ಸೆ.22 ರಿಂದ ದಸರಾ ಉತ್ಸವ: ಆಗಮ ರೀತಿಯಲ್ಲಿ ಪೂಜಾ ಕೈಂಕರ್ಯ ನಡೆಸಲು ನಿರ್ಣಯ
Tumkurnews
ತುಮಕೂರು: ಜಿಲ್ಲಾಡಳಿತದಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರವರೆಗೆ ಜರುಗಲಿರುವ ದಸರಾ ಉತ್ಸವದಲ್ಲಿ ಆಗಮ ರೀತಿಯ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ನಿರ್ಣಯಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಧಾರ್ಮಿಕ ಪೂಜಾ ವಿಧಾನಗಳ ಆಚರಣಾ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿ, ದಸರಾ ಉತ್ಸವ ನವರಾತ್ರಿ ದಿನಗಳಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗುವ ಭವ್ಯ ಧಾರ್ಮಿಕ ಮಂಟಪದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪ್ರತಿದಿನ ವಿವಿಧ ಅಲಂಕಾರಗಳಿಂದ ಪೂಜಿಸಬೇಕು ಎಂದು ತಿಳಿಸಿದರು.
ದಸರಾ ಉತ್ಸವ ಮೊದಲ ದಿನ ಬೆಳಗ್ಗೆ ಧಾರ್ಮಿಕ ವಿಧಿ-ವಿಧಾನಗಳಂತೆ ಗಣಪತಿ ಪೂಜೆ, ಪೂಣ್ಯಾಹ ವಾಚನ, ಭೂಮಿ ಪೂಜೆ, ಧ್ವಜ ಪೂಜೆ, ಮಂಟಪ ಪೂಜೆ ಮತ್ತು ಧ್ವಜಾರೋಹಣ, ಭಾರತ ಮಾತಾ ಪೂಜೆ, ಗಣಪತಿ ಹೋಮ ಮತ್ತು ದುರ್ಗಾ ಹೋಮ, ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಬೇಕು. ಮಹಾ ಮಂಗಳಾರತಿ ನಂತರ ಪ್ರತಿದಿನ ಭಕ್ತಾದಿಗಳಿಗೆ ಲಘು ಪ್ರಸಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಕಳೆದ ಬಾರಿಯಂತೆ ಈ ಬಾರಿಯೂ ದಸರಾ ಉತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯಬೇಕು. ದೇವಿಯನ್ನು ಪ್ರತಿಷ್ಠಾಪಿಸುವ ಧಾರ್ಮಿಕ ಮಂಟಪವನ್ನು ಸಮತಟ್ಟಾದ ಜಾಗದಲ್ಲಿ ನಿರ್ಮಿಸಬೇಕು. ಮಳೆ ಬಂದರೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಮುಜರಾಯಿ ತಹಶೀಲ್ದಾರ್ ಎಸ್. ಸವಿತ, ಸಮಿತಿ ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಸುನೀಲ್ ಕುಮಾರ್, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಮಹೇಶ್, ಹುಲಿಯೂರಮ್ಮ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ಮಂಜೇಶ್, ವಾರ್ತಾ ಇಲಾಖೆಯ ಆರ್. ರೂಪಕಲಾ, ಮುಜರಾಯಿ ದೇವಸ್ಥಾನ ಅರ್ಚಕರ ಸಂಘದ ಅಧ್ಯಕ್ಷ ರಾಮತೀರ್ಥನ್, ನವರತ್ನಕುಮಾರ್, ವೆಂಕಟರಾಜು ಭಟ್ಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
+ There are no comments
Add yours