ಸರ್ಕಾರದ ಯೋಜನೆಗಳನ್ನು ವಿಫಲಗೊಳಿಸುತ್ತಿರುವ ಒನ್ ಸೆಂಟರ್’ಗಳು!
ಸರ್ವರ್ ಸಮಸ್ಯೆಗೆ ಪರಿಹಾರ ದೊರೆಯದಿರುವುದು ನಾಚಿಕೆಗೇಡು
– ಅಶೋಕ್ ಆರ್.ಪಿ
ತುಮಕೂರು: ಸರ್ಕಾರದ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಿಎಸ್’ಸಿ(ಸಾಮಾನ್ಯ ಸೇವಾ ಕೇಂದ್ರ) ಸೆಂಟರ್, ಗ್ರಾಮ ಒನ್, ಕರ್ನಾಟಕ ಒನ್ ಸೇರಿದಂತೆ ಒನ್ ಸೆಂಟರ್’ಗಳಿಗೆ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಅರ್ಹ ಫಲಾನುಭವಿಗಳು ಅವಕಾಶ ವಂಚಿತರಾಗುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ಇದೀಗ ವಿವಿಧ ಸರ್ಕಾರಿ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದೆ. ಅದರಲ್ಲಿ ಪ್ರಮುಖವಾಗಿ ಸಬ್ಸಿಡಿ ಯೋಜನೆಯಡಿ ಕಾರು ಖರೀದಿ, ವಿಶ್ವಕರ್ಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ನೀಡಲು ಅರ್ಜಿ ಕರೆದಿದೆ. ದುರಾದೃಷ್ಟವಶಾತ್ ಈ ಸೌಲಭ್ಯಗಳಿಗೆ ಮುಕ್ತವಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಫಲಾನುಭವಿಗಳು ಸಿಎಸ್’ಸಿ ಸೆಂಟರ್ ಅಥವಾ ಒನ್ ಸೆಂಟರ್’ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಆಸಕ್ತರು ಈ ಕೇಂದ್ರಗಳನ್ನು ಹುಡುಕಿಕೊಂಡು ಅಲೆಯುವಂತಾಗಿದೆ.
ಬಾಗಿಲು ಮುಚ್ಚಿವೆ!: ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಆರಂಭದಲ್ಲಿ ಭಾರೀ ಉತ್ಸಾಹದಿಂದ ಆರಂಭವಾದ ಗ್ರಾಮ ಒನ್ ಕೇಂದ್ರಗಳು ಕ್ರಮೇಣವಾಗಿ ಬಾಗಿಲು ಮುಚ್ಚಿವೆ. ಬಹುತೇಕ ಗ್ರಾಮ ಒನ್ ಫ್ರಾಂಚೈಸಿದಾರರು ಕೇವಲ ಗ್ರಾಮ ಒನ್ ಐ.ಡಿ ಪಡೆಯಲು ಮಾತ್ರ ತಾತ್ಕಾಲಿಕವಾಗಿ ಒನ್ ಸೆಂಟರ್ ತೆರೆದಿದ್ದು, ಐ.ಡಿ ಸಿಗುತ್ತಿದ್ದಂತೆ ಕೇಂದ್ರದ ಬಾಗಿಲು ಮುಚ್ಚಿದ್ದಾರೆ. ಉಳಿದ ಕೆಲವರು ನಷ್ಟ ಅನುಭವಿಸಿ ಬಾಗಿಲು ಮುಚ್ಚಿದ್ದಾರೆ. ಹೀಗಾಗಿ ಗ್ರಾಮ ಒನ್ ಪರಿಕಲ್ಪನೆ ವಿಫಲವಾಗಿದ್ದು, ಜನಸಾಮಾನ್ಯರು ಆನ್ ಲೈನ್ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ.
ಕರ್ನಾಟಕ ಒನ್ ಜನಸಂದಣಿ: ಇನ್ನೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕರ್ನಾಟಕ ಒನ್ ಸೇರಿದಂತೆ ಒನ್ ಸೆಂಟರ್’ಗಳು ಸದಾ ಜನಸಂದಣಿಯಿಂದ ಕೂಡಿರುತ್ತದೆ. ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯ ಕೊರತೆ ಇರುತ್ತದೆ. ಹೀಗಾಗಿ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅಲೆದಾಡುವಂತಾಗಿದೆ ಎನ್ನುವುದು ಫಲಾನುಭವಿಗಳ ಅಳಲು.
ಸರ್ವರ್ ಸಮಸ್ಯೆಗೆ ಮುಕ್ತಿ ಇಲ್ಲವೇ?: ರಾಜ್ಯದಲ್ಲಿ ಆನ್ ಲೈನ್ ಸೇವೆಗಳನ್ನು ಪಡೆಯಲು ಸರ್ವರ್ ಸಮಸ್ಯೆ ಬೆಂಬಿಡದ ಭೂತದಂತೆ ಕಾಡುತ್ತಿದೆ. ಇದೀಗ ಎಸ್.ಎಸ್.ಪಿ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಅರ್ಜಿ ಕರೆದಿದೆ. ಅದೃಷ್ಟವಶಾತ್ ಈ ಅರ್ಜಿಗಳನ್ನು ವಿದ್ಯಾರ್ಥಿಗಳು ಸೇವಾಸಿಂಧುವಿನಲ್ಲಿ ತಾವೇ ಮುಕ್ತವಾಗಿ ಶುಲ್ಕ ರಹಿತವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಕಳೆದೊಂದು ವಾರದಿಂದ ಸೇವಾಸಿಂಧು ಸರ್ವರ್ ಸಮಸ್ಯೆಯಿಂದ ಬಳಲುತ್ತಿದೆ. ಹೀಗಾಗಿ ಮುಕ್ತ ಅವಕಾಶ ಇದ್ದರೂ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಸರ್ವರ್ ಸಮಸ್ಯೆಗೆ ಮುಕ್ತಿ ಎಂದು ಎನ್ನುವುದು ಪ್ರಶ್ನೆಯಾಗಿದೆ.
ನಾಚಿಕೆಗೇಡಿನ ಸಂಗತಿ: ರಾಜ್ಯದಲ್ಲಿ ಯಾವ್ಯಾವುದಕ್ಕೋ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ ಸರ್ವರ್ ಸಮಸ್ಯೆ ಬಗೆಹರಿಸಿಕೊಳ್ಳಲು ಗಮನ ಹರಿಸದಿರುವುದು ವಿಪರ್ಯಾಸ. ಮುಖ್ಯವಾಗಿ ಒಂದು ಆನ್ ಲೈನ್ ಅರ್ಜಿ ಸಲ್ಲಿಸಲು ರಾಜ್ಯದಲ್ಲಿ ವಾರಗಟ್ಟಲೆ ಪರದಾಡುವಂತಹ ಹೀನಾಯ ಪರಿಸ್ಥಿತಿ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಕದಂಬ ಬಾಹುವಿನಿಂದ ಮುಕ್ತಿ ಸಿಗಲಿ: ಮುಖ್ಯವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್, ಸಿಎಸ್’ಸಿ ಸೆಂಟರ್’ಗಳಂತಹ ಒನ್ ಸೆಂಟರ್’ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆಯನ್ನು ತೆಗೆದುಹಾಕಬೇಕು. ಸಾರ್ವಜನಿಕರು ಮುಕ್ತವಾಗಿ ಸೇವಾಸಿಂಧು ತಂತ್ರಾಂಶದಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಲಭಿಸುವುದರಿಂದ ಸರ್ವರ್ ಸಮಸ್ಯೆಯೂ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಕ್ರಮ ಕೈಕೊಳ್ಳಬೇಕಿದೆ. ಇಲ್ಲವಾದಲ್ಲಿ ಒನ್ ಸೆಂಟರ್’ಗಳ ಕದಂಬ ಬಾಹುವಿನಲ್ಲಿ ಅರ್ಹ ಫಲಾನುಭವಿಗಳು ಅವಕಾಶ ವಂಚಿತರಾಗುವ ಮೂಲಕ ಸರ್ಕಾರದ ಯೋಜನೆಗಳು ವಿಫಲವಾಗಲು ಕಾರಣವಾಗುತ್ತದೆ.
ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ನಂಬರ್ ಒನ್
+ There are no comments
Add yours