869
Tumkurnews.in
ತುಮಕೂರು; ಇತ್ತೀಚೆಗೆ ನಡೆದ ಗ್ರಾಮಪಂಚಾಯಿತಿ ಚುನಾವಣೆ ಮತ ಎಣಿಕೆ ನಡೆದ ಸರಕಾರಿ ಸಮುದಾಯ ಪಾಲಿಟೆಕ್ನಿಕ್ ಕಾಲೇಜು, ಚುನಾವಣಾ ಮತ ಎಣಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಸಂಪೂರ್ಣವಾಗಿ ಹಾಳಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣವೇ ಜಿಲ್ಲಾಡಳಿತ ದುರಸ್ತಿ ಮಾಡಿಸಿಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಒತ್ತಾಯಿಸಿದರು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರ ದೂರಿನ ಮೇರೆಗೆ ಭಾನುವಾರ ಕಾಲೇಜಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚುನಾವಣೆ ಸಿಬ್ಬಂದಿ, ತಮ್ಮ ಅನುಕೂಲಕ್ಕೆ ತಕ್ಕಂತೆ ವಿದ್ಯುತ್ ಸಂಪರ್ಕ, ಇಂಟರ್ನೆಟ್ ಸಂಪರ್ಕ ಪಡೆಯಲು ಇಡೀ ಕಾಲೇಜಿನ ವಿದ್ಯುತ್ ಸಂಪರ್ಕ ಜಾಲಕ್ಕೆ ಧಕ್ಕೆ ತಂದಿದ್ದಾರೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ನೇತಾಡುತಿವೆ, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೆ ಮತ ಪೆಟ್ಟಿಗೆ ದಾಸ್ತಾನು ಇರಿಸಿದ್ದ ಕೊಠಡಿಯ ಕಿಟಕಿಗಳಿಗೆ ಅಳವಡಿಸಿದ್ದ ಪ್ಲೈವುಡ್ ಶೀಟ್ಗಳನ್ನು ತೆಗೆದಿಲ್ಲ. ಇದರಿಂದ ಇಡೀ ಕೊಠಡಿಯೇ ಕಗ್ಗತ್ತಲಂತೆ ಕಾಣುತ್ತಿದೆ. ಅಲ್ಲದೆ ಮತ ಎಣಿಕೆಗೆ ಅಗತ್ಯವಿರುವ ಕೊಠಡಿ ಸಿದ್ದಪಡಿಸಿಕೊಳ್ಳಲು ಆ ಕೊಠಡಿಗಳಲ್ಲಿದ್ದ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಮತ್ತೊಂದು ಕಡೆಗೆ ಸ್ಥಳಾಂತರಿಸುವಾಗ ಡೆಸ್ಕ್, ಕುರ್ಚಿಗಳು ಮುರಿದು ಹೋಗಿವೆ. ಪ್ರಯಾಗಾಲಯದ ಪರಿಕರಗಳು ಹಾಳಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಗಮನಕ್ಕೆ ಬಂದಿದ್ದರೂ ಅದನ್ನು ದುರಸ್ತಿ ಮಾಡಿಸಿಲ್ಲ. ಸುಮಾರು 50 ಲಕ್ಷ ರೂ.ಗಳಿಗೆ ಅಧಿಕ ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಚಿದಾನಂದ ಎಂ.ಗೌಡ ದೂರಿದರು.
ತಾಂತ್ರಿಕ ವಿದ್ಯಾರ್ಥಿಗಳು ಕಲಿಯಲು ಪ್ರಯೋಗಾಲಯ ಅಗತ್ಯ, ಜೊತೆಗೆ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಈಗಿನ ಪರಿಸ್ಥಿತಿ ನೋಡಿದರೆ ರೀ ವೈರಿಂಗ್ ಮಾಡುವ ಅಗತ್ಯವಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿ, ದುರಸ್ತಿ ಕಾರ್ಯ ನಡೆಸಬೇಕು ಎಂದರು. ಈ ವೇಳೆ ಕಾಲೇಜಿನ ಕೆಲಸ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: tumkurnews.in@gmail.com
ವೆಬ್ ಸೈಟ್ : https://www.tumkurnews.in/