ತುಮಕೂರು: ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ: ವ್ಯವಸ್ಥಿತವಾಗಿ ನಡೆಸಲು ಸೂಚನೆ

1 min read

 

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ : ವ್ಯವಸ್ಥಿತವಾಗಿ ನಡೆಸಲು ಸೂಚನೆ

Tumkurnews
ತುಮಕೂರು: ಜಿಲ್ಲೆಯ ತುಮಕೂರು ನಗರದಲ್ಲಿ 26 ಹಾಗೂ ಮಧುಗಿರಿ ಪಟ್ಟಣದಲ್ಲಿ 7 ಸೇರಿದಂತೆ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಕಾನ್ಸರೆನ್ಸ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿ 7,340 ಹಾಗೂ ಮಧುಗಿರಿಯಲ್ಲಿ 1,840 ಸೇರಿದಂತೆ ಒಟ್ಟು 9,180 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಪೂರ್ವ ಸಿದ್ಧತೆಗಳನ್ನು ಕೈಗೊಂಡು ಯಾವುದೇ ಅಡೆತಡೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.
ಪರೀಕ್ಷಾ ಅಕ್ರಮವನ್ನು ತಡೆಯುವ ದೃಷ್ಟಿಯಿಂದ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವಾಗಿಸಿ, ಮೊಬೈಲ್ ಫೋನ್, ಸ್ಮಾರ್ಟ್ ವಾಚ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಕೇಂದ್ರದೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪರೀಕ್ಷಾ ಗೌಪ್ಯ ಸಾಮಗ್ರಿಗಳ ಸುರಕ್ಷಿತ ನಿರ್ವಹಣೆ, ಪೊಲೀಸ್ ಭದ್ರತೆ, ಮೂಲಸೌಕರ್ಯಗಳ ಪರಿಶೀಲನೆ, ಮುಖ ಗುರುತಿಸುವಿಕೆ ವ್ಯವಸ್ಥೆ ಮತ್ತು ಬಾಡಿ ಕ್ಯಾಮರಾ ಬಳಕೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಪರೀಕ್ಷಾ ದಿನದಂದು ಕೇಂದ್ರಗಳ ಸಮೀಪದಲ್ಲಿರುವ ಜೆರಾಕ್ಸ್ ಮತ್ತು ಸೈಬರ್ ಸೆಂಟರ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದ್ದು, ಗೌಪ್ಯ ಸಾಮಗ್ರಿಗಳನ್ನು ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಸಶಸ್ತ್ರ ಪೊಲೀಸ್ ಬೆಂಗಾವಲನ್ನು ಒದಗಿಸಲಾಗಿದೆ. ಎಲ್ಲಾ ಕೇಂದ್ರಗಳ ಮೇಲ್ವಿಚಾರಣೆಗೆ ಸ್ಥಳೀಯ ಜಾಗೃತ ದಳ ಮತ್ತು ಬಾಡಿ ಕ್ಯಾಮರಾಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಐಗಳಾದ ಕೆ.ಜಿ. ರಘುಚಂದ್ರ ಹಾಗೂ ಮಾಧವರೆಡ್ಡಿ, ಡಯಟ್ ಉಪನಿರ್ದೇಶರಾದ ಮಂಜುನಾಥ್ ಎಸ್.ಸಿ. ಹಾಗೂ ಗಂಗಾಧರ್, ಪರೀಕ್ಷೆಯ ನೋಡಲ್ ಅಧಿಕಾರಿಗಳಾದ ಗೀತಾ ಎಸ್., ವೇದಮೂರ್ತಿ, ಜಿಲ್ಲಾ ಖಜಾನಾಧಿಕಾರಿ ಉಮಾ ಸೇರಿದಂತೆ ಮತ್ತಿತರರು ಹಾಜರಿದ್ದರು.

You May Also Like

More From Author

+ There are no comments

Add yours