ಪ್ರತಿಭಾವಂತ ವಿದ್ಯಾರ್ಥಿನಿಗೆ ಉಚಿತವಾಗಿ ಲ್ಯಾಪ್‍ಟಾಪ್ ಕೊಡಿಸಿದ ಬಿಜೆಪಿ ಕಾರ್ಪೋರೇಟರ್

1 min read

 

ತುಮಕೂರು, (ಜೂ.26) tumkurnews.in
ಈ ಕಾಲದಲ್ಲಿ ಎಲೆಕ್ಷನ್ ಮುಗಿದಮೇಲೆ ಕಾರ್ಪೋರೇಟರ್ ಕೈಗೆ ಸಿಗುವುದಿಲ್ಲ, ವಾರ್ಡ್ ಕಡೆಗೆ ತಲೆ ಹಾಕುವುದಿಲ್ಲ ಎಂಬ ಮಾತಿದೆ. ಆದರೆ ಆ ರೀತಿಯ ಮಾತುಗಳಿಗೆ ತದ್ವಿರುದ್ಧವಾಗಿ ತುಮಕೂರಿನ 15ನೇ ವಾರ್ಡ್ ಬಿಜೆಪಿ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಾ ಕುಮಾರ್ ನಿಲ್ಲುತ್ತಾರೆ.
ಹೌದು, ಓರ್ವ ಪ್ರತಿಭಾವಂತ, ಬಡ ವಿದ್ಯಾರ್ಥಿನಿಗೆ ಕಲಿಕೆಗೆ ಲ್ಯಾಪ್‍ಟಾಪ್ ಅವಶ್ಯಕತೆ ಇತ್ತು, ಆಕೆ ಮಹಾನಗರ ಪಾಲಿಕೆಯಿಂದ ಕೊಡಿಸುವಂತೆ ವಾರ್ಡ್ ಕಾರ್ಪೋರೇಟರ್ ಶ್ರೀಮತಿ ಗಿರಿಜಾ ಧನಿಯಾ ಕುಮಾರ್ ಅವರಿಗೆ ಮನವಿ ಮಾಡಿದ್ದಳು. ಆದರೆ ಸರಕಾರದ ನಿಯಮದಂತೆ ಎಸ್ಸಿ,ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಪಾಲಿಕೆಯಿಂದ ಲ್ಯಾಪ್‍ಟಾಪ್ ನೀಡಲು ಅವಕಾಶವಿರುವುದರಿಂದ ಈ ವಿದ್ಯಾರ್ಥಿನಿಗೆ ಪಾಲಿಕೆಯಿಂದ ಕೊಡಿಸುವುದು ಸಾಧ್ಯವಾಗಲಿಲ್ಲ. ಆದರೇ ಕಾರ್ಪೋರೇಟರ್ ಕೈ ಬಿಡಲಿಲ್ಲ. ಕೂಡಲೇ ಆ ವಿದ್ಯಾರ್ಥಿನಿ ಕೇಳಿದಕ್ಕಿಂತಲೂ ಹೆಚ್ಚು ಬೆಲೆಬಾಳುವ, ಉತ್ತಮ ಕಂಪನಿಯ ಹೊಚ್ಚ ಹೊಸ ಲ್ಯಾಪ್‍ಟಾಪ್ ಅನ್ನು ಉಚಿತವಾಗಿ ತಾವೇ ಕೊಡಿಸಿಬಿಟ್ಟರು!
ಅಲ್ಲದೇ ಆ ಲ್ಯಾಪ್‍ಟಾಪ್ ಅನ್ನು ಪ್ರಸಿದ್ಧ ಮಠಾಧೀಶರಾದ ಹಿರೇಮಠದ ಅಧ್ಯಕ್ಷ ಶ್ರೀ ಡಾ.ಶಿವಾನಂದ ಶಿವಾಚಾರ್ಯರ ಕೈಗಳಿಂದ ಕೊಡಿಸಿ, ವಿದ್ಯಾರ್ಥಿನಿಗೆ ಆಶೀರ್ವಾದ ಮಾಡಿಸಿದ್ದಾರೆ. ಇಂತಹ ಕಾರ್ಪೋರೇಟರ್‍ಗಳು ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಇರಬೇಕಲ್ಲವೇ? ಲ್ಯಾಪ್‍ಟಾಪ್ ವಿತರಿಸಿದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರು, ಪುರಾತನ ಕಾಲದಲ್ಲಿ ಗೋದಾನ, ಭೂ ದಾನ ಅತ್ಯಂತ ಶ್ರೇಷ್ಠ ಎಂಬ ಮಾತಿತ್ತು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಕಂಪ್ಯೂಟರ್ ದಾನ ಮಾಡುವುದು ಶ್ರೇಷ್ಠವಾಗಿದೆ ಎಂದು ಗಿರಿಜಾ ಧನಿಯಾ ಕುಮಾರ್ ಅವರ ಕಾರ್ಯವನ್ನು ಶ್ಲಾಘಿಸಿದರು.
ಗಿರಿಜಾ ಧನಿಯಾಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆನ್‍ಲೈನ್ ಶಿಕ್ಷಣ ಪದ್ದತಿ ಜಾರಿಗೆ ಬರುತ್ತಿದೆ. ಹೀಗಾಗಿ ಬಡ ಮಕ್ಕಳಿಗೆ ಉಚಿತವಾಗಿ ಲ್ಯಾಪ್‍ಟಾಪ್‍ಗಳನ್ನು ಸರ್ಕಾರವೇ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಮುಖಂಡ ಧನಿಯಾಕುಮಾರ್, ಕರಾಟೆ ಕೃಷ್ಣಪ್ಪ, ಭಾಸ್ಕರಾಚಾರ್ಯ, ಪ್ರಭಾಕರ್, ಸಮಿಉಲ್ಲಾ, ಶ್ರೀನಿವಾಸ್, ರಾಮಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

About The Author

You May Also Like

More From Author

+ There are no comments

Add yours