ತುಮಕೂರು ನೂತನ ಬಸ್ ನಿಲ್ದಾಣದ ಉದ್ಘಾಟನೆ ಯಾವಾಗ?; ಸಚಿವರ ಮಾಹಿತಿ

1 min read

 

 

 

 

 

ಗೃಹ ಸಚಿವರಿಂದ ‘ಸ್ಮಾರ್ಟ್ ಸಿಟಿ’ ಯೋಜನೆಗಳ ಪ್ರಗತಿ ಪರಿಶೀಲನೆ

Tumkurnews
ತುಮಕೂರು: ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಸ್ಮಾರ್ಟ್ ಸಿಟಿ, ಟೂಡಾ ಮತ್ತು ಪಿಡಬ್ಲ್ಯೂಡಿ ಇಲಾಖೆಗಳಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳ ಅನುಷ್ಠಾನವನ್ನು ಮುಂದಿನ 50 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕು ಮತ್ತು ಯೋಜನೆಗಳು ಜನರಿಗೆ ಸಂಪೂರ್ಣವಾಗಿ ಉಪಯೋಗವಾಗಬೇಕು ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಸ್ಮಾರ್ಟ್ ಬಸ್‍ನಿಲ್ದಾಣ ಮುಂದಿನ ನವೆಂಬರ್ ಮಾಹೆಯೊಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು. ಜನರಿಗೆ ಅನುಕೂಲವಾಗುವಂತೆ ವೈಫೈ ಸಂಪರ್ಕ ಸೇರಿದಂತೆ ವಿನೂತನ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸುವಂತೆ ಕೆಎಸ್‍ಆರ್‍ಟಿಸಿ ಮತ್ತು ಸ್ಮಾರ್ಟ್ ಸಿಟಿ ಎಂಡಿ ಅವರಿಗೆ ಸೂಚಿಸಿದರು.
ಅಂತೆಯೇ, ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ನಿರ್ಮಾಣವಾಗಿರುವ ‘ಸೆಂಟ್ರಲೈಸ್ಡ್ ಸೆಂಟರ್’ಅನ್ನು ಕಾಮಗಾರಿ ಪೂರ್ಣಗೊಂಡ ನಂತರ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದರು.
ನಗರದ ಎಲ್ಲಾ ಪ್ರಮುಖ ಜಂಕ್ಷನ್‍ಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿ ವೈಫೈ ಸಂಪರ್ಕಗಳು ಇರಬೇಕು. ಈಗ ಸ್ಮಾರ್ಟ್ ಸಿಟಿ ವತಿಯಿಂದ 6 ಪ್ರಮುಖ ಕೇಂದ್ರಗಳಲ್ಲಿ ಮಾತ್ರ ವೈಫೈ ಸಂಪರ್ಕ ಇದ್ದು, ಇದನ್ನು ಹೆಚ್ಚಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿ ಅವರಿಗೆ ಸೂಚಿಸಿದರು.
ತುಮಕೂರು ನಗರವನ್ನು ಪ್ರವೇಶಿಸುವ ಜನರಿಗೆ ನಗರದ ಸೌಂದರ್ಯ ಎದ್ದು ಕಾಣಬೇಕು. ಎಲ್ಲೆಡೆ ಸ್ಮಾರ್ಟ್‌ ನೆಸ್ ಇರಬೇಕು. ರಸ್ತೆಯ ಅಕ್ಕ-ಪಕ್ಕ ಮತ್ತು ಮಧ್ಯ ಭಾಗಗಳಲ್ಲಿ ಹಸಿರೀಕರಣವಾಗಬೇಕು. ರಸ್ತೆಯ ಉಭಯ ಬದಿಗಳಲ್ಲಿ ಬೋಗನ್ ವಿಲ್ಲಾ ಗಿಡಗಳನ್ನು ನೆಡುವ ಮೂಲಕ ಹಾಗೂ ಹೂ ಗಿಡಗಳನ್ನು ಬೆಳೆಸುವ ಮೂಲಕ ನಗರದ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ತುಮಕೂರು ನಗರ ಪ್ರವೇಶಿಸುವ ಎಲ್ಲಾ ಮುಖ್ಯ ದ್ವಾರಗಳಲ್ಲಿ “ಕಲ್ಪತರು ನಾಡಿಗೆ ಪ್ರವೇಶ” ಎಂಬ ನಾಮಫಲಕವಿರಬೇಕು ಎಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಗುಣಮಟ್ಟವುಳ್ಳ ಜಿಮ್‍ವೊಂದನ್ನು ನಿರ್ಮಿಸಬೇಕು. ನಗರದ 4 ದಿಕ್ಕಿನಲ್ಲಿ ಸುಸಜ್ಜಿತವಾದ ಎಲ್ಲಾ ವೈದ್ಯಕೀಯ ಉಪಕರಣಗಳನ್ನೊಳಗೊಂಡ ಆಂಬುಲೆನ್ಸ್’ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಿಂಂದ ನೀಡಬೇಕು. ನಗರದ ಧೋಬಿಘಾಟ್‍ನಲ್ಲಿ ಅತ್ಯಾಧುನಿಕ ಬಟ್ಟೆ ತೊಳೆಯುವ ಯಂತ್ರ ಹಾಗೂ ಡ್ರೈಯರ್’ಗಳನ್ನು ಇರಿಸಬೇಕು. ಕೊಳಚೆ ನೀರು ಕಾಮಗಾರಿಯನ್ನು ಪೂರ್ಣಗೊಳಿಸದ ಹೊರತು ಅಮಾನಿಕೆರೆಯಿಂದ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಿಲ್ಲ. ಅಮಾನಿಕೆರೆ ಮುಂಭಾಗದ ಗ್ಲಾಸ್ ಹೌಸ್ ಸುತ್ತ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಮತ್ತು ಸ್ಮಾರ್ಟ್ ಸಿಟಿಯಿಂದ ನಿರ್ಮಿಸಲಾದ ಎಲ್ಲಾ ಕಾಮಗಾರಿಗಳ ನಿರ್ವಹಣೆಗೆ ಪ್ರಾಯೋಜನೆ ಮಾಡಿಕೊಳ್ಳಬೇಕು. ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಉಳಿಕೆಯಾಗಿರುವ 8 ಕೋಟಿ ರೂ. ಅನುದಾನವನ್ನು ಉಪಯುಕ್ತ ಕೆಲಸಗಳಿಗೆ ಬಳಸುವಂತೆ ಸೂಚಿಸಿದರು.

(ಚಿತ್ರ; ತುಮಕೂರು ನೂತನ ಬಸ್ ನಿಲ್ದಾಣದ ನೀಲಿ ನಕ್ಷೆ)

You May Also Like

More From Author

+ There are no comments

Add yours