ನಿವೇಶನ (ಸೈಟ್) ಕೊಳ್ಳುವಾಗ ಈ ವಿಷಯಗಳ ಬಗ್ಗೆ ಎಚ್ಚರವಿರಲಿ
– ಐಎಎಸ್ ಅಧಿಕಾರಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಅಪ್ಪಾಜಿ ಗೌಡ ಅವರ ಬರಹ
“ಮನೆ ಕಟ್ಟಿ ನೊಡು ಮದುವೆ ಮಾಡಿ ನೊಡು” ಎಂಬ ಗಾದೆ ಹಿಂದಿನಿಂದಲು ಚಾಲ್ತಿಯಲ್ಲಿದೆ. ಒಂದು ಸೈಟ್ ಕೊಂಡು ಮನೆಕಟ್ಟುವುದು ಜೀವನದ ಒಂದು ಮಹತ್ವಾಕಾಂಕ್ಷೆಯ ಕನಸು. ಆ ಕನಸನ್ನು ಸಕಾರಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಜೀವನ ಪರ್ಯಂತ ದುಡಿದು ಅದರಲ್ಲಿ ಅಲ್ಪ ಸ್ವಲ್ಪ ಕೂಡಿಹಾಕುತ್ತಾ ಒಂದು ನಿವೇಶನ ಕೊಳ್ಳುತ್ತಾರೆ. ನಿವೇಶನ ಕೊಳ್ಳುವಾಗ ಕಡಿಮೆ ಹಣಕ್ಕೆ ದೊರೆಯುವ ನಿವೇಶನಗಳ ಕಡೆಯೇ ನಮ್ಮ ಗಮನವಿರುತ್ತದೆ. ಅದು ಸಹಜ ಮನಸ್ಥಿತಿ ಕೂಡ ಹೌದು.
ಬೆಂಗಳೂರು ಜಿಲ್ಲಾಧಿಕಾರಿಯಾಗಿ ಬಂದ ನಂತರ ಪ್ರತಿನಿತ್ಯ ಕಚೇರಿಗೆ ಬರುವ ದೂರು, ಅನಧಿಕೃತ ಬಡಾವಣೆ ಮಾಡ್ತಿದಾರೆ ಕ್ರಮಕೈಗೊಳ್ಳಿ ಅನ್ನೊ ದೂರು. ಹೌದು ಕ್ರಮ ಕೈಗೊಳ್ಳಬಹುದು ಆದರೆ ಅನಧಿಕೃತ ಲೇ ಔಟ್ ಮಾಡಿ ಮಾರಾಟ ಮಾಡಿ ಹೊಗಿರುತ್ತಾರೆ. ಕ್ರಮ ಕೈಗೊಂಡಾಗ ಬಲಿಯಾಗುವುದು ಅಲ್ಪಸ್ವಲ್ಪ ದುಡಿದಿದ್ದರಲ್ಲಿ ಕೂಡಿಟ್ಟು ಕೊಂಡುಕೊಂಡಿದ್ದ ಬಡ ನಿವೇಶನದಾರರು ಮಾತ್ರ. ಹಲವಾರು ಬಾರಿ ಕೆಲವರು ಕಚೇರಿಗೆ ಬಂದು ನನ್ನ ನಿವೇಶನವನ್ನು ಅತಿಕ್ರಮಿಸಿದ್ದಾರೆಂದು ಅಥವಾ ನಮಗೆ ನಿವೇಶನ ಮಾರಾಟ ಮಾಡಿ ಪಹಣಿಯಲ್ಲು ವಿಸ್ತೀರ್ಣ ಉಳಿಸಿಕೊಂಡು ಮಾರಾಟ ಮಾಡಿದ ಸಂಧರ್ಭಗಳಲ್ಲಿ ಜಮೀನು ನನ್ನ ಹೆಸರಿನಲ್ಲಿದೆಯೆಂದು ಕೋರ್ಟ್ ಕಚೇರಿಗಳಿಗೆ ಅಲೆಸುವ ಅಥವಾ ಹಿಂಸೆ ಕೊಟ್ಟು ಜಾಗ ಖಾಲಿ ಮಾಡಿಸುವ ಗಟ್ಟಿ ಜನರ ಬಗ್ಗೆ ದೂರುಗಳು ಬರುತ್ತಲೆ ಇರುತ್ತವೆ. ನಾವು ಅಧಿಕಾರಿಗಳಾಗಿ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗುವುದನ್ನು ಕಾಣುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ ತಿಳಿದಿರಲೆಂದು ಗಮನಕ್ಕೆ ಇದೊಂದು ಮನವಿ.
ಕಡಿಮೆ ಬೆಲೆಗೆ ಸಿಗುವ ನಿವೇಶನಗಳೆಂದರೆ ಒಂದು ರೆವಿನ್ಯೂ ನಿವೇಶನ. ಅದಕ್ಕಿಂತ ದುಬಾರಿ ಎರಡನೆಯದು ಡಿಸಿ ಕನ್ವರ್ಷನ್ ನಿವೇಶನ, ಅದಕ್ಕಿಂತಲೂ ಸ್ವಲ್ಪ ದುಬಾರಿ ಅಪ್ರೂವ್ಡ್ ಲೇ ಔಟ್ ಸೈಟ್. ಅಪ್ರೂವ್ಡ್ ಲೇ ಔಟ್ ಸೈಟ್ ಹೊರತುಪಡಿಸಿದರೆ ಉಳಿದ ನಿವೇಶನಗಳನ್ನು ಕೊಂಡಿದ್ದರೆ ಅದು ನಿಯಮ ಬಾಹೀರವಾದದ್ದು, ಅದು ಹೇಗೆ? ಎಂಬುದನ್ನು ತಿಳಿಸುವುದೆ ಈ ಬರಹದ ಉದ್ದೇಶ.
1. ಅನುಮೋದಿತ ಬಡಾವಣೆಯ ನಿವೇಶನಗಳು: ಕೃಷಿ ಭೂಮಿಯನ್ನು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು, ನಂತರ ಸಂಬಂಧಿಸಿದ ಯೋಜನ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆದು, ಅನುಮೋದಿತ ನಕ್ಷೆಯಂತೆ ರಸ್ತೆ, ಸಿ.ಎ ಸೈಟ್ ಮತ್ತು ಪಾರ್ಕ್ ಜಾಗಗಳನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ ಬಿಬಿಎಂಪಿಗೆ ಶೇ.45 ರಷ್ಟನ್ನು (ಅಂದಾಜು) ಬಿಟ್ಟುಕೊಟ್ಟ ನಂತರ ಉಳಿದ ನಿವೇಶನಗಳಿಗೆ ಮಾತ್ರ ಖಾತೆದಾರನಿಗೆ ಹಕ್ಕುಳ್ಳವನಾಗಿದ್ದು, ಆ ನಿವೇಶನಗಳನ್ನು ಮಾತ್ರ ಮಾರಾಟ ಮಾಡಬಹುದಾಗಿದೆ. ಖರೀದಿದಾರನು ಭೂ ಪರಿವರ್ತನಾ ಆದೇಶ ಮತ್ತು ಅನುಮೋದಿತ ನಕ್ಷೆ ಮಾರಾಟದಾರನಿಗೆ ಇರುವ ಹಕ್ಕುಗಳನ್ನು ಪರಿಶೀಲಿಸಿಕೊಂಡು ನಿವೇಶನ ಖರೀದಿಸಿದಲ್ಲಿ ಕಾನೂನಿನಲ್ಲಿ ಮಾನ್ಯತೆ ಪಡೆದ ನಿವೇಶನಗಳಾಗುತ್ತವೆ. ಅಂತಹ ನಿವೇಶನಗಳು ‘ಎ’ ಖಾತೆ ದಾಖಲಿಸಲಾಗುತ್ತದೆ. ಮನೆಕಟ್ಟಲು ಪ್ಲ್ಯಾನ್ ಅನುಮೊದನೆ ದೊರೆಯುತ್ತದೆ. ಈ ಎಲ್ಲಾ ಕ್ರಮವಹಿಸುವುದರಿಂದ ಮಾರಾಟದಾರನಿಗೆ ಸಮಯ, ಅಭಿವೃದ್ದಿ ವೆಚ್ಚ ಹಾಗೂ ಅನುಮೋದಿತ ನಕ್ಷೆಯಂತೆ ರಸ್ತೆ, ಸಿಎ, ಸೈಟ್ ಮತ್ತು ಪಾರ್ಕ್ ಜಾಗವನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ ಬಿಬಿಎಂಪಿಗೆ ಶೇ.45 ರಷ್ಟನ್ನು (ಅಂದಾಜು) ಬಿಟ್ಟುಕೊಡುವುದರಿಂದ ನಿವೇಶನಗಳ ಬೆಲೆ ಹೆಚ್ಚಾಗಿರುತ್ತದೆ. ಆದರೆ ಯಾವುದೇ ಕಾನೂನಾತ್ಮಕ ಸಮಸ್ಯೆಗಳು ಬರುವುದಿಲ್ಲ ಹಾಗೂ ಪ್ಲಾನಡ್ ಲೇ ಔಟ್ ಆಗಿರುತ್ತದೆ. ಇಂತಹ ನಿವೇಶನಗಳನ್ನು ಕೊಳ್ಳಬಹುದಾಗಿರುತ್ತದೆ.
ನಿವೇಶನ ರಹಿತರಿಗೆ ಸಿಹಿ ಸುದ್ದಿ; ಜಿಲ್ಲೆಗೆ 700 ಎಕರೆ ಭೂಮಿ ಮಂಜೂರು
2. ಡಿಸಿ ಕನ್ವರ್ಷನ್ ಸೈಟ್ ಗಳು:
ಕೃಷಿ ಭೂಮಿಯನ್ನು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಂಡು, ನಂತರ ಸಂಬಂದಿಸಿದ ಯೋಜನ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆಯದೆ ಹಾಗೆ ನಿವೇಶನಗಳಾಗಿ ಅಭಿವೃದ್ಧಿಪಡಿಸಿ ಡಿ.ಸಿ ಕನ್ವರ್ಷನ್ ಸೈಟ್ ಗಳೆಂದು ಮಾರಾಟ ಮಾಡುತ್ತಾರೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಂಡು, ನಂತರ ಸಂಬಂಧಿಸಿದ ಯೋಜನ ಪ್ರಾಧಿಕಾರದಿಂದ ಬಡಾವಣೆಯ ನಕ್ಷೆಯನ್ನು ಅನುಮೋದನೆ ಪಡೆದು, ಅನುಮೋದಿತ ನಕ್ಷೆಯಂತೆ ರಸ್ತೆ, ಸಿ.ಎ ಸೈಟ್ ಮತ್ತು ಪಾರ್ಕ್ ಜಾಗವನ್ನು ರಿಲಿಂಕ್ವೀಸ್ ಡೀಡ್ ಮೂಲಕ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ ಬಿಬಿಎಂಪಿಗೆ ಶೇ.45 ರಷ್ಟನ್ನು (ಅಂದಾಜು) ಬಿಟ್ಟುಕೊಡಬೇಕಾಗುವುದರಿಂದ ಶೇ.45 ರಷ್ಟು ಜಮೀನು ಕಡಿಮೆಯಾಗುತ್ತದೆ ಎಂದು ದುರಾಸೆಯಿಂದ ರಸ್ತೆ, ಪಾರ್ಕ್ ಸಿ.ಎ ಸೈಟ್ ನೀಡಬೇಕಾದದ್ದನ್ನು ಸೇರಿಸಿ ಮಾರಾಟ ಮಾಡುತ್ತಾರೆ. ಲೇ ಔಟ್ ಅನುಮೊದನೆ ಆಗದ್ದರಿಂದ ತಾವೆ ತಯಾರಿಸಿಕೊಂಡ ಸ್ಕೆಚ್ ತೋರಿಸಿ ಒಂದೆ ನಿವೇಶನ ಹಲವರಿಗೆ ಮಾರಾಟ ಮಾಡಿರುವ ಸಾವಿರಾರು ಪ್ರಕರಣಗಳಿವೆ. ರೆಸಿಡೆನ್ಸಿಯಲ್ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವುದರಿಂದ ಖರೀದಿದಾರರು ಸ್ವಲ್ಪ ಕಡಿಮೆ ದರಕ್ಕೆ ಸಿಗುತ್ತವೆಂದು ಡಿಸಿ ಕನ್ವರ್ಷನ್ ಸೈಟಗಳೆಂದು ಖರೀದಿಸಿ ಮೊಸ ಹೊಗುತ್ತಾರೆ. ಇಂತಹ ನಿವೇಶನಗಳಿಗೆ ‘ಎ’ ಖಾತಾ ಮಾಡುವುದಾಗಲಿ ಅಥವಾ ಮನೆ ಕಟ್ಟುವಾಗ ಮನೆಯ ಪ್ಲ್ಯಾನ್ ಗಾಗಲಿ ಸ್ಥಳೀಯ ಸಂಸ್ಥೆಗಳು ಅನುಮೋದನೆ ನೀಡುವುದಿಲ್ಲ. ಒಂದು ಪಕ್ಷ ‘ಎ’ ಖಾತ ಮಾಡಿದ್ದರು ಅದು ಕಾನುನೂ ಬಾಹೀರವಾದದ್ದೆ ಆಗಿರುತ್ತದೆ. ಕೆಲವರು ಎರಡು ಎಕರೆ ಭೂ ಪರಿವರ್ತನೆ ಮಾಡಿಸಿದ್ದರೆ, ಸ್ಥಳೀಯ ಸಂಸ್ಥೆಗಳಲ್ಲಿ ಜಮೀನುದಾರನ ಹೆಸರಿಗೆ ‘ಎ’ ಖಾತ ದಾಖಲಿಸಿ, ಅದನ್ನೆ ಎ ಖಾತ ಸೈಟ್’ಗಳೆಂದು
ರಸ್ತೆ, ಪಾರ್ಕ್ ಸಿ.ಎ ಸೈಟ್ ನೀಡಬೇಕಾದದ್ದನ್ನು ಸೇರಿಸಿ ಮಾರಾಟ ಮಾಡುತ್ತಾರೆ. ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಜಾಣ ಕುರುಡರಂತೆ ಅವುಗಳಿಗೆ ಖಾತೆ ದಾಖಲಿಸಿಕೊಟ್ಟು ಸರಕಾರಕ್ಕೆ ಸೇರಬೇಕಾದ ಅಂದಾಜು ಶೇ.45 ರಷ್ಟು ಜಮೀನನ್ನು ಸೇರಿಸಿ ಮಾರಾಟ ಮಾಡಿ ಖಾತೆ ದಾಖಲಿಸಲು ಸಹಕರಿಸುತ್ತಾರೆ. ದೂರುಗಳು ಬಂದು ಹಗರಣಗಳಾದಾಗ ಆ ಅಧಿಕಾರಿಗೆ ಶಿಕ್ಷೆ ಆಗಬಹುದು. ಆದರೆ ಅಲ್ಲಿ ಮಾರಾಟ ಮಾಡಿದ ವ್ಯಕ್ತಿ ಮಾರಾಟ ಮಾಡಿ ಹೊಗಿರುತ್ತಾನೆ. ಅಂತಿಮವಾಗಿ ಸೈಟ್ ಕಳೆದುಕೊಂಡು ಶಿಕ್ಷೆ ಅನುಭವಿಸುವುದು ಸೈಟ್ ಖರೀದಿಸಿದ ಬಡ ನಿವೇಶನದಾರರೆ.
ಸ್ವಂತ ನಿವೇಶನ ಇದೆಯೇ?; ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಿಗುತ್ತೆ ನೆರವು
3. ರೆವಿನ್ಯು ಸೈಟ್: ಕಾನೂನು ಪ್ರಕಾರ ಕೃಷಿ ಜಮೀನು ಮಾತ್ರ ಪಹಣಿಯಲ್ಲಿ ನಮೂದಾಗುತ್ತದೆ. ಪಹಣಿಯನ್ನು ಕಂದಾಯ ಇಲಾಖೆ ನಿರ್ವಹಿಸುತ್ತದೆ. ಕಂದಾಯ ಭೂಮಿಯಲ್ಲಿ ನಿವೇಶನ ಮಾಡಿ ಮಾರಾಟ ಮಾಡಬೇಕೆಂದರೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಮಾಡಿಸಿಕೊಂಡು ನಿವೇಶನ ಮಾರಾಟ ಮಾಡಬೇಕಿರುತ್ತದೆ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಪಡೆಯದೆ ದುರಾಸೆ ಮತ್ತು ಲಾಭದ ಆಸೆಗೆ ಕೃಷಿ ಭೂಮಿಯಲ್ಲೆ ಬಡಾವಣೆ ರೂಪದಲ್ಲಿ ಅಭಿವೃದ್ದಿಪಡಿಸಿ ನಿವೇಶನಗಳನ್ನು ಮಾರಾಟ ಮಾಡುವ ನಿವೇಶನಗಳನ್ನು ರೆವೆನ್ಯೂ ನಿವೇಶನಗಳೆಂದು ಕರೆಯುತ್ತೇವೆ. ಇದಕ್ಕೆ ಯಾವುದೇ ಮಾನ್ಯತೆ ಇರುವುದಿಲ್ಲ. ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಸಿಕೊಂಡು ನಂತರ ಯೋಜನ ಪ್ರಾಧಿಕಾರದಲ್ಲಿ ಬಡಾವಣೆ ಅನುಮೋದನೆ ಪಡೆಯದೆ ಇರುವುದರಿಂದ ಸ್ಥಳೀಯ ಸಂಸ್ಥೆಗಳಾದ ಗ್ರಾಮಪಂಚಾಯಿತಿ ಅಥವಾ ಪಟ್ಟಣಪಂಚಾಯಿತಿ ಅಥವಾ ನಗರ ಸಭೆ ಅಥವಾ ನಗರ ಪಾಲಿಕೆಗಳು ಅಥವಾ ಬಿಬಿಎಂಪಿಯಲ್ಲಿ ಯಾವುದೇ ಖಾತೆ ಮಾಡಲು ನಿಯಮದಲ್ಲಿ ಅವಕಾಶವಿಲ್ಲ. ಮಾಡಿದರೂ ಸಹ ‘ಎ’ ಖಾತೆ ಮಾಡುವುದಿಲ್ಲ ಹಾಗಾಗಿ ಅಂತಹ ನಿವೇಶನಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಅತ್ತ ಪಹಣಿಯಲ್ಲಿ ನಿವೇಶನದಾರರ ಹೆಸರು ನಮೂದಿಸಲು ಸಾಧ್ಯವಿರುವುದಿಲ್ಲ. ಜಮೀನು ಮೂಲ ಖಾತೆದಾರನ ಹೆಸರಿನಲ್ಲಿಯೇ ಉಳಿಯುವುದರಿಂದ ಬೆಂಗಳೂರಿನಲ್ಲಿ ಸಾವಿರಾರು ಪ್ರಕರಣಗಳಲ್ಲಿ ಒಂದೆ ನಿವೇಶನ ತೋರಿಸಿ ಜಿಪಿಯೆದಾರನ ಮೂಲಕ ಅಥವಾ ಖಾತೆದಾರನೆ ಹಲವರಿಗೆ ಕ್ರಯ ಮಾಡುವುದು ಅಥವಾ ನಿವೇಶನಗಳನ್ನು ಮಾರಾಟ ಮಾಡಿ ಜಮೀನು ಇಲ್ಲದಿದ್ದರು ಪಹಣಿಯಲ್ಲಿ ವಿಸ್ತೀರ್ಣ ಜಮೀನುದಾರನ ಹೆಸರಿನಲ್ಲಿ ಉಳಿಯುವುದರಿಂದ ಆ ಒಟ್ಟು ಜಮೀನನ್ನು ಮತ್ತೊಬ್ಬ ಗಟ್ಟಿ ವ್ಯಕ್ತಿಗೆ ಮಾರಾಟ ಮಾಡುವುದು ಸರ್ವೆ ಸಾಮಾನ್ಯ. ಖರೀದಿ ಮಾಡಿದ ಗಟ್ಟಿ ವ್ಯಕ್ತಿಗೆ ಗೊತ್ತಿದ್ದು ಖರೀದಿಸಿ ಭೂ ಪರಿವರ್ತನೆ ಮಾಡಿಸಿಕೊಂಡು ಅಥವಾ ಮಾಡಿಸಿಕೊಳ್ಳದೆ ನಿವೇಶನದಾರರಿಗೆ ಹಲವು ರೀತಿಯ ಕಿರುಕುಳ ಕೊಟ್ಟು ಖಾಲಿ ಮಾಡಿಸುತ್ತಾರೆ. ನ್ಯಾಯಾಲಯಗಳಲ್ಲಿ ಖಾತೆ ಪಹಣಿ ಅವರ ಹೆಸರಿಗೆ ಇರುವುದರಿಂದ ರೆವೆನ್ಯೂ ನಿವೇಶನಗಳಿಗೆ ಕಾನೂನಿನಲ್ಲಿ ಮಾನ್ಯತೆ ಇಲ್ಲದ್ದರಿಂದ ಗಟ್ಟಿ ವ್ಯಕ್ತಿಯ ಪರವಾಗಿಯೇ ಆದೇಶವಾಗುತ್ತವೆ. ಎಂಬ ಸತ್ಯವನ್ನು ನಿವೇಶನ ಖರೀದಿದಾರರು ಎಚ್ಚರ ವಹಿಸಬೇಕು.
ಕಡಿಮೆ ದರಕ್ಕೆ ದೊರೆಯುತ್ತವೆಯೆಂದು ಅನುಮೋದನೆ ಪಡೆಯದ ಬಡಾವಣೆಯ ನಿವೇಶನಗಳನ್ನು ಖರೀದಿಸಿ ಮೊಸ ಹೊಗದಿರಲೆಂದು ಈ ಬರಹವಷ್ಟೆ. ಲಕ್ಷಾಂತರ ಜನ ಹಣದ ಕೊರತೆಯಿಂದ ಅಥವಾ ತಿಳುವಳಿಕೆ ಕೊರತೆಯಿಂದ ಮೊಸ ಹೊಗುವುದು ಸರ್ವೆಸಾಮಾನ್ಯ. ಆದ್ದರಿಂದಲೇ ಬೆಂಗಳೂರಿನಲ್ಲಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದಾರೆ. ಕಚೇರಿಗೆ ಬಂದು ಮೊಸಕ್ಕೊಳಗಾದವರು ಕಣ್ಣೀರು ಹಾಕುವಾಗ ಅಧಿಕಾರಿಯಾಗಿ ಅಸಹಾಯಕರಾಗುತ್ತೇವೆ. ಆದ್ದರಿಂದ ಮಾಹಿತಿಗಾಗಿ ಈ ಬರಹವಷ್ಟೆ.
ತುಮಕೂರು; ಎರಡ್ಮೂರು ತಿಂಗಳಲ್ಲಿ 3 ಸಾವಿರ ನಿವೇಶನ ಹಂಚಿಕೆ; ಸಚಿವ ಪರಮೇಶ್ವರ್
+ There are no comments
Add yours