ಶಾಲೆಗಳಿಗೆ ಕುಡಿಯುವ ನೀರು ಉಚಿತ; ಜಿಪಂ

1 min read

 

 

 

 

 

ತುಮಕೂರು ನ್ಯೂಸ್.ಇನ್(ಜೂ.18):
ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಆರ್.ಓ ಪ್ಲಾಂಟ್ ನಡೆಸಲಾಗುತ್ತಿದೆಯೊ, ಆ ಗ್ರಾಮದ ಶಾಲೆಯವರು ಸದರಿ ಆರ್.ಓ ಪ್ಲಾಂಟ್‍ನಿಂದ ನೀರು ಪಡೆದರೆ, ಆ ನೀರಿಗೆ ಹಣ ಪಡೆಯುವಂತಿಲ್ಲ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚೌಡಪ್ಪ ಎರಡು ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಿಗೆ ತಿಳಿಸಿದರು.
ಜಿಪಂ ಸಭಾಂಗಣದಲ್ಲಿಂದು ನಡೆದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರು ಗ್ರಾ.ಪಂಗೆ ಸೇರಿದ್ದು, ಸರಕಾರದ ನೀರಾಗಿರುವ ಕಾರಣ ಶಾಲೆಗಳಿಂದ ಹಣ ಪಡೆಯದಂತೆ ಎಲ್ಲಾ ಪ್ಲಾಂಟ್‍ಗಳ ನಿರ್ವಹಣೆ ಮಾಡುತ್ತಿರುವವರಿಗೆ ಗ್ರಾಮೀಣ ನೀರು ಸರಬರಾಜು ಇಲಾಖೆ ಹಾಗೂ ಡಿಡಿಪಿಐಗಳು ಪತ್ರ ಬರೆದು ಸೂಚನೆ ನೀಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡರು.
ಕಾಮಗಾರಿ ಮುಗಿಸಲು ಸೂಚನೆ: ಕಳೆದ 2018-19ನೇ ಸಾಲಿನಲ್ಲಿ 1347 ಲಕ್ಷ ರೂ.ಗಳಲ್ಲಿ ಸುಮಾರು 327 ಶಾಲೆಗಳ ದುರಸ್ತಿ ಮಾಡಲು ಪಂಚಾಯತ್ ರಾಜ್ ಇಂಜಿನಿಯರಿಂಗ್ ಮತ್ತು ಇನ್ನಿತರ ಏಜೆನ್ಸಿಗಳಿಗೆ ನೀಡಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದರೆ, ಇನ್ನು ಕೆಲವು ಕಾಮಗಾರಿಗಳು ಆರಂಭವೇ ಆಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ನಿರ್ಮಾಣ ಸಂಸ್ಥೆಗಳು ಸಮನ್ವಯತೆ ಸಾಧಿಸಿ, ಬೇಗ ಕೊಠಡಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಖಾಸಗಿಯಿಂದ ಶಾಲೆ ನಿರ್ಮಾಣಕ್ಕೆ ಆಸ್ತು: ಕೋರ ಗ್ರಾಮದಲ್ಲಿ ಸುಮಾರು 1.48 ಕೋಟಿ ರೂ.ಗಳಲ್ಲಿ ಅಲ್ಲಿನ ಸರಕಾರಿ ಶಾಲೆಯನ್ನು ಗ್ರಾಮದ ದಾನಿಗಳು ತಮ್ಮ ತಂದೆ, ತಾಯಿ ಜ್ಞಾಪಕಾರ್ಥವಾಗಿ ಕಟ್ಟಿಸಿಕೊಡಲು ಮುಂದೆ ಬಂದಿದ್ದು, ಸರಕಾರದ ನಿಯಮಗಳ ಅನುಸಾರ, ಇಲಾಖೆಯ ತಾಂತ್ರಿಕ ಮೇಲ್ವಿಚಾರಣೆಯಲ್ಲಿ ಸುಮಾರು 14 ಕೊಠಡಿಗಳನ್ನು ಕಟ್ಟಿಸಿಕೊಡಲು ಅನುಮತಿಯನ್ನು ಸಭೆ ಸೂಚಿಸಿತು.
ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಮಂಜುಳ, ಗಾಯಿತ್ರಿಬಾಯಿ, ಜಗನ್ನಾಥ್, ತಿಮ್ಮಯ್ಯ, ರಾಮಕೃಷ್ಣ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಅವರು ಉಪಸ್ಥಿತರಿದ್ದರು.

You May Also Like

More From Author

+ There are no comments

Add yours