ತುಮಕೂರು ದಸರಾ ಉತ್ಸವ: ಬ್ರಾಹ್ಮಿ ಮುಹೂರ್ತದಲ್ಲಿ ದೇವಿ ಪ್ರತಿಷ್ಠಾಪಿಸಲು ಸಕಲ ಸಿದ್ಧತೆಗೆ ಡಿಸಿ ಸೂಚನೆ
Tumkurnews
ತುಮಕೂರು: ದಸರಾ ಅಂಗವಾಗಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪೂಜಿಸುವ ಚಾಮುಂಡೇಶ್ವರಿ ದೇವಿಯನ್ನು ಶರನ್ನವರಾತ್ರಿಯ ಮೊದಲ ದಿನ ಅಕ್ಟೋಬರ್ 3ರ ಬೆಳಿಗ್ಗೆ 5.30 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ದಸರಾ ಮಾದರಿಯಲ್ಲಿ ತುಮಕೂರು ದಸರಾ
ತಮ್ಮ ಕಚೇರಿಯಲ್ಲಿ ಸೋಮವಾರ ದಸರಾ ಉತ್ಸವದ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೇವಿಯನ್ನು ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಅಕ್ಟೋಬರ್ 12ರವರೆಗೂ ಪ್ರತೀ ದಿನ ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯಾಹ, ಗಣಪತಿ ಪೂಜೆ, ಪ್ರಧಾನ ಕಳಶಾರಾಧನೆ, ಪಂಚಾಮೃತ ಅಭಿಷೇಕ, ಹೋಮ-ಹವನ, ಮಹಾ ಮಂಗಳಾರತಿ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ಎಲ್ಲಾ ಪೂಜಾ ವಿಧಾನಗಳು ಸಾಂಗವಾಗಿ ನಡೆಯಬೇಕು ಎಂದು ನಿರ್ದೇಶನ ನೀಡಿದರು. ದಸರಾ ಸಂದರ್ಭದಲ್ಲಿ ಪೂಜಾ ವಿಧಿ-ವಿಧಾನಗಳೊಂದಿಗೆ ಪ್ರತಿ ದಿನ ಸಂಜೆ ಹರಿಕಥೆ, ಭಜನೆ, ಭಕ್ತಿಗೀತೆ, ಮತ್ತಿತರ ಭಕ್ತಿಪ್ರಧಾನ ಕಾರ್ಯಕ್ರಮಗಳನ್ನು ಏರ್ಪಡಿಸಲು ಕ್ರಮಕೈಗೊಳ್ಳಬೇಕು. ಜೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ಸಿದ್ಧತೆ ಹಾಗೂ ಅಲಂಕಾರ, ನಿರಂತರ ವಿದ್ಯುತ್ ಸರಬರಾಜು, ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಗರವನ್ನು ಸ್ವಚ್ಛಗೊಳಿಸುವುದರೊಂದಿಗೆ ನಗರದಾದ್ಯಂತ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿ ಕಟ್ಟಡ ಹಾಗೂ ಪ್ರಮುಖ ಬೀದಿಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಅಲಂಕರಿಸಬೇಕು ಎಂದು ಸೂಚನೆ ನೀಡಿದರು.
ತುಮಕೂರಲ್ಲೂ ನಡೆಯುತ್ತೆ ದಸರಾ! ಇಲ್ಲಿದೆ ಜಂಬೂ ಸವಾರಿ ಮಾರ್ಗ
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ದಸರಾ ಉತ್ಸವ ಪ್ರಯುಕ್ತ ಅಕ್ಟೋಬರ್ 12ರಂದು ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ದೇವಿಯನ್ನು ಕೂರಿಸಿರುವ ಅಲಂಕೃತ ಅಂಬಾರಿ ಹೊತ್ತ ಆನೆ; ವಿಂಟೇಜ್ ಕಾರ್; ಹುಲಿವೇಷ, ಚಿಟ್ಟಿಮೇಳ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು, ಹಳ್ಳಿಕಾರ್ ಎತ್ತುಗಳು, 70 ವಿವಿಧ ದೇವರ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ದಸರಾ ಪ್ರಯುಕ್ತ ಅಕ್ಟೋಬರ್ 11 ಮತ್ತು 12ರಂದು ಸಂಜೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಸಸಂಜೆ, ದ್ರೋಣ್ ಶೋ, ಬಾಣ-ಬಿರುಸುಗಳ ಪ್ರದರ್ಶನ, ವಸ್ತುಪ್ರದರ್ಶನಗಳು ನಡೆಯಲಿವೆ, ಯುವ ದಸರಾದ ಅಂಗವಾಗಿ ಅಕ್ಟೋಬರ್ 6 ರಿಂದ 10ರವರೆಗೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಯೂ ಸಹ ಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅರಣ್ಯ ಉಪ ಸಂರಕ್ಷಣಾಧಿಕಾರಿ ಅನುಪಮ, ಮುಜರಾಯಿ ತಹಶೀಲ್ದಾರ್ ಸವಿತ, ಅರ್ಚಕರ ಸಂಘದ ಅಧ್ಯಕ್ಷ ರಾಮತೀರ್ಥನ್, ವಿವಿಧ ದೇವಾಲಯದ ಧರ್ಮಾಧಿಕಾರಿಗಳು, ದಸರಾ ಉತ್ಸವ ಸಮಿತಿಗಳ ಪತ್ರಕರ್ತ ಸದಸ್ಯರು, ವಿವಿಧ ಅಧಿಕಾರಿಗಳು ಹಾಜರಿದ್ದರು.
 
                                             
                                             
                                             
                                             
                                             
                                             
                                             
                                             
                                            
 
                                     
                                     
                                     
                                     
                


 
                                     
                                     
                                     
                                                         
                                
                        
+ There are no comments
Add yours