66,069
Tumkurnews.in
ತುಮಕೂರು; ಕೊರಟಗೆರೆ ತಾಲೂಕಿನ ತುಂಬಾಡಿ ಬಳಿ ಕಾರಿನಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜನವರಿ 29ರ ಮದ್ಯರಾತ್ರಿಯಿಂದ ಜನವರಿ 30ರ ಬೆಳಗಿನ ಜಾವ 5 ಗಂಟೆ ಮದ್ಯದ ಸಮಯದಲ್ಲಿ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದ ಸಮೀಪದಲ್ಲಿ ಮಹಿಂದ್ರಾ ವೆರಿಟೋ ಕಾರೊಂದು ಪತ್ತೆಯಾಗಿತ್ತು.
ಮರವೊಂದಕ್ಕೆ ಡಿಕ್ಕಿಯಾಗಿ ಅಪಘಾತವಾದ ರೀತಿಯಲ್ಲಿ ಪತ್ತೆಯಾಗಿದ್ದ ಕಾರಿನ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ವೇಳೆ ವ್ಯಕ್ತಿಯೋರ್ವನ ಎಡ ಭಾಗದ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ, ಬಳಿಕ ಶವವನ್ನು ಚಾಲಕನ ಸೀಟಿನಲ್ಲಿ ಇರಿಸಿ ಪರಾರಿಯಾಗಿದ್ದು ಪತ್ತೆಯಾಗಿತ್ತು. ಶವ ಬೆಂಗಳೂರಿನ ನಿವಾಸಿ ನಿಸಾರ್ ಅಹಮದ್ ಎಂಬಾತನದ್ದಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಇದೀಗ ಆರೋಪಿಯ ಬಂಧನವಾಗಿದೆ. ಬಂಧಿತ ಆರೋಪಿ ವೀರೇಂದ್ರ ಪಿ(24), ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು, ಗೋಪನಹಳ್ಳಿ ಗ್ರಾಮದವನಾಗಿದ್ದಾನೆ. ಈತ ಆನೆಕಲ್ ತಾಲ್ಲೂಕಿನ ಅತ್ತಿಬೆಲೆಯ ಅಣ್ಣಯ್ಯಪ್ಪ ಲೇ ಔಟ್ ನಲ್ಲಿ ವಾಸವಿದ್ದನು.
ಕೊಲೆ ಮಾಡಿದ್ದು ಏಕೆ?; ಆರೋಪಿ ವೀರೇಂದ್ರ ತನ್ನ ಅಕ್ಕನ ಮದುವೆಗೆ ಹಣ ಹೊಂದಿಸಲು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಊರಿಗೆ ಹೋಗಬೇಕು ಎಂದು ಬಾಡಿಗೆ ಕಾರು ಮಾಡಿಕೊಂಡು ತುಮಕೂರು ಕಡೆಗೆ ಹೊರಟಿದ್ದಾನೆ. ಕಾರಿನ ಮಾಲೀಕನಾದ ನಿಸಾರ್ ಅಹಮದ್ ನ ಕಾರನ್ನು ಕದ್ದು, ಅದನ್ನು ಮಾರಾಟ ಮಾಡಿದ ಹಣದಿಂದ ತನ್ನ ಅಕ್ಕನ ಮದುವೆ ಮಾಡಲು ದುರಾಲೋಚನೆ ಮಾಡಿದ್ದನು.
ಹೀಗಾಗಿ ನಿಸಾರ್ ಅಹಮದ್ ನನ್ನು ಕೊಲೆ ಮಾಡಿದ್ದನು, ಆದರೆ ಕಾರನ್ನು ಸ್ಥಳದಿಂದ ಕೊಂಡೊಯ್ಯಲು ವಿಫಲನಾಗಿ ಸ್ಥಳದಿಂದ ಪರಾರಿಯಾಗಿದ್ದನು. ಅಕ್ಕನ ಮದುವೆಗೆ ಅನ್ಯಾಯದ ಮಾರ್ಗದಿಂದ ಹಣ ಹೊಂದಿಸಲು ಯಾವುದೇ ತಪ್ಪು ಮಾಡದ ಅಮಾಯಕ ಕಾರು ಚಾಲಕನ ಜೀವ ತೆಗೆದಿದ್ದು ಮಾತ್ರ ವಿಪರ್ಯಾಸ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: tumkurnews.in@gmail.com
ವೆಬ್ ಸೈಟ್ : https://www.tumkurnews.in/