ತುಮಕೂರು: ಜಿಲ್ಲೆಯ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ.: ಗೃಹ ಸಚಿವ ಡಾ.ಜಿ.ಪರಮೇಶ್ವರ
Tumkurnews
ತುಮಕೂರು: ಜಿಲ್ಲೆಯಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಶನಿವಾರ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆ ಜತೆಯಲ್ಲಿಯೇ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಂತೆಯೇ ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕನ್ನಡದ ನೆಲ ಮತ್ತು ಜಲ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದ ಅವರು, ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ಕುಂಠಿತವಾಗಿದ್ದ ಹಿನ್ನೆಲೆಯಲ್ಲಿ ಉದ್ಘಾಟನೆಗೆ ತಡವಾಗಿದ್ದ ತುಮಕೂರು ನಗರದ ಬಿದರಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವ ವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸನ್ನು ನವೆಂಬರ್ 7ರಂದು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಿರುವ ಕಟ್ಟಡ, 22 ಕೋಟಿ ವೆಚ್ಚದ ತಾಯಿ-ಮಕ್ಕಳ ಆಸ್ಪತ್ರೆ ಹಾಗೂ 42 ಕೋಟಿ ವೆಚ್ಚದಲ್ಲಿ ತುರ್ತು ನಿಗಾ ಘಟಕ, 78 ವರ್ಷದ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡ ಶಿಥಿಲವಾಗಿರುವುದರಿಂದ 130 ಕೋಟಿ ವೆಚ್ಚದಲ್ಲಿ ಆಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ, 29 ಕೋಟಿ ವೆಚ್ಚದಲ್ಲಿ ಭೀಮಸಂದ್ರದ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಹಾಗೂ 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 3ನೇ ಹಂತದ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನವೆಂಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 169 ಕೋಟಿ ರೂ. ಮಂಜೂರಾಗಿದ್ದು, ಚರಂಡಿ, ರಸ್ತೆ ಮತ್ತು ಉದ್ಯಾನವನ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ನಗರ ಒಳಚರಂಡಿ ದುರಸ್ತಿಗೆ 50 ಕೋಟಿ ರೂ. ಮಂಜೂರಾಗಿದ್ದು, ದಿಬ್ಬೂರು ಮತ್ತು ದೋಬಿಘಾಟ್ ಬಳಿ ಎರಡು ಆರೋಗ್ಯ ಕೇಂದ್ರಗಳಿಗೆ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.
ಅಲ್ಲದೆ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 300 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ, ಚರಂಡಿ ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದ ಅವರು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಆರೋಪಗಳಿಗೆ ಈ ಎಲ್ಲ ಕಾಮಗಾರಿಗಳು ನಿದರ್ಶನವಾಗಿವೆ ಎಂದು ಹೇಳಿದರು.
ಚಿತ್ರ:
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ




+ There are no comments
Add yours