web analytics
My page - topic 1, topic 2, topic 3
2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ; ಡಿ.ಕೆ.ಶಿವಕುಮಾರ್

2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ; ಡಿ.ಕೆ.ಶಿವಕುಮಾರ್

 1,493 

Tumkurnews.in
ತುಮಕೂರು; ಬಿಜೆಪಿ ಪಕ್ಷದ ಮುಖಂಡರಿಗೆ ಪ್ರಾದೇಶಿಕತೆಯ ಕುರಿತು ಗೌರವವಿಲ್ಲ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಯಾವುದೇ ಬದ್ದತೆಯಿಲ್ಲ, ಭದ್ರಾವತಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಅದು ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಸಿದ್ದಗಂಗಾ ಮಠಕ್ಕೆ ಭಾನುವಾರ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಾತೃಭಾಷೆಯಲ್ಲಿಯೇ ಭಾಷಣ ಆರಂಭಿಸುವ ಬಿಜೆಪಿ ಮುಖಂಡರು, ಭದ್ರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಹಿಂದಿಮಯವನ್ನಾಗಿಸಿದ್ದಾರೆ. ಇದನ್ನು ನೋಡಿದರೆ, ಕನ್ನಡಿಗರ ಬಗ್ಗೆ ಇವರಿಗೆ ಇರುವ ಅಸಡ್ಡೆ, ನಿರ್ಲಕ್ಷ ಮನೋಭಾವನೆ ಎಂತದ್ದು ಎಂಬುದು ರಾಜ್ಯದ ಜನತೆಗೆ ಗೊತಾಗಿದೆ ಎಂದರು.
ಶಂಕುಸ್ಥಾಪನಾ ನಾಮಫಲಕದಲ್ಲಿ ಕನ್ನಡ ಭಾಷೆ ಮರೆಯಾಗಿರುವ ಬಗ್ಗೆ ಇದುವರೆಗೂ 25 ಸಂಸದರಲ್ಲಿ ಒಬ್ಬರೂ ಮಾತನಾಡದಿರುವುದು ಈ ನಾಡಿಗೆ ಬಗೆದ ದ್ರೋಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಈ ದೇಶದ ಬೆನ್ನೆಲುಬು, ಕಳೆದ 50ಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ತಮ್ಮ ಕುಟುಂಬ ಸಮೇತ ಹೋರಾಟದಲ್ಲಿ ನಿರತರಾಗಿದ್ದಾರೆ. ರೈತರ ಪಾಲಿಗೆ ಮರಣ ಶಾಸನವಾಗಿರುವ ಕೃಷಿಗೆ ಸಂಬಂಧಿಸಿದ ಮೂರು ಶಾಸನಗಳನ್ನು ಹಿಂಪಡೆಯಬೇಕೆಂಬುದು ಅವರ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷ ರೈತರ ಹೋರಾಟದ ಪರವಾಗಿದೆ. ಈ ಹಿನ್ನೆಲೆಯಲ್ಲಿ ಜ.20 ರಂದು ರೈತರಿಗೆ ನೈತಿಕ ಬೆಂಬಲ ಘೋಷಿಸಿ,ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರಾಜಭವನಕ್ಕೆ ತೆರಳಲಿದ್ದೇವೆ. ರಾಜ್ಯದ ಎಲ್ಲಾ ಕಡೆಗಳಿಂದಲೂ ಬೆಂಗಳೂರಿಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗಮಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ ಆಡಳಿತ ಕುಸಿದಿದೆ. ಸಾರ್ವಜನಿಕರ ಹಿತ ಕಾಯುವ ಯಾವುದೇ ಅಜೆಂಡಾ ಸರಕಾರದ ಮುಂದಿಲ್ಲ. ತಮ್ಮ ವೈಯುಕ್ತಿಕ ಲಾಭಕೋಸ್ಕರವೇ ಹಲವಾರು ಹಿಡನ್ ಅಜೆಂಡಾಗಳನ್ನು ಜಾರಿಗೆ ತರುತ್ತಿದ್ದಾರೆ. ಬಿಜೆಪಿ ಪಕ್ಷದ ಈ ನಡವಳಿಕೆಗೆ ಜನ ತಕ್ಕ ಉತ್ತರವನ್ನು ಸೂಕ್ತ ಸಮಯದಲ್ಲಿ ನೀಡಲಿದ್ದಾರೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಡಿ.ಕೆ.ಶಿ, ತಮ್ಮ ಮನೆಯ ಶುಭ ಕಾರ್ಯದ ನಿಮಿತ್ತ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದಿದ್ದು, ಇದೊಂದು ಖಾಸಗಿ ಭೇಟಿಯಷ್ಟೇ ಎಂದರು.
ಈ ವೇಳೆ ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಕೆಂಚಮಾರಯ್ಯ, ಮುಖಂಡರಾದ ಮರಿಚನ್ನಮ್ಮ, ನಟರಾಜು, ಗೀತ ಸೇರಿದಂತೆ ಹಲವರಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!