ಶಿರಾ: ಜಿಲ್ಲಾಧಿಕಾರಿ ಶುಭಕಲ್ಯಾಣ್ ಅನಿರೀಕ್ಷಿತ ಭೇಟಿ: ಅಧಿಕಾರಿಗಳು ತಬ್ಬಿಬ್ಬು

1 min read

 

ಜಿಲ್ಲಾಧಿಕಾರಿ ಶುಭಕಲ್ಯಾಣ್ ಶಿರಾಗೆ ಅನಿರೀಕ್ಷಿತ ಭೇಟಿ

Tumkurnews
ತುಮಕೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಾಗೂ ಪೌತಿ ಖಾತೆಯಲ್ಲಿ ಪ್ರಗತಿ ಪರಿಶೀಲಿಸುವ ಸಂಬಂಧ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಇಂದು ಬೆಳಿಗ್ಗೆ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ವಸತಿ ಶಾಲೆ, ಯಲಿಯೂರು ಗ್ರಾಮ, ಶಿರಾ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ, ಪಶು ಆಸ್ಪತ್ರೆ, ನಗರದ ವಿವಿಧ ವಾರ್ಡುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಶಿರಾ ತಾಲ್ಲೂಕು ಚಿಕ್ಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚಾಲಯ ಸ್ವಚ್ಛವಿಲ್ಲದೆ ದುರ್ವಾಸನೆ ಬರುತ್ತಿದೆ. ನಿಮ್ಮ ಮನೆಯಲ್ಲಿ ಹೀಗೆ ಇಟ್ಟುಕೊಳ್ಳುತ್ತೀರಾ? ಎಂದು ನಿಲಯ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು.

ತುಮಕೂರು: ಜಿಲ್ಲಾಧಿಕಾರಿಗಳಿಂದ ವಿವಿಧ ಗ್ರಾಮಗಳಿಗೆ ಭೇಟಿ: ಕಂದಾಯ ಪ್ರಗತಿ ಪರಿಶೀಲನೆ
ಸ್ವಚ್ಛತೆಯಿಲ್ಲದೆ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಸತಿ ನಿಲಯದ ವಿದ್ಯಾರ್ಥಿಗಳು ಮಲಗುವ ಕೋಣೆ, ಭೋಜನಾಲಯ, ಅಡುಗೆ ಕೋಣೆ ಸೇರಿದಂತೆ ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿರಬೇಕು. ವಸತಿ ನಿಲಯದ ಆವರಣ ಗೋಡೆಯೊಳಗೆ ನಾಯಿಗಳ ಹಾವಳಿ ಇಲ್ಲದಂತೆ ಕ್ರಮವಹಿಸಬೇಕೆಂದು ಖಡಕ್ ಸೂಚನೆ ನೀಡಿದರು.
ನಿರಂತರ ಅಭ್ಯಾಸ ಮಾಡಲು ಕಿವಿ ಮಾತು: ವಸತಿ ಶಾಲೆಯ 8, 9, 10ನೇ ತರಗತಿ ವಿದ್ಯಾರ್ಥಿಗಳ ಕೋಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅವರು, ಓದುವ ಉದ್ದೇಶದಿಂದಲೇ ವಸತಿ ನಿಲಯಕ್ಕೆ ದಾಖಲಾಗಿದ್ದೀರಿ. ಸಮಯ ವ್ಯರ್ಥ ಮಾಡದೆ ಶಿಕ್ಷಕರು ಬೋಧಿಸುವ ಪಠ್ಯವನ್ನು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ. ಪಠ್ಯ ಅರ್ಥವಾಗದೇ ಸಂದೇಹಗಳಿದ್ದಲ್ಲಿ ಬಿಡುವಿನ ವೇಳೆಯಲ್ಲಿ ವಿಷಯ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ ಅವರು, ನಿಲಯದ ವಿದ್ಯಾರ್ಥಿಗಳಿಂದ ಮಗ್ಗಿ ಹೇಳಿಸಿದರು. ಆಂಗ್ಲ ಪದಗಳ ಸ್ಪೆಲಿಂಗ್ ಕೇಳಿದರು. ಕನ್ನಡ ವಿಷಯದ ಸಾಹಿತ್ಯ ಭಾಗವನ್ನು ಓದಿಸಿದರು. ಸ್ನಾನಕ್ಕೆ ಬಿಸಿನೀರು ಲಭ್ಯವಿರುವ, ಶುಚಿ-ರುಚಿಯಾದ ಊಟ, ತಿಂಡಿ ನೀಡುವ, ಶಿಕ್ಷಕರ ಬೋಧನಾ ಕ್ರಮದ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಯಾವುದೇ ತಪ್ಪಿಲ್ಲದೆ ಮಗ್ಗಿ ಒಪ್ಪಿಸಿದ ವಿದ್ಯಾರ್ಥಿ ತನ್ಮಯ್ ಜಿಲ್ಲಾಧಿಕಾರಿಗಳಿಂದ ಮೆಚ್ಚುಗೆ ಪಡೆದನು.

2026ರ ವೇಳೆಗೆ ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಸಮರ್ಪಣೆ: ಕೇಂದ್ರ ಸಚಿವ ವಿ.ಸೋಮಣ್ಣ
ಫುಡ್ ಕಲರ್ ಬಳಸದಿರಲು ತಾಕೀತು: ಮಕ್ಕಳಿಗೆ ಆಹಾರ ತಯಾರಿಸುವ ಅಡುಗೆ ಕೋಣೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಡುಗೆಗೆ ಯಾವುದೇ ಫುಡ್ ಕಲರ್ ಬಳಸಬಾರದು. ಅಡುಗೆ ತಯಾರಿಕೆಯ ಪಾತ್ರೆಗಳು ಸ್ವಚ್ಛವಾಗಿರಬೇಕು. ಆಹಾರ ತಯಾರಿಕೆಯಲ್ಲಿ ಹುಳುಗಳಿಲ್ಲದ ದವಸ-ಧಾನ್ಯ ಬಳಸಬೇಕು. ಉತ್ತಮ ಅಡುಗೆ ಎಣ್ಣೆ ಬಳಸಬೇಕು. ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿದ್ದು, ಶುಚಿಯಾದ ಆಹಾರ ತಯಾರಿಸಬೇಕೆಂದು ಅಡುಗೆ ಸಿಬ್ಬಂದಿಗಳಿಗೆ ತಾಕೀತು ಮಾಡಿದ ಅವರು, ಕಾಲ-ಕಾಲಕ್ಕೆ ಆರೋಗ್ಯ ಇಲಾಖೆ ಸಹಕಾರದಲ್ಲಿ ಮಕ್ಕಳ ಆರೋಗ್ಯ ತಪಾಸಣೆಯಾಗಬೇಕೆಂದು ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆ: ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಸ್ಥಾಪನೆ
ವಿಶೇಷ ಕಾಳಜಿ ವಹಿಸಲು ಸೂಚನೆ: ವಿಷಯ ಗ್ರಹಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಿಶೇಷ ತರಗತಿ ಏರ್ಪಡಿಸಿ ಪಠ್ಯಭ್ಯಾಸ ಮಾಡಿಸಬೇಕು. ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ.100ರಷ್ಟು ಬರಬೇಕು ಎಂದು ಬೋಧಕ ವರ್ಗದವರಿಗೆ ಸೂಚನೆ ನೀಡಿದರು.
ನಿಲಯದ ಮೇಲ್ವಿಚಾರಕ ಗಿರೀಶ್, ಶಿಕ್ಷಕರಾದ ಮಂಜುಶ್ರೀ ಹಾಗೂ ಅಂಬುಜ, ಪ್ರಾಂಶುಪಾಲ ಜಗದೀಶ್ ಕಣಕಲ್ ಅವರು ನಿಲಯದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಬೋಧಕ, ಬೋಧಕೇತರ ಸಿಬ್ಬಂದಿಗಳ ಮಾಹಿತಿ ನೀಡಿದರು.

ತುಮಕೂರು: 200ರ ಗಡಿ ದಾಟಿದ ಡೆಂಗ್ಯೂ ಪ್ರಕರಣ: ಸಹಾಯವಾಣಿ ಆರಂಭ
ಕಂದಾಯ ಪ್ರಗತಿ ಸಾಧಿಸಲು ಸೂಚನೆ: ನಂತರ ಯಲಿಯೂರು ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಾಕಿ ಇರುವ ಪಹಣಿಗೆ ಆಧಾರ್ ಜೋಡಣೆ, ಲ್ಯಾಂಡ್ ಬೀಟ್, ಮರಣ ಪ್ರಮಾಣ ಪತ್ರ, ಪಿಂಚಣಿ ವಿತರಣೆ, ಪೌತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಿ ಕಂದಾಯ ಪ್ರಗತಿ ಸಾಧಿಸಬೇಕು ಎಂದರು. ಗ್ರಾಮಗಳಲ್ಲಿ 2-3 ತಲೆಮಾರುಗಳಿಂದ ಮೃತಪಟ್ಟವರ ವಾರಸುದಾರರ ಹೆಸರಿಗೆ ಪೌತಿ ಖಾತೆಯಾಗದೆ ಅರ್ಹರಿಗೆ ಸರ್ಕಾರಿ ಸವಲತ್ತುಗಳನ್ನು ನೀಡಲು ಸಮಸ್ಯೆಯಾಗುತ್ತಿದೆ.
ಪೌತಿ ಖಾತೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದಲ್ಲಿ ವಾರಸುದಾರರು ಪೌತಿ ಖಾತೆಗೆ ಅಗತ್ಯವಿರುವ ವಂಶವೃಕ್ಷ, ಮರಣ ಪ್ರಮಾಣ ಪತ್ರ, ಪಹಣಿ ಪತ್ರಗಳನ್ನು ಒದಗಿಸಿದಲ್ಲಿ 15 ದಿನಗಳೊಳಗಾಗಿ ಪೌತಿ ಖಾತೆ ಬದಲಾವಣೆ ಮಾಡಿಕೊಡಲಾಗುತ್ತಿದ್ದು, ಗ್ರಾಮಸ್ಥರು ಸದುಪಯೋಗ ಪಡೆಯಬೇಕು, ಖಾತೆ ಬದಲಾಗದೆ ಅರ್ಹ ರೈತ ಮಕ್ಕಳಿಗೆ ಮೀಸಲಾತಿ ಸೌಲಭ್ಯ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬರಪರಿಹಾರ ನೀಡಲು ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದರು.

ಸೈಬರ್ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ: ಗೃಹ ಸಚಿವ ಪರಮೇಶ್ವರ್
ಮಧುಗಿರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಜುಲೈ ಮಾಹೆಯೊಳಗೆ 1500 ಪೌತಿ ಖಾತೆ ಅರ್ಜಿ ವಿಲೇವಾರಿ ಮಾಡಲು ಗುರಿ ನೀಡಲಾಗಿದೆಯಾದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಅಧೀನ ಅಧಿಕಾರಿಗಳಿಗೆ ಪವತಿ ಖಾತೆ ಪ್ರಗತಿ ಸಾಧಿಸುವ ಬಗ್ಗೆ ಸೂಚನೆ ನೀಡಲು ಕ್ರಮವಹಿಸಬೇಕು, ಮೇ ಮಾಹೆಯಿಂದ ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಖಾತೆಗೆ ಜಮೆಯಾಗಿಲ್ಲವೆಂದು ಮಹಿಳೆಯರಿಂದ ದೂರು ಬರುತ್ತಿರುವುದರಿಂದ ಬಾಕಿ ಇರುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಬಗ್ಗೆ ಕೂಡಲೇ ಕ್ರಮವಹಿಸಬೇಕೆಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರಿಗೆ ನಿರ್ದೇಶನ ನೀಡಿದರು.
ಯಲಿಯೂರು ಗ್ರಾಮದಲ್ಲಿ ನೀರು ಪೂರೈಕೆ, ನೀರು ಪರೀಕ್ಷೆ, ಜಲ್‍ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನೀರಿನ ಸಂಪರ್ಕ ಒದಗಿಸಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು.

ತುಮಕೂರು: ಬೆಂಗಳೂರು ನಗರ ವಿಶ್ವ ಮನ್ನಣೆ ಗಳಿಸಲು ಕೆಂಪೇಗೌಡರ ದೂರದೃಷ್ಟಿತ್ವವೇ ಕಾರಣ: ಜಿಲ್ಲಾಧಿಕಾರಿ
ಮಳೆಯಲ್ಲಿ ಶಿರಾ ನಗರಸಭೆ ಸಂಚಾರ: ಜಿಲ್ಲಾಧಿಕಾರಿಗಳು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಛತ್ರಿ ಹಿಡಿದು ಶಿರಾ ನಗರಸಭೆಯ ಪೇಷ್ಮ ಮೊಹಲ್ಲಾ, ಗಾರ್ಡನ್ ಮೊಹಲ್ಲಾ, ಬೇಗಂ ಮೊಹಲ್ಲಾ, ಕರೆಕಲ್ ಹಟ್ಟಿ ಸೇರಿ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಪರಿಶೀಲಿಸಿದರು.
ಪಟ್ಟಣದ ವಾರ್ಡ್ ಸಂಖ್ಯೆ 26 ಕರೆಕಲ್ ಹಟ್ಟಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ಚರಂಡಿ ಕಟ್ಟಿಕೊಂಡು ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರು ಕೇಳಿ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವಾರದೊಳಗೆ 200 ಮೀಟರ್ ಉದ್ದದ ಚರಂಡಿ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ನಗರ ಸಭೆ ಇಂಜಿನಿಯರ್ ಚಂದ್ರಶೇಖರ್ ಹಾಗೂ ಪೌರಾಯುಕ್ತರು ರುದ್ರೇಶ್ ಅವರಿಗೆ ಸೂಚನೆ ನೀಡಿದರು.
ಇದಕ್ಕೆ ಉತ್ತರಿಸಿದ ಇಂಜಿನಿಯರ್, 15ನೇ ಹಣಕಾಸು ಯೋಜನೆಯಡಿ 5ಲಕ್ಷ ರೂ. ಹಾಗೂ ವಿಶೇಷ ಅನುದಾನದಡಿ 10ಲಕ್ಷ ಸೇರಿ ಒಟ್ಟು 15ಲಕ್ಷ ರೂ.ಗಳನ್ನು ಚರಂಡಿ ಕಾಮಗಾರಿಗಾಗಿ ಮೀಸಲಿಡಲಾಗಿದ್ದು, ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಶಿರಾ ನಗರಸಭೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಶಿರಾ ಪಟ್ಟಣದ ನಾಗರಿಕರ ಆರೋಗ್ಯದ ಸಂಪೂರ್ಣ ಜವಾಬ್ದಾರಿ ನಗರ ಸಭೆಯ ಮೇಲಿದ್ದು, ಡೆಂಗ್ಯೂ ನಿಯಂತ್ರಣಕ್ಕಾಗಿ ಸೊಳ್ಳೆ ಹೆಚ್ಚಾಗದಂತೆ ಪ್ರತಿ ದಿನ ಧೂಮೀಕರಣ ಮಾಡಬೇಕು. ಚರಂಡಿಗಳಿಗೆ ಕೀಟನಾಶಕ ಸಿಂಪಡಿಸಬೇಕು. ಮನೆಗಳ ಬಳಿ ಇರುವ ಕಸವನ್ನು ವಿಲೇವಾರಿ ಮಾಡಬೇಕು. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಸೂಚನೆ ನೀಡಿದರು.
ಬಯೋಮೆಟ್ರಿಕ್ ಕಡ್ಡಾಯ: ಶಿರಾ ಪಶು ಆಸ್ಪತ್ರೆಗೆ ಭೇಟಿ ನೀಡಿ, ಹಾಜರಾತಿ ವಹಿ ಪರಿಶೀಲಿಸಿದರು. ಎಲ್ಲಾ ತಾಲ್ಲೂಕು ಮಟ್ಟದ 31 ಇಲಾಖಾ ಕಚೇರಿಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಬೇಕು, ಪಶು ವೈದ್ಯಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಜಾನುವಾರುಗಳ ಆರೋಗ್ಯ ಕಾಪಾಡಬೇಕು. ಕಾಲುಬಾಯಿ ಜ್ವರದ ಬಗ್ಗೆ ಮಾಹಿತಿ ಪಡೆದ ಅವರು, ಕಾಲಕಾಲಕ್ಕೆ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಸ್ಥಳದಲ್ಲಿಯೇ ಕಸದ ರಾಶಿ ತೆರವು: ಶಿರಾ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಆವರಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಕಸದ ರಾಶಿಯನ್ನು ಕಂಡ ಜಿಲ್ಲಾಧಿಕಾರಿ ಕೂಡಲೇ ತೆರವುಗೊಳಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ ಅವರಿಗೆ ಸೂಚನೆ ನೀಡಿದಾಗ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಕ್ರಮಕೈಗೊಂಡು ಕಸವನ್ನು ವಿಲೇವಾರಿ ಮಾಡಲು ಕ್ರಮ ವಹಿಸಿದರು.
ಮಕ್ಕಳಿಗೆ ಡೆಂಗ್ಯೂ ಹರಡದಂತೆ ಶಾಲಾ ಆವರಣವನ್ನು ಸ್ವಚ್ಛವಾಗಿಡಬೇಕು. ವಾರಕ್ಕೆರಡು ಬಾರಿ ಫಾಗಿಂಗ್ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅವರಿಗೆ ನಿರ್ದೇಶನ ನೀಡಿದರು.
ಹೆಚ್ಚಿನ ಅಂಕ ಗಳಿಸುವ ಸಂಕಲ್ಪ: ಶಾಲೆಯ 10ನೇ ತರಗತಿಗೆ ಭೇಟಿ ನೀಡಿದ ಅವರು ಕಿರು ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದ ಕು.ಹರ್ಷಿತ ಅಭಿನಂದಿಸಿದರು. ಉಳಿದ ವಿದ್ಯಾರ್ಥಿಗಳಿಗೂ ಸಹ ಇನ್ನೂ ಹೆಚ್ಚಿನ ಅಂಕಗಳಿಸಲು ಪ್ರಯತ್ನಿಸಬೇಕು. ಮುಂದಿನ 8 ತಿಂಗಳ ಕಾಲ ಸತತ ಅಭ್ಯಾಸ ಮಾಡಬೇಕು. ಉತ್ತಮ ಅಂಕ ಗಳಿಸುವ ಸಂಕಲ್ಪ ಮಾಡಬೇಕೆಂದು ಬುದ್ಧಿ ಮಾತು ಹೇಳಿದರು.
ನಂತರ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಹೊರರೋಗಿ ಚೀಟಿ ವಿತರಣಾ ಕೇಂದ್ರ, ಪ್ರಸವಪೂರ್ವ ಹಾಗೂ ಪ್ರಸವ ನಂತರದ ವಾರ್ಡು, ವಿಶೇಷ ವಾರ್ಡು, ಕೀಲು ಮತ್ತು ಮೂಳೆ ವಿಭಾಗ, ಐಸಿಯು, ಇಎನ್‍ಟಿ, ವಿಶೇಷ ಚಿಕಿತ್ಸಾ ಘಟಕ, ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿ ತಾಯಿ ಮತ್ತು ಮಕ್ಕಳ ಆರೋಗ್ಯ ವಿಚಾರಿಸಿದರು. ಪ್ರಕರಣಗಳ ದಾಖಲುವಹಿ ಪರಿಶೀಲಿಸುತ್ತಾ ನವಜಾತ ಶಿಶುಗಳಲ್ಲಿ ಜಾಂಡೀಸ್ ಕಂಡು ಬಂದರೆ ಫೋಟೋಥೆರಪಿ ಚಿಕಿತ್ಸೆ ನೀಡುವ ಬಗ್ಗೆ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ. ಗೌಡ ಅವರಿಂದ ಮಾಹಿತಿ ಪಡೆದರು.
ಪ್ರತ್ಯೇಕ ವಾರ್ಡ್ ಮೀಸಲಿಡಲು ಸೂಚನೆ: ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, ಶಿರಾ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಡೆಂಗ್ಯು ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಮೀಸಲಿಡಬೇಕು ಎಂದು ಸೂಚನೆ ನೀಡಲಾಗಿದೆ. ಶಿರಾ ನಗರ ಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್, ಚರಂಡಿಗಳನ್ನು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿರಂತರವಾಗಿ ಸ್ವಚ್ಛತೆ ಮಾಡುವ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ವಹಿಸಬೇಕು ನಿರ್ದೇಶನ ನೀಡಲಾಗಿದೆ ಎಂದರು.
ಡೆಂಗಿ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಸಾರ್ವಜನಿಕರು ಉದಾಸೀನ ಮಾಡದೆ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಪತ್ರಕರ್ತರೊಬ್ಬರು, ಪುರುಷರು ಹಾಗೂ ಮಹಿಳೆಯರಿಗೆ ಒಂದೇ ಕೊಠಡಿಯಲ್ಲಿ ಚುಚ್ಚು ಮದ್ದು ನೀಡಲಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಮನವಿ ಮಾಡಿದಾಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೂಡಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು. ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿಯಿಂದ ಅಧಿಕಾರಿಗಳು ತಬ್ಬಿಬ್ಬಾಗಿದ್ದು ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಿದ್ದದ್ದು ಕಂಡು ಬಂದಿತು.

About The Author

You May Also Like

More From Author

+ There are no comments

Add yours