮ ಮಂಡಳಿಗಳಲ್ಲಿ ನಮ್ಮ ಸಮಾಜದವರಿಗೆ ಅಧ್ಯಕ್ಷ, ಸದಸ್ಯ ಸ್ಥಾನ ನೀಡಿದರು. ಅಲ್ಲದೆ ಕುಲಪತಿ, ಅಕಾಡೆಮಿ ಅಧ್ಯಕ್ಷ ಸ್ಥಾನ ನೀಡಿದರು. ಮೂರು ವರ್ಷದಲ್ಲಿ 60 ಕೋಟಿ ರೂ., ಅನುದಾನ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದರು. ಮಾಚಿದೇವ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದರು. ಆದರೆ ಕಳೆದ ಮೂರು ವರ್ಷಗಳಿಂದ ನಮ್ಮ ಮಾಚಿದೇವ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರಿಲ್ಲ. ಅನುದಾನವೂ ಇಲ್ಲ. ಅನಾಥರಾಗಿದ್ದೇವೆ. ಒಂದು ಇಸ್ತ್ರಿ ಪೆಟ್ಟಿಗೆ ಕೊಳ್ಳಲು ನಮ್ಮಲ್ಲಿ ಶಕ್ತಿ ಇಲ್ಲ. ಹತ್ತಾರು ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರನ್ನು ಕಂಡು ಮಾತನಾಡಿದರೂ ಪ್ರಯೋಜನವಿಲ್ಲದಾಗಿದೆ. ಹಾಗಾಗಿ ನಮ್ಮನ್ನು ಯಾರು ಗುರುತಿಸಿ, ಸಹಕಾರ ನೀಡಿದ್ದಾರೆಯೋ ಅವರ ಹಿಂದೆ ಹೋಗುವುದು ನಮ್ಮ ಧರ್ಮ, ಹಾಗಾಗಿಯೇ ಇಂದು ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಈ ಸಮಾವೇಶ ನಡೆಸುತ್ತಿದ್ದೇವೆ. ನಿಮಗೂ ನಮ್ಮ ಬಗ್ಗೆ ಕಾಳಜಿ ಇದ್ದರೆ ಮೊದಲು ಕೇಂದ್ರಕ್ಕೆ ಎಸ್ಸಿ ಜಾತಿ ಪಟ್ಟಿಗೆ ಸೇರಿಸುವ ಶಿಫಾರಸ್ಸು ಕಳುಹಿಸಿ ಎಂದರು.
ಕರ್ನಾಟಕ ರಾಜ್ಯ ಮಡಿವಾಳ ಸಮಾಜದ ಅಮರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಗೋಪಿಕೃಷ್ಣ, ಲಕ್ಷ್ಮಣ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ, ಹೆಚ್.ಎಂ.ರೇವಣ್ಣ, ಶಾಸಕ ವೆಂಕಟರ ಮಣಪ್ಪ, ಮಾಜಿ ಸಂಸದ ಚಂದ್ರಪ್ಪ, ನಾಗರಾಜು, ಮಳವಳ್ಳಿ ಶಿವಣ್ಣ, ವೆಂಕಟರಮಣಸ್ವಾಮಿ, ಶಾಂತಕುಮಾರ್, ಕೆಂಪನರಸಯ್ಯ ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಮುಖಂಡರು ವೇದಿಕೆಯಲ್ಲಿದ್ದರು.

About The Author

You May Also Like

More From Author

+ There are no comments

Add yours