ತುಮಕೂರು ನ್ಯೂಸ್.ಇನ್, ಜೂ.16:
ಸರ್ಕಾರದ ಆದೇಶದಂತೆ ಕೋವಿಡ್ 19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೊಳಗಾಗಿರುವ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಪರಿಹಾರವಾಗಿ 5 ಸಾವಿರ ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.
ಲಾಕ್‍ಡೌನ್‍ನಿಂದ ಮುಸುಕಿನ ಜೋಳಕ್ಕೆ ಬೇಡಿಕೆ ಇಲ್ಲದಂತಾಗಿದೆ. 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಸಂಕಷ್ಠಕ್ಕೊಳಗಾಗಿರುವ ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ ಸಮೀಕ್ಷೆಯ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ ವಿವರಗಳ ಆಧಾರದ ಮೇರೆಗೆ ಬೆಳೆ ಪರಿಹಾರವನ್ನು ಪಾವತಿಸಲಾಗುವುದು.
ಬೆಳೆ ಸಮೀಕ್ಷೆಯಲ್ಲಿರುವಂತೆ ಮುಸುಕಿನ ಜೋಳದ ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಕಛೇರಿಯ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು. ಬೆಳೆ ಪರಿಹಾರವನ್ನು ಡಿಬಿಟಿ ಪೋರ್ಟಲ್ ಮುಖಾಂತರ ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲಾಗುವುದು. ನಷ್ಠಕ್ಕೊಳಗಾದ ಮುಸುಕಿನ ಜೋಳ ಬೆಳೆದ ಪ್ರತಿ ರೈತರಿಗೆ 5000ರೂ.ಗಳ ಆರ್ಥಿಕ ನೆರವು ನೀಡಲಾಗುವುದು.
ಪ್ರದರ್ಶಿಸುವ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರು ನಮೂದಿಸಲಾಗಿದ್ದು, ಸದರಿ ರೈತರು ಫ್ರೂಟ್ಸ್ ಐಡಿ ಹೊಂದಿರದಿದ್ದಲ್ಲಿ, ತಕ್ಷಣ ಆಧಾರ್ ಕಾರ್ಡ್, ಪಹಣಿ(ಎಲ್ಲಾ ಸರ್ವೆ ನಂ. ಒಳಗೊಂಡ ಪಹಣಿಗಳು), ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ, ಒಂದು ಪಾಸ್ ಪೋರ್ಟ್ ಫೋಟೋ ಮತ್ತು ಪರಿಶಿಷ್ಟ ಜಾತಿ, ಪಂಗಡದ ರೈತರಾಗಿದಲ್ಲಿ ಆರ್.ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್‍ಐಡಿ ಯಲ್ಲಿ ನೋಂದಾಯಿಸಿಕೊಳ್ಳಬೇಕು. ಫ್ರೂಟ್ಸ್ ಐಡಿ ಯಲ್ಲಿ ನೋಂದಾಯಿಸಿದ ನಂತರ ಸಹಾಯಧನ ಪಾವತಿಸಲು ಕ್ರಮಕೈಗೊಳ್ಳಲಾಗುವುದು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಹೊಂದಿರಬೇಕು. ಪೌತಿ ಖಾತೆದಾರರಾಗಿದ್ದಲ್ಲಿ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
+ There are no comments
Add yours