ತುಮಕೂರು ನ್ಯೂಸ್.ಇನ್(ಜೂ.18)
ತುಮಕೂರು ಜಿಲ್ಲೆಯಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಮೂಲಕ 2019-20ನೇ ಸಾಲಿನ ಸ್ವಯಂ ಉದ್ಯೋಗ ಸಾಲ ಯೋಜನೆ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 92 ಮಂದಿಗೆ 92 ಲಕ್ಷ ರೂ.ಗಳ ಆರ್ಥಿಕ ನೆರವಿನ ಮಂಜೂರಾತಿ ಪತ್ರ ವಿತರಿಸಿದ್ದು, ಜೂನ್ 30ರೊಳಗೆ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಅವರು ತಿಳಿಸಿದ್ದಾರೆ. ನಗರದಲ್ಲಿ ಇಂದು ಮಂಜೂರಾತಿ ಪತ್ರ ವಿತರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯ ಸಮುದಾಯ ವೈಶ್ಯ ಅಭಿವೃದ್ಧಿ ನಿಗಮದ ಮೂಲಕ ಅರಿವು ಶೈಕ್ಷಣಿಕ ಸಾಲ ಮತ್ತು ನೇರ ಉದ್ಯೋಗ ಸಾಲ ಯೋಜನೆಗಳನ್ನು ಜಾರಿಗೆ ತಂದಿದ್ದು, ವ್ಯಾಸಂಗ ಮಾಡುತ್ತಿರುವ ಹಾಗೂ ವ್ಯಾಪಾರ ಮಾಡುವಂತಹ ನಮ್ಮ ಸಮಾಜದ ಕಡು ಬಡವರಿಗೆ ಧನ ಸಹಾಯ ಮಾಡುವಂತಹ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಸರ್ಕಾರ ಕೂಡ ಈ ಕಾರ್ಯಕ್ಕೆ ಸಹಕಾರ ನೀಡುತ್ತಿದೆ ಎಂದರು.
ಆರ್ಯ ವೈಶ್ಯ ಸಮುದಾಯದ ಜನರಿಗೆ ಕಳೆದ 1958ರಿಂದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿರಲಿಲ್ಲ. ಆದರೆ ಇದೀಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಎರಡು ಒಂದರಲ್ಲೇ ನೀಡಲಾಗುತ್ತಿದೆ. ಅರಿವು ಶೈಕ್ಷಣಿಕ ಸಾಲ ಮತ್ತು ನೇರ ಉದ್ಯೋಗ ಸಾಲಕ್ಕಾಗಿ ಸರ್ಕಾರವು 2019-20ನೇ ಸಾಲಿನ ಆಯವ್ಯಯದಲ್ಲಿ ನಮ್ಮ ಸಮಾಜಕ್ಕಾಗಿ 10 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಅರಿವು ಶೈಕ್ಷಣಿಕ ಸಾಲಕ್ಕಾಗಿ ಕಡಿಮೆ ಅರ್ಜಿಗಳು ಬಂದಿದ್ದು, ನೇರ ಉದ್ಯೋಗ ಸಾಲಕ್ಕೆ ರಾಜ್ಯದ್ಯಾಂತ 1650 ಅರ್ಜಿಗಳು ಬಂದಿವೆ. ಅದರಲ್ಲಿ 250 ಅರ್ಜಿಗಳು ತುಮಕೂರು ಜಿಲ್ಲೆಯಿಂದಲೇ ಬಂದಿವೆ. ಈ ಎರಡು ಯೋಜನೆಗಳ ಮೂಲಕ 1 ಕೋಟಿಯನ್ನಾದರು ತುಮಕೂರು ಜಿಲ್ಲೆಗೆ ನೀಡಿ ಕನಿಷ್ಠ 100 ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು ನಿಗಮದ ಮೂಲಕ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಪ್ರತಿ ಫಲಾನುಭವಿಗೆ 1 ಲಕ್ಷ ರೂ. ನೀಡಲಾಗುವುದು. ಈ ಪೈಕಿ ಶೇ.20 ರಷ್ಟು ಸಬ್ಸಿಡಿ ದೊರೆಯಲಿದೆ. 4 ರೂ. ಬಡ್ಡಿ ದರದಲ್ಲಿ ಸಾಲ ಮರು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಬಿ.ಪಿ.ಎಲ್ ಕಾರ್ಡ್ ಹೊಂದಿರುವ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರುವ ಫಲಾನುಭವಿಗಳು ನಿಗಮಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ದೇವರಾಜು ಅರಸು ನಿಗಮದ ಜಿಲ್ಲಾ ವ್ಯವಸ್ಥಾಪಕ ಭಕ್ತ ಕುಚೇಲ ಹಾಜರಿದ್ದರು.
+ There are no comments
Add yours