ವಿವಿಧ ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರ ಒತ್ತಾಯ

1 min read

 

 

 

 

 

ತುಮಕೂರು ನ್ಯೂಸ್.ಇನ್(ಜೂ.17)
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಅವರ ಮೂಲಕ ಬುಧವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಆಂಗ್ಲಬಾಷಾ ಶಿಕ್ಷಕರು (ಪಿಎಸ್‍ಟಿ) ವಿಜ್ಞಾನ ಶಿಕ್ಷಕರು(ಪಿಎಸ್‍ಟಿ), ಎಲ್‍ಪಿಎಸ್ ಮತ್ತು ಎಚ್‍ಪಿಎಸ್ ಶಾಲೆ ಆಯ್ಕೆ ಮಾಡಿಕೊಳ್ಳಲು ಆಂಗ್ಲಭಾಷಾ ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು, ಅಂತರ್‍ಘಟಕ ವರ್ಗಾವಣೆ ನಿಗದಿಪಡಿಸಿರುವ ಶೇ.2ರ ಮಿತಿಯನ್ನು ಶೇ.6ಕ್ಕೆ ಹೆಚ್ಚಿಸಬೇಕು, ಶೇ.25 ಖಾಲಿ ಹುದ್ದೆಗಳಿರುವ ತಾಲ್ಲೂಕಿನಲ್ಲಿ ಶಿಕ್ಷಕರಿಗೆ ವರ್ಗಾವಣೆ ಅವಕಾಶವಿಲ್ಲ ಎಂಬ ನಿಯಮವನ್ನು ರ್ದದುಪಡಿಸಬೇಕು ಎಂದರು.
ಪತಿ, ಪತ್ನಿ ಪ್ರಕರಣ ಪರಸ್ಪರ ವರ್ಗಾವಣೆಗಳನ್ನು ಸೇವಾವಧಿಯಲ್ಲಿ ಕನಿಷ್ಠ ಮೂರು ಬಾರಿಗೆ ಅವಕಾಶ ನೀಡಬೇಕು, ವಲಯ ವರ್ಗಾವಣೆ ಎ. ವಲಯಕ್ಕೆ ಸೀಮಿತ ಮಾಡದೆ ಎಲ್ಲಾ ವಲಯದ ಶಿಕ್ಷಕರಿಗೆ ವಲಯ ವರ್ಗಾವಣೆ ಎಂಬ ನಿಯಮ ಜಾರಿಗೊಳಿಸಬೇಕು, ಕಳೆದ ಬಾರಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೊಂಡಿರುವವರಿಗೆ ಈ ಬಾರಿ ಪ್ರಥಮ ಆಧ್ಯತೆ ಮೇರೆಗೆ ಎಲ್ಲಾ ವಿಧದ ವರ್ಗಾವಣೆಗೆ ಅವಕಾಶ ನೀಡಬೇಕು, ಹಿಂದಿ ಶಿಕ್ಷಕರಿಗೆ ಕೌನ್ಸಿಲಿಂಗ್‍ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಖಾಲಿ ಹುದ್ದೆಗಳ ಸೃಷ್ಠಿಮಾಡಬೇಕು ಎಂದು ಮನವಿ ಮಾಡಿದರು.
10 ವರ್ಷಗಳವರೆಗೂ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಒಮ್ಮೆಯೂ ವರ್ಗಾವಣೆಯಾಗದ ಶಿಕ್ಷಕರಿಗೆ ಅವರ ಮೂಲಕ ಜಿಲ್ಲೆಗೆ ವರ್ಗಾವಣೆ ಹೊಂದಲು ಅವಕಾಶ ಕಲ್ಪಿಸಬೇಕು, 2018-19ನೇ ಸಾಲಿನ ಕಡ್ಡಾಯ ವರ್ಗಾವಣೆಗೆ ಸಂಬಂಧಿಸಿದಂತೆ ಬಿ.ಆರ್.ಪಿ., ಸಿ.ಆರ್.ಪಿ.ಗಳಿಗೆ ಈ ಬಾರಿ ಪ್ರಥಮ ಆಧ್ಯತೆ ವರ್ಗಾವಣೆ ನೀಡಬೇಕು, ದಿವ್ಯಾಂಗ ಶಿಕ್ಷಕರಿಗೆ ಸೇವಾವಧಿಯಲ್ಲಿ ಒಂದು ಬಾರಿ ವರ್ಗಾವಣೆ ಎನ್ನುವ ನಿಯಮ ರದ್ದುಪಡಿಸಬೇಕು ಎಂದು ಹೇಳಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಜಿ.ತಿಮ್ಮೇಗೌಡ ಮಾತನಾಡಿ, ಕೋರಿಕೆ ವರ್ಗಾವಣೆ ಬಯಸಿದ ಶಿಕ್ಷಕರಿಗೆ ಆಧ್ಯತಾ ಪಟ್ಟಿಯನ್ನು ತಯಾರಿಸುವಾಗ ಬೇರೆ ಬೇರೆ ವಿಧದ ಕೋರಿಕೆ ವರ್ಗಾವಣೆಗೆ ಪ್ರತ್ಯೇಕ ಶೇಕಡವಾರು ನಿಗಧಿಗೊಳಿಸುವುದು, ಇದರಿಂದ ಸೇವಾ ಹಿರಿತನಕ್ಕೆ ಆಧ್ಯತೆ ದೊರೆಯಲಿದೆ, ಪತಿ ಪತ್ನಿ ವರ್ಗಾವಣೆಯಲ್ಲಿ ಹತ್ತಿರದ ತಾಲ್ಲೂಕಿಗೆ ಅಥವಾ ಜಿಲ್ಲೆಗೆ ಹೋಗಲು ಅವಕಾಶ ಮಾಡಿಕೊಡಬೇಕು, ವರ್ಗಾವಣೆಯಲ್ಲಿ ನಿವೃತ್ತಿಗೆ 5 ವರ್ಷ ಬದಲಾಗಿ 3 ವರ್ಷಕ್ಕೆ ನಿಗಧಿಗೊಳಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಕ ಅಥವಾ ಆತನ ಪತ್ನಿ ಅಥವಾ ಆತನ ಮಕ್ಕಳು ಅಥವಾ ತಂದೆ, ತಾಯಿ ಕಾಯಿಲೆಯಿಂದ ಬಳಲುತ್ತಿದ್ದ ಶಿಕ್ಷಕರಿಗೆ ಆಧ್ಯತೆ ನೀಡಬೇಕು, ವಿಧವಾ ಪ್ರಕರಣಕ್ಕೆ ಸಂಬಂಧಿಸಿದಂತೆ 12 ವರ್ಷದೊಳಗೆ ಇರುವ ಮಕ್ಕಳ ವಿಧವೆಯರಿಗೆ ಎಂಬ ಅಂಶವನ್ನು ಕೈಬಿಟ್ಟು ಎಲ್ಲಾ ವಿಧವೆಯರಿಗೆ ವರ್ಗಾವಣೆ ಮತ್ತು ಹೆಚ್ಚುವರಿಯಲ್ಲಿ ವಿನಾಯಿತಿ ನೀಡಬೇಕು, 21(1) 22(1) ನಿಯಮಕ್ಕೆ ಸಂಬಂಧಿಸಿದಂತೆ ಯಾವ ತಾಲ್ಲೂಕಿನಲ್ಲಿ ಶೇ.25 ಕ್ಕಿಂತ ಹೆಚ್ಚಿಗೆ ಹುದ್ದೆಗಳು ಖಾಲಿ ಇರುವ ತಾಲ್ಲೂಕಿನಿಂದಲೂ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು, ಕಡ್ಡಾಯ ವರ್ಗಾವಣೆ ಪತಿ, ಪತ್ನಿ ಪ್ರಕರಣಕ್ಕೆ ವಿನಾಯಿತಿ ನೀಡಬೇಕು, ಹೆಚ್ಚುವರಿ ಕಡ್ಡಾಯ ವರ್ಗಾವಣೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ವಯೋಮಿತಿಯನ್ನು 55 ವರ್ಷಗಳಿಗೆ ನಿಗಧಿ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಅವರೊಂದಿಗೆ ಸಂಘದ ಪದಾಧಿಕಾರಿಗಳು ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಸಿ.ಶಿವಕುಮಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಚ್.ಬಿ. ರವಿಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಹಾಜರಿದ್ದರು.

You May Also Like

More From Author

+ There are no comments

Add yours