ಬೆಂಗಳೂರು: ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹಾಕಿಸಿಕೊಂಡಿರುವ ಗಣೇಶ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸಾನ್ವಿ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ವೈರಲ್ ಆದ ಬಳಿಕ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ದೇವರ ಚಿತ್ರವನ್ನು ದೇಹದ ಮೇಲೆ ಟ್ಯಾಟೂ ರೂಪದಲ್ಲಿ ಹಾಕಿಸಿಕೊಳ್ಳಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.
ಈ ವಿಚಾರಕ್ಕೆ ಸಂಬಂಧಿಸಿ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಸಾನ್ವಿ ಪರವಾಗಿ ನಿಂತಿದ್ದು, “ಆಕೆಯ ದೇಹ.. ಆಕೆಯ ದೇವರು.. ಅದನ್ನು ಪ್ರಶ್ನಿಸಲು ಯಾರಿಗೂ ಹಕ್ಕಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರಚೂಡ್ ಅವರ ಹೇಳಿಕೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತಷ್ಟು ತೀವ್ರಗೊಂಡಿದ್ದು, ಕೆಲವರು ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
