715
Tumkurnews.in
ತುಮಕೂರು; ಗ್ರಾಮೀಣ ಪ್ರದೇಶಗಳಿಗೆ ತಾಲ್ಲೂಕು ಆರೋಗ್ಯ ಕೇಂದ್ರಗಳು ಹಾಗೂ ಅಸ್ಪತ್ರೆಗಳು ದೇವಾಲಯಗಳಿಂತಿದ್ದರೆ ಆಸ್ಪತ್ರೆಗೆ ಬರುವ ರೋಗಿಗಳು, ಬಡವರು, ದೇವರಂತೆ ಕಾಣಬೇಕು ಎಂದು ಜಿಲ್ಲಾ ಉಸ್ತುವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಶಿರಾ ಪಟ್ಟಣದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿರಾ ತಾಲೂಕಿಗೆ ಹಿಂದೆಯೇ ಈ ವ್ಯವಸ್ಥಿತ ಆಸ್ಪತ್ರೆ ಅವಶ್ಯಕತೆ ಇತ್ತು, ಇಂದು ತುಮಕೂರು ಜಿಲ್ಲೆಯ ವೈದ್ಯಕೀಯ ಸೇವೆಗಳಲ್ಲಿ ಶಿರಾ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದು ಮೈಲಿಗಲ್ಲು ಸಾಧಿಸಿದೆ. ಸ್ಥಳೀಯವಾಗಿ ಅನೇಕ ಹೆಣ್ಣು ಮಕ್ಕಳ ಶುಶ್ರೂಷೆ ಮತ್ತು ಹೆರಿಗೆಗೆ ಸಹಾಯಕವಾಗುತ್ತದೆ ಎಂದರು.
ಕಾಲಕಾಲಕ್ಕೆ ತಪಾಸಣೆ, ಉತ್ತಮ ಚಿಕಿತ್ಸೆಗಳು ಸ್ಥಳೀಯವಾಗಿ ದೊರೆತು ಆಸ್ಪತ್ರೆಗಳಲ್ಲಿ ಹೆರಿಗೆಗೆ ನೊಂದಣಿಯಾದ ಶೇ.80ರಷ್ಟು ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆರಿಗೆಗಳಾಗಿ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಇರುವ ಒತ್ತಡವನ್ನು ಕಡಿಮೆ ಮಾಡಿ, ತಾಲ್ಲೂಕು ಅಸ್ಪತ್ರೆಗಳು ಉನ್ನತ ಮಟ್ಟಕ್ಕೆ ಏರಬೇಕು ಎಂದರು.
ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದ ಕಾಲದಲ್ಲಿ ಸಿಬ್ಬಂದಿ ಕೊರತೆ ಸ್ಥಿತಿ ಇಲ್ಲ, ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರು ಇದ್ದಾರೆ, ಅನುಕೂಲಗಳು ಇವೆ, ಕೋವಿಡ್-19 ನಮಗೆ ಕಷ್ಟವಾಗಿದ್ದರೂ ಆಸ್ಪತ್ರೆಗಳ ಅಭಿವೃದ್ಧಿ ಅಗಿದೆ, ಸ್ಥಳೀಯವಾಗಿ ಶುಶ್ರೂಷೆ, ಹೆರಿಗೆ ಸಿಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯದ ಆರೋಗ್ಯ ಕೇಂದ್ರಗಳಿಂದ ಸಾಮಾನ್ಯ ಜನರ ಮನೆ ಬಾಗಿಲಿಗೆ ಇಂದು ಆರೋಗ್ಯದ ಚಿಕಿತ್ಸೆಗಳು ನೀಡುವಂತೆ ಅಗಬೇಕಾಗಿದೆ ಎಂದು ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಸಮಯ ಬಹಳ ಮುಖ್ಯ ಎರಡು ನಿಮಿಷದಲ್ಲಿ ಒಂದು ಪ್ರಾಣ ಉಳಿಯಬಹುದು ಒಂದು ಪ್ರಾಣ ಹೋಗಲುಬಹುದು, ತ್ವರಿತವಾಗಿ ಇರುವ ಚಿಕಿತ್ಸೆ ಎಲ್ಲಾ ವಲಯಗಳಲ್ಲಿ ಹೆಚ್ಚಾಗಿ ಸಿಗಬೇಕು ಅನ್ನುವ ಉದ್ದೇಶದಿಂದ ಆರೋಗ್ಯ ಕ್ಷೇತ್ರವನ್ನ ವಿಸ್ತಾರ ಮಾಡಲಾಗಿದೆ. ಆದ್ದರಿಂದ ಶಿರಾ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಬಡ ಜನರಿಗೆ ಇದರ ಉಪಯೋಗವಾಗಬೇಕು, ಸುಖಾಸುಮ್ಮನೆ ಹೆರಿಗೆ ಸಮಯದಲ್ಲಿ ಚೀಟಿ ಬರೆದು ಜಿಲ್ಲಾ ಆಸ್ಪತ್ರೆಗೆ ರವಾನಿಸುವುದು ಬೇಡ, ತಾಲ್ಲೂಕು ಆಸ್ಪತ್ರೆಗಳಲ್ಲಿ ಶೇ. 30 ರಷ್ಟು ನೊಂದಣಿಯಾದ ಹೆರಿಗೆಗಳು ಆಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಗಿಂತ ಹೆಚ್ಚಿನ ಸೌಲಭ್ಯಗಳು ಇಲ್ಲಿ ಇದ್ದರೂ ಬೇರೊಂದು ಕಡೆಗೆ ಕಳುಸುತ್ತಿರುವುದು ನಮಗೂ ಶೋಭೆ ತರುವುದಿಲ್ಲ, ಇದನ್ನು ವೈದ್ಯಾಧಿಕಾರಿಗಳು ಗಮನಿಸಬೇಕಾಗಿದೆ ಎಂದು ಅವರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕೋವಿಡ್-19 ಶುರುವಾಗಿದ್ದು ಇದೇ ಶಿರಾ ತಾಲ್ಲೂಕಿನಿಂದ, ಈಗ ದೇಶದ ನಾನಾ ಭಾಗಗಳಲ್ಲಿ ಎರಡನೇ ಹಂತದ ಕೋವಿಡ್ ಕಾಟ ಶುರುವಾಗಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು, ಕೋವಿಡ್ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತರೆಯರು ಶ್ರಮವಹಿಸಿ ನಿಯಂತ್ರಣ ಮಾಡಿದ್ದೀರಿ, ಅದೇ ರೀತಿ ಎರಡನೇ ಹಂತದ ಕೋವಿಡ್ ಬರುವ ಮುಂಚೆ ನೀವು ಎಲ್ಲರಿಗೂ ಅರಿವು ಮೂಡಿಸಿ, ಜಾಗೃತಗೊಳಿಸಬೇಕು, ನಿಮ್ಮ ಈ ಕಾರ್ಯಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.
ಒಂದುಕಡೆ ಕೋವಿಡ್ ನಮಗೆ ಶಾಪ ಅಂದುಕೊಂಡರೆ ಇನ್ನೊಂದು ಕಡೆ ಆಸ್ಪತ್ರೆಗಳು ಅಭಿವೃದ್ಧಿಯಾಗಿವೆ ಎಂದು ಹೇಳಬಹುದು. ಸ್ಥಳೀಯ ಶುಶ್ರೂಷೆಗೆ ಹೆಚ್ಚು ಒತ್ತು ನೀಡಬೇಕು. ಕೋವಿಡ್ ಬಗ್ಗೆ ಹೆಚ್ಚು ಉದಾಸೀನ ತೋರದೆ ಜಾಗೃತೆವಹಿಸಬೇಕು ಎಂದು ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶಿರಾ ಪಟ್ಟಣ ತುಮಕೂರು ಜಿಲ್ಲೆಗೆ ವಾಣಿಜ್ಯ ನಗರವಿದ್ದಂತೆ, ರಾಜ್ಯದಲ್ಲಿ ತುಮಕೂರು ಜಿಲ್ಲೆ ದೊಡ್ಡ ಜಿಲ್ಲೆ ಈ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ ಅಭಿವೃದ್ಧಿ ಗೆ ಯೋಗ್ಯವಾಗಿ. ಶಿರಾ ಪಟ್ಟಣ ಸೈನಿಕರ ತಾಣವಾಗಿತ್ತು, ರಾಜಕೀಯ ನಿರ್ಣಾಯಕ ಪ್ರದೇಶವಾಗಿದೆ. ಇಂತಹ ಚರಿತ್ರೆಯುಳ್ಳ ಪುಣ್ಯ ನಾಡಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿರುವುದು ಭಾಗ್ಯ. ಇದಕ್ಕೆ ಸುಮಾರು 25 ಕೋಟಿ ರೂ. ಅನುದಾನ ನೀಡಿದೆ ಎಂದರು.
ರಾಜ್ಯದ ಹಲವಾರು ಕಡೆ ವಸತಿ ಸೌಲಭ್ಯವಿಲ್ಲದಿರುವುದರಿಂದ ವೈದ್ಯರು ಕೇಂದ್ರ ಸ್ಥಾನದಲ್ಲಿ ವಾಸವಿರುವುದಿಲ್ಲ. ಇದರಿಂದ ವೈದ್ಯರ ಸೇವೆ ಸಾರ್ವಜನಿಕರಿಗೆ ಸಕಾಲದಲ್ಲಿ ಸಮರ್ಪಕವಾಗಿ ತಲಪುವುದಿಲ್ಲ. ಈ ಹಿನ್ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯೊಂದಿಗೆ ವೈದ್ಯರಿಗಾಗಿ 10, ಶುಶ್ರೂಷಕರಿಗಾಗಿ 12, ಗ್ರೂಪ್ ಡಿ ನೌಕರರಿಗಾಗಿ 8 ವಸತಿ ಸೇರಿದಂತೆ ಒಟ್ಟು 30 ವಸತಿಗಳನ್ನು ನಿರ್ಮಿಸಿ, ಇಂದು ಉದ್ಘಾಟನೆ ಮಾಡಲಾಗಿದೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದಿರುವ 9 ಜಿಲ್ಲೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ (ಪಿ.ಪಿ.) ಸಹಭಾಗಿತ್ವದಲ್ಲಿ ಹೊಸ ವೈದ್ಯಕೀಯ ಕಾಲೇಜು ಹಾಗೂ ಪ್ರಾಥಮಿಕ, ದ್ವಿತೀಯ, ತೃತೀಯ ಚಿಕಿತ್ಸಾ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 2 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ಬೀದರ್, ಬೆಳಗಾವಿಯಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಹೃದ್ರೋಗ, ಮೂತ್ರಪಿಂಡ ರೋಗಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕನಿಷ್ಟ ಬೆಳಗಾವಿ, ಕಲಬುರ್ಗಿ ಸೇರಿದಂತೆ ಪ್ರಾದೇಶಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯದ ಮೂಲೆಗಳಲ್ಲಿರುವ ಜನರಿಗೆ ಎಲ್ಲ ವೈದ್ಯಕೀಯ ಸೌಲಭ್ಯ ಆ ಪ್ರದೇಶದಲ್ಲೇ ದೊರಕಿಸಬೇಕು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುವಿನಿಂದ 6 ಮಂದಿ ಅಮಾಯಕರು ಅಗ್ನಿಗೆ ಆಹುತಿಯಾಗಿದ್ದಾರೆ. ಕಳೆದ ಮಧ್ಯರಾತ್ರಿಯಿಂದ ದುರ್ಘಟನೆ ಸಂಭವಿಸಿದ ಸ್ಥಳದಲ್ಲೆ ಇದ್ದುದರಿಂದ ಮಧುಗಿರಿ ತಾಲೂಕು ಮುದ್ದೇನಹಳ್ಳಿಯಲ್ಲಿ ಉದ್ಘಾಟನೆಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿರಾ ಶಾಸಕ ಸಿ.ಎಂ. ರಾಜೇಶ್ ಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ, ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಗೌಡ, ತೆಂಗುನಾರು ಅಭಿವೃದ್ದಿ ನಿಗಮ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎಸ್.ಆರ್.ಗೌಡ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಸಿಇಓ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಂಶಿಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ , ಡಾ.ಸನತ್ಕುಮಾರ್, ಡಾ.ಕೇಶವರಾಜು, ಡಾ. ವೀರಭದ್ರಯ್ಯ, ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ್, ಶಿರಾ ತಹಶೀಲ್ದಾರ್ ಮಮತ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತಿ ಇದ್ದರು.