web analytics
My page - topic 1, topic 2, topic 3
ಫೆ.20ರಂದು ಜಿಲ್ಲಾಧಿಕಾರಿ ಹಾಗೂ ಎಸಿ, ತಹಶೀಲ್ದಾರರುಗಳಿಂದ ವಿವಿಧೆಡೆ ಗ್ರಾಮ ವಾಸ್ತವ್ಯ

ಫೆ.20ರಂದು ಜಿಲ್ಲಾಧಿಕಾರಿ ಹಾಗೂ ಎಸಿ, ತಹಶೀಲ್ದಾರರುಗಳಿಂದ ವಿವಿಧೆಡೆ ಗ್ರಾಮ ವಾಸ್ತವ್ಯ

 1,294 

Tumkurnews.in
ತುಮಕೂರು; ಕಂದಾಯ ಇಲಾಖೆಯ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಡಿ ಫೆ. 20ರ 3ನೇ ಶನಿವಾರದಂದು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ  ಜಿಲ್ಲಾಧಿಕಾರಿ ಪಾಟೀಲ್ ವೈ.ಎಸ್ ಅವರು ವಾಸ್ತವ್ಯ ಮಾಡಲಿದ್ದು, ಗ್ರಾಮದಲ್ಲಿನ ರೈತರ ಜಮೀನುಗಳ ಪಹಣಿ ಲೋಪದೋಷ, ಪಿಂಚಣಿ, ರೇಷನ್ ಕಾರ್ಡ್, ಮತ್ತಿತರ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲೆಯ ತಹಸೀಲ್ದಾರರು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಈ ಕುರಿತು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಅವರು, ಸರ್ಕಾರದ ಸುತ್ತೋಲೆಯನ್ವಯ ಮುಂಬರುವ ಫೆ. 20ರಂದು ಹಾಗೂ ಪ್ರತಿ ತಿಂಗಳ 3ನೇ ಶನಿವಾರದಂದು ಕೈಗೊಳ್ಳಬೇಕಾಗಿರುವ ಗ್ರಾಮಭೇಟಿ ಹಾಗೂ ಹಳ್ಳಿ ವಾಸ್ತವ್ಯದ ಬಗ್ಗೆ ನಿರ್ದೇಶನ ನೀಡಿದರು.
ಫೆ.20ರಂದು ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಜಿಲ್ಲಾಧಿಕಾರಿಗಳ ಗ್ರಾಮ ಭೇಟಿಯಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ, ಮಧುಗಿರಿ ತಾಲ್ಲೂಕಿನ ತಹಸೀಲ್ದಾರ್, ಕೃಷಿ, ತೋಟಗಾರಿಗೆ, ಆರೋಗ್ಯ, ಆಹಾರ, ಸಮಾಜ ಕಲ್ಯಾಣ, ಮತ್ತಿತರ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆಯಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ನೀಡಲಿದ್ದಾರೆ.
ಇದೇ ಮಾದರಿಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡುವ ತಾಲ್ಲೂಕನ್ನು ಹೊರತುಪಡಿಸಿ ಅಂದೇ ಇತರೆ ತಾಲ್ಲೂಕುಗಳ ತಹಸೀಲ್ದಾರರುಗಳು ಹಾಗೂ ಉಪವಿಭಾಗಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಹಾಗೂ ಹಳ್ಳಿ ವಾಸ್ತವ್ಯ ಮಾಡಲಿದ್ದಾರೆ.
ಅದರಂತೆ ಫೆ. 20ರಂದು ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಮುಗ್ಳೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿಯ ಹಂದನಕೆರೆ ಗ್ರಾಮ, ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿಯ ಬ್ಯಾತಗ್ರಾಮ, ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಹುಲಿಕುಂಟೆ, ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಸಿಂಗೋನಹಳ್ಳಿ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ವೆಂಕಟಮ್ಮನಹಳ್ಳಿ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕೋಡ್ಲಹಳ್ಳಿ, ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ವಿಜ್ಞಸಂತೆ, ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಜಿ.ಹೊಸಹಳ್ಳಿಯಲ್ಲಿ ಸಂಬಂಧಪಟ್ಟ ತಾಲ್ಲೂಕುಗಳ ತಹಶೀಲ್ದಾರರುಗಳು ಗ್ರಾಮಗಳ ಭೇಟಿ ಮತ್ತು ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಮ ಭೇಟಿಯ ಸಂದರ್ಭದಲ್ಲಿ ಗ್ರಾಮದಲ್ಲಿನ ಎಲ್ಲಾ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ ನಂಬರ್ 3 ಮತ್ತು ಆಕಾರ್ ಬಂದ್ ತಾಳೆ ಹೊಂದಿರುವ ಬಗ್ಗೆ, ಕಾಲಂ ನಂ.3 ಮತ್ತು 9 ತಾಳೆ ಹೊಂದಿರುವ ಕುರಿತು, ಪೌತಿಖಾತೆ, ರೇಷನ್ ಕಾರ್ಡ್ ಸಂಬಂಧಿಸಿದ ಸಮಸ್ಯೆಗಳು, ಮತದಾರರ ಪಟ್ಟಿ ಪರಿಷ್ಕರಣೆ, ಸ್ಮಶಾನ ಲಭ್ಯತೆ ಬಗ್ಗೆ ಪರಿಶೀಲನೆ, ಆಶ್ರಯ ಯೋಜನೆಯಡಿ ವಸತಿ ಕಲ್ಪಿಸುವುದು, ಸರ್ಕಾರಿ ಜಮೀನು ಒತ್ತುವರಿ ಬಗ್ಗೆ, ಆಧಾರ್ ಕಾರ್ಡ್‌ನ ಅನುಕೂಲತೆ, ಹದ್ದುಬಸ್ತು, ಪೋಡಿ, ದರಕಾಸ್ತು ಹಾಗೂ ಶಾಲೆ ಅಂಗನವಾಡಿಗಳಿಗೆ ಭೇಟಿ ನೀಡಿ, ಆಹಾರ, ಕಲಿಕಾಕ್ರಮ ಇತ್ಯಾದಿ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.
ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಉಳಿದ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಗ್ರಾಮವಾಸ್ತವ್ಯ ಮಾಡುವ ಗ್ರಾಮದ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು.
ಆಯ್ಕೆ ಮಾಡಿಕೊಂಡಿರುವ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡುವ ಬಗ್ಗೆ ಹಾಗೂ ಅಂದಿನ ಕಾರ್ಯಕ್ರಮದ ಬಗ್ಗೆ ಜನರಿಗೆ ಮೊದಲೇ ಮಾಹಿತಿ ನೀಡಿ ಅರಿವು ಮೂಡಿಸುವಂತೆ ತಹಸೀಲ್ದಾರರಿಗೆ ಸೂಚಿಸಿದರು. ಅಲ್ಲದೆ ವಾಸ್ತವ್ಯದ ಬಗ್ಗೆ ಆ ಭಾಗದ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಅಜಯ್,  ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜಸುಲೋಚನಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಘು, ಡಿಎಚ್‍ಓ ಡಾ.ನಾಗೇಂದ್ರಪ್ಪ, ತಹಸೀಲ್ದಾರ್ ಮೋಹನ್ ಕುಮಾರ್, ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!