ಜುಲೈ 2ರಂದು ನಡೆಯುವುದು ಕೇವಲ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣವಲ್ಲ: ಟಿ.ಬಿ ಜಯಚಂದ್ರ

1 min read

 

ತುಮಕೂರು,(ಜೂ.25) tumkurnews.in

ಕೊರೊನಾ ಸಮಯದಲ್ಲಿ ಹಲವಾರು ಜನವಿರೋಧಿ ಕಾಯ್ದೆಗಳನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದು ಬಿಜೆಪಿ ಪಕ್ಷ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜುಲೈ 2 ರ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಪಿಎಂಸಿ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವು ಜನಪರ ಕಾಯ್ದೆಗಳಿಗೆ ತಿದ್ದುಪಡಿ ತಂದು, ಸದನದಲ್ಲಿ ಮಂಡಿಸಿ, ವಿಸ್ತ್ರೃತ ಚರ್ಚೆ ನಡೆಸದೆ, ವಿರೋಧಪಕ್ಷಗಳ ಅಭಿಪ್ರಾಯಗಳಿಗೂ ಮನ್ನಣೆ ನೀಡದೆ, ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿ, ಜನತೆಯನ್ನು ಕತ್ತಲೆಯಲ್ಲಿ ಇಡುವ ಕೆಲಸ ಮಾಡುತ್ತಿದೆ ಎಂದರು.
ಜುಲೈ 2 ರಂದು ನಡೆಯುವುದು ಕೇವಲ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಭೆಯಲ್ಲ. ಅದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಜನತೆಗೆ ತಿಳಿಸುವ ಜಾಗೃತಿ ಸಭೆಯಾಗಬೇಕು. ಉಳುವವನೇ ಭೂಮಿಯ ಒಡೆಯ ಎಂಬ ಕಾನೂನಿನ ಮೂಲಕ ಗೇಣಿದಾರರನ್ನು ಭೂಮಿಯ ಮಾಲೀಕನಾಗಿ ಕಾಂಗ್ರೆಸ್ ಪರಿವರ್ತಿಸಿದರೆ, ಕಂಪನಿ ಕೃಷಿಯ ಮೂಲಕ ಬಂಡವಾಳಿಗರನ್ನು ಭೂಮಿಯ ಒಡೆಯರಾಗಿಸಲು ಬಿಜೆಪಿ ಹೊರಟಿದೆ. ಇಂತಹ ವಿಚಾರಗಳು ಮೊದಲು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವರಿಕೆಯಾಗಬೇಕು. ಈ ಉದ್ದೇಶಕ್ಕೆ ಕೆ.ಪಿ.ಸಿ.ಸಿ.ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಬಳಕೆಯಾಗಬೇಕು ನುಡಿದರು.
ಸಭೆಯಲ್ಲಿ ಮಾಜಿ ಶಾಸಕ ಆರ್.ನಾರಾಯಣ್, ಜಿಪಂ ಸದಸ್ಯ ವಿ.ವೆಂಕಟೇಶ್, ವಾಲೆಚಂದ್ರು, ಕೊಂಡವಾಡಿ ಚಂದ್ರಶೇಖರ್ ಸೇರಿದಂತೆ ಎಲ್ಲಾ ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವೀಕ್ಷಕರುಗಳು ಉಪಸ್ಥಿತರಿದ್ದರು. ಇದೇ ವೇಳೆ ವೀಕ್ಷಕರುಗಳಿಗೆ ಲೋಕೇಷನ್ ಐಡೆಂಟಿಪೈ ಮಾಡುವ ಯಂತ್ರಗಳನ್ನು ವಿತರಿಸಲಾಯಿತು.

You May Also Like

More From Author

+ There are no comments

Add yours