ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಏನೇನು ಸಿದ್ಧತೆಗಳಾಗಿವೆ ಗೊತ್ತೇ?

1 min read

 

 

 

 

 

ತುಮಕೂರು ನ್ಯೂಸ್.ಇನ್(ಜೂ.16):
ಜಿಲ್ಲೆಯಲ್ಲಿ ಜೂನ್ 25ರಿಂದ ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಕರೆ ನೀಡಿದರು.
ನಗರದ ಜಿಲ್ಲಾ ಬಾಲಭವನದಲ್ಲಿಂದು ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ 2020ರ ಪರೀಕ್ಷಾ ಕೇಂದ್ರಗಳ ಅಧಿಕಾರಿಗಳ ತರಬೇತಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೋವಿಡ್ 19 ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‍ಡೌನ್ ಜಾರಿಯಿದ್ದ ಕಾರಣ ಮಾರ್ಚ್ 27 ರಿಂದ ಏಪ್ರಿಲ್ 9ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಜೂನ್ 25 ರಿಂದ ನಡೆಸಲಾಗುತ್ತಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುತ್ತಿರುವುದರಿಂದ ಈ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸವಾಲಿನ ಪರೀಕ್ಷೆಯಾಗಿರುತ್ತದೆ. ನಾವೆಲ್ಲರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕೆಂದು ತಿಳಿಸಿದರು.
ಎಲ್ಲಾ ನಿಯೋಜಿತ ಪರೀಕ್ಷಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ತಪ್ಪದೇ ಪಾಲಿಸಬೇಕು ಎಂದರಲ್ಲದೆ ಕೋವಿಡ್ 19 ಸಾಂಕ್ರಾಮಿಕ ರೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸದೆ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಕಂಟೈನ್‍ಮೆಂಟ್ ವಲಯದಿಂದ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳನ್ನು ಕೋವಿಡ್ ಪಾಸಿಟಿವ್ ದೃಢಪಟ್ಟವರೆಂದು ತಪ್ಪಾಗಿ ಭಾವಿಸದೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದರು.
ಮುನ್ನೆಚ್ಚರಿಕಾ ಕ್ರಮವಾಗಿ ಜ್ವರ, ಕೆಮ್ಮು, ನೆಗಡಿ ಮತ್ತಿತರ ರೋಗ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಬೇಕೆ ಹೊರತು ಅವರನ್ನು ಪ್ರತ್ಯೇಕವಾಗಿ ಕಂಡು ಆತಂಕಗೊಳಿಸಬಾರದೆಂದು ಸಲಹೆ ನೀಡಿದರು. ಪರೀಕ್ಷೆ ನಡೆಯಲಿರುವ 6 ದಿನಗಳೂ ಸಹ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ಯಾವುದೇ ಕೊರತೆ, ಸಮಸ್ಯೆ ಉಂಟಾದರೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಿಮ್ಮೊಂದಿಗಿದೆ ಎಂದು ಧೈರ್ಯ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ಹಾಜರುಪಡಿಸಿ ಪರೀಕ್ಷಾ ಕೇಂದ್ರಕ್ಕೆ ಉಚಿತವಾಗಿ ತಲುಪಬಹುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ಒಬ್ಬ ವಿದ್ಯಾರ್ಥಿಯಿದ್ದರೂ ಸಹ ಆ ಮಾರ್ಗದಲ್ಲಿ ಸಾರಿಗೆ ವ್ಯವಸ್ಥೆ ಮಾಡಲು ಕೆಎಸ್‍ಆರ್‍ಟಿಸಿಗೆ ಸೂಚನೆ ನೀಡಲಾಗಿದೆ. ಸಾರಿಗೆ ವ್ಯವಸ್ಥೆಗಾಗಿ ಖಾಸಗಿ ಶಾಲೆಗಳ ಬಸ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರಗಳಲ್ಲಿ ಜನರು ಗುಂಪು ಸೇರದಂತೆ ನಿಗಾವಹಿಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕೇಂದ್ರದಲ್ಲಿರುವ ಎಲ್ಲರೂ ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಡೆಸ್ಕ್‍ಗೆ ಗರಿಷ್ಟ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಬೇಕೆಂದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರೊಂದಿಗೆ ಕುಡಿಯುವ ನೀರನ್ನು ಪೇಪರ್ ಕಪ್‍ನಲ್ಲಿಯೇ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಜೊತೆ ನಮಗೂ ಇದು ಪರೀಕ್ಷಾ ಸಮಯವಾಗಿದ್ದು, ಎಚ್ಚರಿಕೆ ಅಗತ್ಯ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಕಲು ಮಾಡದಂತೆ ಕ್ರಮ ವಹಿಸುವುದರೊಂದಿಗೆ ಯಾವುದೇ ಲೋಪದೋಷವಿಲ್ಲದೆ ಪಾರದರ್ಶಕವಾಗಿ ನಡೆಸಿ ಯಶಸ್ಸುಗೊಳಿಸಬೇಕೆಂದರು.
ಶಿಕ್ಷಣಾಧಿಕಾರಿ ರಂಗದಾಸಪ್ಪ ಮಾತನಾಡಿ, ಜಿಲ್ಲೆಯಲ್ಲಿ ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 144 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 37,317 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್. ಕಾಮಾಕ್ಷಿ, ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಮೇಲ್ವಿಚಾರಕರು, ಮತ್ತಿತರರು ಹಾಜರಿದ್ದರು.

You May Also Like

More From Author

+ There are no comments

Add yours