ದೇವರ ದರ್ಶನದ ಬಳಿಕ ಅಪಘಾತ: ದಂಪತಿ ದುರ್ಮರಣ
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಸಿದ್ಧಾಪುರ ಬಳಿ ಬೆಂಗಳೂರು -ಮಂಗಳೂರು ಹೈವೆಯಲ್ಲಿ ಬೈಕ್ ಗೆ ಕಾರು ಡಿಕ್ಕಿಯಾಗಿ ಬೈಕ್ ನಲ್ಲಿದ್ದ ದಂಪತಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಈ ಅಪಘಾತ ಜರುಗಿದ್ದು, ಹುಲಿಯೂರುದುರ್ಗಾ ಹೋಬಳಿ ಹಳೇವೂರು ಗ್ರಾಮದ ಶಿವಶಂಕರ್(60) ಹಾಗೂ ಇವರ ಪತ್ನಿ ಸುನಂದಾ(55) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಯಡಿಯೂರು ಧಾರ್ಮಿಕ ಕ್ಷೇತ್ರದಲ್ಲಿ ದೇವರ ದರ್ಶನ ಮುಗಿಸಿದ ಬಳಿಕ ದಂಪತಿಗಳು ಸ್ವಗ್ರಾಮ ಕುಣಿಗಲ್ ಮೂಲಕ ಹಳೇವೂರು ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ಬೈಕ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ನಲ್ಲಿದ್ದ ದಂಪತಿಗಳಿಬ್ಬರು ತೀವ್ರಗಾಯಗೊಂಡು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಮೃತರ ಶವ ಪರೀಕ್ಷೆ ಕುಣಿಗಲ್ ಸಾರ್ವಜನಿಕ ಆಸ್ಪತ್ರೆ ಯಲ್ಲಿ ನಡೆದಿದ್ದು, ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




+ There are no comments
Add yours