ರಾಮಾಯಣದಿಂದ ಬದುಕಿಗೆ ಸಮಗ್ರ ದೃಷ್ಟಿ: ಸ್ವಾಮಿ ವೀರೇಶಾನಂದ ಸರಸ್ವತೀ
Tumkur news
ತುಮಕೂರು: ‘ರಾಮಾಯಣವು ಮಾನವ ಬದುಕಿಗೆ ಅತಿ ಸಮೀಪದ ಇತಿಹಾಸ, ವ್ಯವಹಾರ ಕ್ಷೇತ್ರಕ್ಕೆ ನೀತಿಯ ಸಾಗರ, ಸಾಮಾಜಿಕ ಕ್ಷೇತ್ರಕ್ಕೆ ಸಾಂಸ್ಕೃತಿಕ ನೆಲೆಗಟ್ಟನ್ನು ನೀಡಿರುವಂಥದ್ದು. ಜನರ ಸಾಮಾಜಿಕ ಮತ್ತು ನೈತಿಕ ಸಮತೋಲನಕ್ಕೆ ಅತ್ಯವಶ್ಯಕವಾದ ವಿಚಾರಗಳು ರಾಮಾಯಣದಲ್ಲಿವೆ’ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ವೀರೇಶಾನಂದ ಸರಸ್ವತೀ ಅಭಿಪ್ರಾಯಪಟ್ಟರು.
ಅವರು ಶ್ರೀರಾಮನವಮಿಯ ಅಂಗವಾಗಿ ಆಶ್ರಮದಲ್ಲಿ ಆಯೋಜಿಸಿದ್ದ ‘ಶಾರದಾ ನಿನಾದ’ ವಿಶೇಷ ಸತ್ಸಂಗದಲ್ಲಿ ಉಪನ್ಯಾಸ ನೀಡಿದರು.
‘ನಾಗರಿಕತೆಯು ಮಾನವನ ಬದುಕನ್ನು ಸುಲಭ, ಸುಖ ಹಾಗೂ ಲಾಭದಾಯಕವಾಗಿಸುವುದು ನಿಜ. ಆದರದು ಅಂತಿಮವಾಗಿ ಲೌಕಿಕ ಪಾಷಂಡತನವನ್ನು ಮೂಡಿಸುತ್ತದೆ. ಇಲ್ಲಿ ಸಂಸ್ಕೃತಿಯು ನಾಗರಿಕತೆಯ ಅನಿಷ್ಟಗಳನ್ನು ತಡೆದು, ನೈತಿಕತೆಯನ್ನು ಮುನ್ನೆಲೆಯಲ್ಲಿರಿಸಿ ಬದುಕಿಗೆ ಸಮಗ್ರ ದೃಷ್ಟಿಕೋನವನ್ನು ದೊರಕಿಸಿಕೊಡುತ್ತದೆ. ಶ್ರೀರಾಮಾಯಣ ಗ್ರಂಥಾವಲೋಕನವು ಈ ದಿಕ್ಕಿನಲ್ಲಿ ಬೆಳಕು ಚೆಲ್ಲುತ್ತದೆ’ ಎಂದರು.
‘ಬುದ್ಧಿಜೀವಿಗಳ ಹಾಗೂ ಢೋಂಗಿ ವಿಜ್ಞಾನವಾದಿಗಳಿಗೆ ಊಹಾಪೋಹವೆನಿಸಿದ್ದ ಶ್ರೀರಾಮಸೇತು ಇಂದು ನಾಸಾ ವಿಜ್ಞಾನಿಗಳ ಕಾರ್ಬನ್ ಡೇಟಿಂಗ್ ಮತ್ತು ಗ್ಲೋಬಲ್ ವಾರ್ಮಿಂಗ್ ಸಂಶೋಧನಾತ್ಮಕ ಪ್ರಕ್ರಿಯೆಗಳಿಂದ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿರುವುದು ಹರ್ಷದಾಯಕ ಸಂಗತಿ’, ಎಂದು ಸ್ವಾಮೀಜಿ ವಿವರಿಸಿದರು.
ರಾಮೋತ್ಸವದ ಅಂಗವಾಗಿ ಬೆಂಗಳೂರಿನ ಸುಪ್ರಸಿದ್ಧ ಸಂಗೀತಗಾರ ವಿದ್ವಾನ್ ಶ್ರೀ ಸಿ.ಕೆ. ಪವನ್ದೀಪ್ ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿದರು. ವಿದ್ವಾನ್ ಶ್ರೀ ಎಸ್. ಜನಾರ್ದನ್ (ವಯೋಲಿನ್), ವಿದ್ವಾನ್ ಶ್ರೀ ಫಣೀಂದ್ರ ಭಾಸ್ಕರ್ (ಮೃದಂಗ) ಮತ್ತು ತುಮಕೂರಿನ ವಿದ್ವಾನ್ ಬಿ.ಆರ್ ವಿದ್ಯಾಶಂಕರ್ (ಘಟಂ)ರವರು ಭಾಗವಹಿಸಿದ್ದರು.
ಚಿತ್ರ:
ರಾಮೋತ್ಸವದ ಅಂಗವಾಗಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮವನ್ನು ವಿದ್ವಾನ್ ಶ್ರೀ ಸಿ.ಕೆ. ಪವನ್ದೀಪ್ ಉದ್ಘಾಟಿಸಿದರು. ಚಿತ್ರದಲ್ಲಿ ಸ್ವಾಮಿ ವೀರೇಶಾನಂದಜೀ, ಸ್ವಾಮಿ ಧೀರಾನಂದಜೀ, ಶ್ರೀ ವಿದ್ಯಾಶಂಕರ್, ವಿದ್ವಾನ್ ಶ್ರೀ ಎಸ್. ಜನಾರ್ದನ್, ವಿದ್ವಾನ್ ಶ್ರೀ ಫಣೀಂದ್ರ ಭಾಸ್ಕರ್ ಮತ್ತು ವಿದ್ವಾನ್ ಬಿ.ಆರ್ ವಿದ್ಯಾಶಂಕರ್ರವರನ್ನು ಕಾಣಬಹುದು.
