ಕಳವಳಕ್ಕೆ ಕಾರಣವಾದ ಶಿಶು ಮರಣ ಪ್ರಕರಣ
Tumkurnews 
ತುಮಕೂರು; ಜಿಲ್ಲೆಯಲ್ಲಿ 2022ರ ಡಿಸೆಂಬರ್ ಮಾಹೆಯಿಂದ 2023ರ ಏಪ್ರಿಲ್ ಮಾಹೆಯವರೆಗೆ ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಪಾವಗಡದಲ್ಲಿ ತಲಾ 1 ಹಾಗೂ ತುಮಕೂರಿನಲ್ಲಿ 4 ಸೇರಿದಂತೆ ಒಟ್ಟು 8 ತಾಯಿ ಮರಣ ಪ್ರಕರಣ ಮತ್ತು 158 ಶಿಶು ಮರಣ ಪ್ರಕರಣ ವರದಿಯಾಗಿದ್ದು, ತಾಯಿ-ಶಿಶು ಮರಣ ಪ್ರಕರಣಗಳ ಸಂಖ್ಯೆಯನ್ನು ಇಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಸಭೆಗಳ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತಾಯಿ-ಶಿಶು ಮರಣ ಪ್ರಕರಣಗಳು ವರದಿಯಾಗದಂತೆ ವೈದ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು, ಜಿಲ್ಲೆಯಲ್ಲಿ 2022ರ ಏಪ್ರಿಲ್ ಮಾಹೆಯಿಂದ 2023ರ ಮಾರ್ಚ್ ಮಾಹೆಯವರೆಗೆ ವರದಿಯಾದ 31006 ಹೆರಿಗೆ ಪ್ರಕರಣಗಳ ಪೈಕಿ 19665 ಸಿಜೇರಿಯನ್(ಸಿ-ಸೆಕ್ಷನ್) ಹೆರಿಗೆ ಪ್ರಕರಣಗಳು ವರದಿಯಾಗಿವೆ. ಹೆರಿಗೆ ಪ್ರಕರಣಗಳನ್ನು ಅವಲೋಕಿಸಿದಾಗ ಶೇ. 63ರಷ್ಟು ಸಿ-ಸೆಕ್ಷನ್ ಹೆರಿಗೆಗಳಾಗಿದ್ದು, ಸಿ-ಸೆಕ್ಷನ್ ಹೆರಿಗೆ ಪ್ರಮಾಣವನ್ನು ಶೇ.30ಕ್ಕೆ ಇಳಿಸುವ ಗುರಿಯನ್ನು ಹೊಂದಬೇಕು ಎಂದ ಅವರು ತಾಲ್ಲೂಕುವಾರು ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಮಾಹಿತಿ ಪಡೆದರು. ತಾಯಿ-ಶಿಶು ಮರಣ ಸಂಭವಿಸಿದರೆ ಸಂಬಂಧಿಸಿದ ವೈದ್ಯರನ್ನು ಹೊಣೆಗಾರಿಕೆ ಮಾಡಲಾಗುವುದು ಎಂದು ನಿರ್ದೇಶನ ನೀಡಿದರು.
ಶೂನ್ಯ ಹೆರಿಗೆ ಪ್ರಕರಣ ವರದಿಯಾಗುವ ಜಿಲ್ಲಾಸ್ಪತ್ರೆ ಮತ್ತಿತರ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುವ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸಾಮಾನ್ಯ ಹೆರಿಗೆ ಮಾಡಿಸುವ ಪ್ರಯತ್ನ ಮಾಡಬೇಕು. ಸಾಮಾನ್ಯ ಹೆರಿಗೆ ಸಾಧ್ಯವಿಲ್ಲವೆಂದಾಗ ಮಾತ್ರ ಸಿಜೇರಿಯನ್ ಹೆರಿಗೆ ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳು ಬಳಸಿಕೊಂಡು ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ದೊರಕಿಸಿ ಕೊಡಬೇಕು ಎಂದರು.
ದಡಾರ-ರುಬೆಲ್ಲಾ ನಿಮೂರ್ಲನೆಗಾಗಿ ಕಟ್ಟಡ ಕಾರ್ಮಿಕರ ಹಾಗೂ ಇತರೇ ವಲಸೆ ಪ್ರದೇಶಗಳಲ್ಲಿರುವ 5 ವರ್ಷದೊಳಗಿನ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ವಯಸ್ಸಿಗನುಗುಣವಾಗಿ ದಡಾರ-ರುಬೆಲ್ಲಾ ಲಸಿಕೆ ಹಾಕಿಸುವಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಮಟ್ಟದ ಜನರಲ್ಲಿ ದಡಾರ-ರುಬೆಲ್ಲಾ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಪ್ರತಿ ತಿಂಗಳು ವಿವಿಧ ಮಾಹಿತಿ-ಶಿಕ್ಷಣ ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.
ವಾಹನ ಚಾಲಕರಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸೂಚನೆ
ತಂಬಾಕು ಉತ್ಪನ್ನಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಬಗ್ಗೆ ವಾಹನ ಚಾಲಕರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ವೈದ್ಯಕೀಯ ಕಾಲೇಜುಗಳ ಸಹಯೋಗದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ 2023ರ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಬೇಕು. ತಂಬಾಕು ಉತ್ಪನ್ನಗಳನ್ನು ಬಳಕೆ ಮಾಡುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ನಗರದ ಟೌನ್ ಹಾಲ್ ವೃತ್ತದಿಂದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಘಟಕದ ವತಿಯಿಂದ ಕೋಟ್ಪಾ ಕಾನೂನಿನ ಅನುಸರಣೆ ಕುರಿತಂತೆ ಸಮೀಕ್ಷೆ ನಡೆಸಿದ್ದು, ಸದರಿ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಕಾನೂನಿನ ಪಾಲನೆ ಶೇ.90ಕ್ಕಿಂತ ಹೆಚ್ಚಿನ ರೀತಿಯಲ್ಲಿ ಅನುಸರಣೆಯಾಗಿರುವ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿ ಜೈಲ್ ಥಾಮಸ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕಾನೂನು ಪಾಲನೆಗೆ ಸಹಕರಿಸಿದ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು.
ತಂಬಾಕು ವ್ಯಸನಿಗಳಿಗೆ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರ ಹಾಗೂ ಎಲ್ಲಾ ತಾಲ್ಲೂಕಿನ ತಾಲ್ಲೂಕು ಆಸ್ಪತ್ರೆಯ ಎನ್.ಸಿ.ಡಿ ಕ್ಲಿನಿಕ್ ವತಿಯಿಂದ ನೀಡಲಾಗುತ್ತಿರುವ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿನ ರೀತಿಯಲ್ಲಿ ವ್ಯಸನಿಗಳಿಗೆ ಕಲ್ಪಿಸಿ ಅವರ ಜೀವನ ಶೈಲಿಯನ್ನು ಬದಲಾಯಿಸಲು ಅನುವು ಮಾಡಿಕೊಡಬೇಕೆಂದು ತಿಳಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಂಬಾಕು ವಹಿವಾಟು ನಡೆಸುವಂತಹ ಅಂಗಡಿ ಮುಂಗಟ್ಟುಗಳ ಮಾಲೀಕರು ಇನ್ನು ಮುಂದೆ ಕಡ್ಡಾಯವಾಗಿ ತಂಬಾಕು ವಹಿವಾಟಿಗೆ ಸಂಬಂಧಿಸಿದಂತೆ ಪರವಾನಗಿ ಪಡೆಯಬೇಕಾಗಿದ್ದು, ಈ ಸಂಬಂಧ ಕ್ರಮವಹಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಕೋಟ್ಪಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ 2022-23ನೇ ಸಾಲಿನಲ್ಲಿ ಇಲ್ಲಿಯವರೆಗೆ 138 ಕಾರ್ಯಾಚರಣೆ ಕೈಗೊಂಡು 2161 ಪ್ರಕರಣಗಳನ್ನು ದಾಖಲಿಸಿ ಒಟ್ಟು 238760 ರೂ.ಗಳ ದಂಡ ಸಂಗ್ರಹಿಸಲಾಗಿದೆಯೆಂದು ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಾಕ್ರಮಾಧಿಕಾರಿ ಡಾ. ಮೋಹನ್ದಾಸ್ ಸಭೆಗೆ ಮಾಹಿತಿ ನೀಡಿದರು.
ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಸನತ್ ಕುಮಾರ್ ಮಾತನಾಡಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಚೇರಿಯಿಂದ ಪ್ರತಿ ತಿಂಗಳು 24 ರಂದು ನಿಕ್ಷಯ ದಿನ ಕಾರ್ಯಕ್ರಮದಡಿ ಜಿಲ್ಲೆಯ ಕ್ಷಯ ರೋಗಿಗಳನ್ನು ತಪಾಸಣೆ ಮಾಡಲಾಗುವುದು. ಸಮುದಾಯ ಆರೋಗ್ಯ ಕೇಂದ್ರಗಳ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ವೀಣಾ, ಆರ್ಸಿಹೆಚ್ ಅಧಿಕಾರಿ ಡಾ.ಕೇಶವರಾಜ್ ಹಾಗೂ ವಿವಿಧ ತಾಲ್ಲೂಕಿನ ತಾಲ್ಲೂಕು ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.
                                            
                                            
                                            
                                            
                                            
                                            
                                            
                                            
                                            
                                    
                                    
                                    
                                    


                                    
                                    
                                    
+ There are no comments
Add yours