web analytics
My page - topic 1, topic 2, topic 3
ಜಿಲ್ಲಾಡಳಿತದ ಮೇಲೆ ಜನರ ವಿಶ್ವಾಸ ಹೆಚ್ಚಾಗುವಂತೆ ಸೇವೆ ಸಲ್ಲಿಸುತ್ತೇನೆ; ಪಾಟೀಲ್ ವೈ.ಎಸ್

ಜಿಲ್ಲಾಡಳಿತದ ಮೇಲೆ ಜನರ ವಿಶ್ವಾಸ ಹೆಚ್ಚಾಗುವಂತೆ ಸೇವೆ ಸಲ್ಲಿಸುತ್ತೇನೆ; ಪಾಟೀಲ್ ವೈ.ಎಸ್

 799 

Tumkurnews.in
ತುಮಕೂರು; ಕಂದಾಯ ಇಲಾಖೆಯಡಿ ಬರುವ ಪೌತಿಖಾತೆ, ಪಹಣಿ ಸಮಸ್ಯೆ ಸೇರಿದಂತೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಪಾಟೀಲ್ ವೈ.ಎಸ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ.20ರಂದು ಗಡಿಭಾಗದ ಮಧುಗಿರಿ ತಾಲೂಕು ಲಕ್ಷ್ಮಿಪುರದಲ್ಲಿ ಹಮ್ಮಿಕೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಅಹವಾಲುಗಳಲ್ಲಿ ಬಹುತೇಕ ಅರ್ಜಿಗಳು ಪೌತಿಖಾತಿ, ಪಹಣಿ ಸಮಸ್ಯೆಗೆ ಸಂಬಂಧಿಸಿದ್ದವು.  ರೈತರು ತಮ್ಮ ಜಮೀನಿನ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಸರ್ಕಾರದ ಸೌಲಭ್ಯಗಳು ಅವರಿಗೆ ದೊರಯುತ್ತಿಲ್ಲ ಹಾಗೂ ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪೌತಿ ಖಾತೆಯನ್ನು ಸರಿಪಡಿಸಲು ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ 10 ವರ್ಷಗಳ ಹಿಂದೆ ತಿಪಟೂರು ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿರುವುದರಿಂದ ಜಿಲ್ಲೆಯ ಬಗ್ಗೆ ಸ್ವಲ್ಪಮಟ್ಟಿಗೆ ಮಾಹಿತಿ ಹೊಂದಿದ್ದೇನೆ.  ಜಿಲ್ಲೆಯ ಜನರ ಚಿಂತನೆ, ಪ್ರಾಧಾನ್ಯತೆ, ಅವಕಾಶಗಳು ಹಿಂದಿಗಿಂತ ಈಗ ಬದಲಾಗಿವೆ. ಜಿಲ್ಲೆಯಲ್ಲಿ 5 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು, ಕೈಗಾರಿಕೆ, ಎಚ್.ಎ.ಎಲ್., ಸೋಲಾರ್ ಪಾರ್ಕ್, ನೀರಾವರಿ, ಮತ್ತಿತರ ಯೋಜನೆಗಳಿಂದ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ.   ಪೂರ್ಣಗೊಳ್ಳದ ಯೋಜನೆಗಳನ್ನು ಚುರುಕುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಳ್ಳವರಿಗೆ ಮಾತ್ರ ಸರ್ಕಾರಿ ಯೋಜನೆಗಳಿವೆ ಎಂಬ ಮಾತನ್ನು ಹುಸಿಗೊಳಿಸಬೇಕು.  ಗಡಿ ಭಾಗದಲ್ಲಿರುವ ಅನೇಕ ಫಲಾನುಭವಿಗಳಿಗೆ ಈವರೆಗೂ ಯೋಜನೆಗಳ ಲಾಭ ದೊರೆತಿಲ್ಲ.  ಇಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲಾಡಳಿತದ ಮೇಲೆ ಜನರ ವಿಶ್ವಾಸ ಹೆಚ್ಚಾಗುವಂತೆ ಸೇವೆ ಸಲ್ಲಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಲು ಎಲ್ಲ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಸಮಿತಿ ಇದೆ. ಈ ಸಮಿತಿಯು ಇಂತಹ ಅಕ್ರಮ ಗಣಿಗಾರಿಕೆ ಮೇಲೆ ನಿಗಾ ಇಟ್ಟಿರುತ್ತದೆ. ಗಣಿಗಾರಿಕೆಯಲ್ಲಿ ಅಕ್ರಮವಾಗಿ ಜಿಲೆಟಿನ್‍ನಂತಹ ಸ್ಫೋಟಕ ವಸ್ತುಗಳನ್ನು ಬಳಸುವ ಬಗ್ಗೆ ದೂರುಗಳು ಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಎತ್ತಿನಹೊಳೆ, ಹೇಮಾವತಿ ನಾಲೆ, ಭದ್ರಾ, ಎಚ್.ಎ.ಎಲ್ ಯೋಜನೆಗಳ ಪ್ರಗತಿಯತ್ತ ಹೆಚ್ಚು ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಲಾಗುವುದು.  ಯಾವುದೇ ಇಲಾಖೆಯ ಯಾವುದೇ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ದೂರುಗಳು ಬಂದಲ್ಲಿ ಅಂತಹ ಅಧಿಕಾರಿಗಳನ್ನು ಸಮರ್ಥರಲ್ಲವೆಂದು ಭಾವಿಸಲಾಗುವುದು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಸ್ವಾಮಿ ಮಾತನಾಡಿ, 6 ದಿನಗಳಿಂದ ಜಿಲ್ಲೆಯಲ್ಲಿ ಸುಮಾರು 1500 ಕಿ.ಮೀ.ಗಳಷ್ಟು ಪ್ರವಾಸ ಕೈಗೊಂಡಿದ್ದೇನೆ. ಜನರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೇನೆ.  ಜಿಲ್ಲೆಯ ಇತರೆ ತಾಲೂಕುಗಳಿಗಿಂತ ಪಾವಗಡ ತಾಲೂಕು ಬಹಳ ಹಿಂದುಳಿದಿರುವುದು ನನ್ನ ಗಮನಕ್ಕೆ ಬಂದಿದೆ.  ತಳಮಟ್ಟದಲ್ಲಿ ಕೆಲಸಗಳು ಸಮರ್ಪಕವಾಗಿ ನಡೆದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವೆಂದು ಮನಗಂಡು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಶೇ.50ರಷ್ಟು ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿ ಮಾಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಬಗ್ಗೆ ಪ್ರೇರೇಪಿಸಲಾಗುವುದು ಎಂದು ತಿಳಿಸಿದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!