ಮೈಕ್ರೋ ಫೈನಾನ್ಸ್’ಗಳಿಗೆ ಮೂಗುದಾರ: ಹೀಗೆಲ್ಲಾ ಸಾಲ ವಸೂಲಿ ಮಾಡುವಂತಿಲ್ಲ
Tumkur news
ತುಮಕೂರು: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್’ಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಮೈಕ್ರೋ ಫೈನಾನ್ಸ್’ಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಸಾಲಗಾರರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಾಧಾನ ಹೇಳಿದ್ದಾರೆ. ಇದಕ್ಕೂ ಮುನ್ನ ಅಧಿಕಾರಿಗಳ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅದರಂತೆ ಸಾಲಗಾರರಿಗೆ ಕಿರುಕುಳ ನೀಡಿದಲ್ಲಿ ಮೈಕ್ರೋ ಫೈನಾನ್ಸ್’ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಎಚ್ಚರಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ರಾಜ್ಯದಲೇ ಅತಿ ಹೆಚ್ಚು ಮೈಕ್ರೋ ಫೈನಾನ್ಸ್ ಸಾಲ!
ಷರತ್ತುಗಳು ಅನ್ವಯ: ಮೈಕ್ರೋ ಫೈನಾನ್ಸ್’ಗಳ ಕಿರುಕುಳದಿಂದ ಜನರನ್ನು ಪಾರು ಮಾಡಲು ಜಿಲ್ಲಾಡಳಿತವು ಫೈನಾನ್ಸ್ ಕಂಪನಿಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ.
ಸಾಲ ನೀಡಲು ಷರತ್ತು:
* ಆರ್.ಬಿ.ಐ ವಿಧಿಸಿರುವ ಷರತ್ತುಗಳ ಅನ್ವಯ ಸಾಲ ನೀಡಬೇಕು, ಮತ್ತು ಷರತ್ತುಗಳನ್ನು ಉಲ್ಲಂಘಿಸಿ ಸಾಲ ನೀಡುವಂತಿಲ್ಲ, ಮತ್ತು ಕಾನೂನು ವಿರುದ್ಧವಾಗಿ ಸಾಲ ವಸೂಲಿ ಮಾಡುವಂತಿಲ್ಲ.
* ಅರ್ಹರಿಗೆ ಮಾತ್ರ ಸಾಲ ನೀಡಬೇಕು, ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಕಡ್ಡಾಯವಾಗಿ ಆರ್.ಬಿ.ಐ ಮಾರ್ಗಸೂಚಿಗಳನ್ನು ಪಾಲಿಸಬೇಕು.
* ಒಬ್ಬ ವ್ಯಕ್ತಿ ಗರಿಷ್ಠ 3ಲಕ್ಷದವರೆಗೆ 4 ಬಾರಿ ಮಾತ್ರ ಸಾಲ ಪಡೆಯಲು ಅವಕಾಶವಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಹಾಗೂ ಕೈಸಾಲ ಪಡೆಯುವಾಗ ಮುನ್ನೆಚ್ಚರಿಕೆವಹಿಸಬೇಕು.
* ಮರು ಪಾವತಿ ಮಾಡಲು ಶಕ್ತರಿರುವವರಿಗೆ ಮಾತ್ರ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ನೀಡಬೇಕು.
* ನಿಯಮ ಮೀರಿ ಸಾಲಗಾರರಿಗೆ ಸಾಲ ನೀಡುವ ಫೈನಾನ್ಸ್ ಕಂಪನಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಹೀಗೆಲ್ಲಾ ಸಾಲ ವಸೂಲಿ ಮಾಡುವಂತಿಲ್ಲ:
* ಆರ್.ಬಿ.ಐ ಮಾರ್ಗಸೂಚಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಸಾಲದ ಕಂತುಗಳನ್ನು ತೀರಿಸಲಾಗದ ಸಾಲಗಾರರನ್ನು ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ಬೈಯ್ಯುವಂತಿಲ್ಲ.
* ದೌರ್ಜನ್ಯ-ದಬ್ಬಾಳಿಕೆ ಮಾಡುವಂತಿಲ್ಲ.
* ಸಂಜೆ 6 ಗಂಟೆಯ ನಂತರ ಸಾಲಗಾರರ ಮನೆ ಬಳಿ ವಸೂಲಾತಿಗೆ ಬರುವಂತಿಲ್ಲ.
* ಇಂತಹ ಪ್ರಕರಣಗಳು ವರದಿಯಾದಲ್ಲಿ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಂತ್ರಸ್ತರ ಮನೆಗೆ ಭೇಟಿ: ಮೈಕ್ರೋ ಫೈನಾನ್ಸ್’ಗಳ ಭೀತಿಯಿಂದ ಜನರನ್ನು ಪಾರು ಮಾಡಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ ಅವರು ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಯಿಂದ 2ಲಕ್ಷ ರೂ. ಸಾಲ ಪಡೆದ ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ವಿನುತ ಕೋಂ ಮಾರುತಿ ಅವರ ಮನೆಗೆ ಗುರುವಾರ ಭೇಟಿ ನೀಡಿದ್ದಾರೆ. ವಿನುತ ಅವರು ನಿಗದಿತ ಅವಧಿಯಲ್ಲಿ ಸಾಲದ ಕಂತು ಕಟ್ಟದೆ ಇದ್ದುದರಿಂದ ಫೈನಾನ್ಸ್ ಕಂಪನಿಯವರು ಅವರ ಮನೆಯ ಮೇಲೆ “ಈ ಸ್ವತ್ತು ಫೈವ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪನಿಗೆ ಅಡಮಾನವಾಗಿದೆ” ಎಂದು ಬರೆಸಿತ್ತು. ಇದನ್ನು ಕಂಡ ಜಿಲ್ಲಾಧಿಕಾರಿ, ಹೀಗೆ ಬರೆಸಿರುವುದು ಕಾನೂನು ರೀತ್ಯಾ ತಪ್ಪು ಎಂದು ಕಾನೂನು ಉಲ್ಲಂಘಿಸಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಕೂಡಲೇ ಬರವಣಿಗೆಯನ್ನು ಅಳಿಸಿ ಬಣ್ಣ ಬಳಿಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಕ್ರೋಫೈನಾನ್ಸ್ ಹಾವಳಿ: ಇಂದು ಜಿಲ್ಲಾಧಿಕಾರಿ ಮಹತ್ವದ ಸಭೆ
ಇದಕ್ಕೂ ಮುನ್ನ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಸಾಲ ತೀರಿಸಲಾಗದೆ 30 ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ಮಂಗಳಮ್ಮ ಅವರ ಮನೆಗೆ ಭೇಟಿ ನೀಡಿ ಅವರ ಮಗನಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಕೊರಟಗೆರೆ ತಹಶೀಲ್ದಾರ್ ಮಂಜುನಾಥ್, ಸೇರಿದಂತೆ ಮತ್ತಿತರರು ಹಾಜರಿದ್ದರು.
ತುಮಕೂರು: ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಪೂರೈಕೆ: ಮೆಡ್ ಪ್ಲಸ್ ಸಿಬ್ಬಂದಿ ಸೇರಿ 7 ಮಂದಿ ಬಂಧನ
+ There are no comments
Add yours