1,404
Tumkurnews.in
ತುಮಕೂರು; ಸಿದ್ದಗಂಗಾ ಮಠದಲ್ಲಿ ಗುರುವಾರ ವಿಶ್ವಗುರು ಬಸವಣ್ಣ ಹಾಗೂ ಲಿಂ.ಶ್ರೀ ಅಟವೀ ಸ್ವಾಮೀಜಿಯವರ 120ನೇ ಮತ್ತು ಲಿಂ.ಶ್ರೀ ಉದ್ದಾನ ಮಹಾಶಿವಯೋಗಿಗಳ 80ನೇ ಪುಣ್ಯಾರಾಧನೆಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸರಳವಾಗಿ ಆಚರಿಸಲಾಯಿತು.
ಪ್ರತಿ ವರ್ಷ ಸುಗ್ಗಿ ಹಬ್ಬ ಸಂಕ್ರಾಂತಿಯಂದು ಸಿದ್ದಗಂಗಾ ಮಠದಲ್ಲಿ ಈ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮವಿಲ್ಲದೆ ಮೆರವಣಿ, ಉತ್ಸವ ನಡೆಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಶ್ರೀಮಠದ ಆವರಣದಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಹರಗುರುಚರಮೂರ್ತಿಗಳ ನೇತೃತ್ವದಲ್ಲಿ ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ ಉತ್ಸವ ಶ್ರೀಮಠದ ಆವರಣದಲ್ಲಿ ಸರಳವಾಗಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪ್ರತಿ ವರ್ಷವೂ ಕೂಡ ಸಂಕ್ರಾಂತಿಯ ಸಂದರ್ಭದಲ್ಲಿ ಶ್ರೀಮಠದಲ್ಲಿ ಬಸವ ಜಯಂತಿ ಮುಕ್ತಾಯ ಸಮಾರಂಭ, ಅಟವಿ ಶ್ರೀಗಳು ಮತ್ತು ಉದ್ದಾನ ಶಿವಯೋಗಿಗಳ ಪುಣ್ಯಾರಾಧೆಯನ್ನು ಸಡಗರದಿಂದ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಪುಣ್ಯಾರಾಧನೆಯನ್ನು ಉತ್ಸವಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸಲಾಗಿದೆ ಎಂದರು.
ಸೂರ್ಯ ತನ್ನ ಪಥವನ್ನು ಬದಲಾಯಿಸುವ ಹಾಗೆ ಮನುಷ್ಯನು ಸಹ ತನ್ನ ಹಳೆ ಪದ್ದತಿಯನ್ನು ಬಿಟ್ಟು ಹೊಸ ಪಥವನ್ನು ಬದಲಾಯಿಸುವ ವಾತಾವರಣ ಶಿವಪಥವಾಗಬೇಕು ಮಂಗಳಕರವಾದ ಪಥವಾಗಬೇಕು ಎಂದರು. ಉತ್ತರಾಯಣ ಕಾಲದಲ್ಲಿ ತನು, ಮನ, ಭಾವಗಳನ್ನು ಶುದ್ಧಗೊಳಿಸುವ ಸುಸಂದರ್ಭ ಇದಾಗಿದೆ. ತನು, ಮನ, ಭಾವಗಳನ್ನು ಶುದ್ಧೀಕರಣಗೊಳಿಸುವ ಈ ಪವಿತ್ರವಾದ ಹಬ್ಬದ ಸಂದರ್ಭದಲ್ಲಿ ಶ್ರೀಮಠಕ್ಕೆ ಭದ್ರ ಬುನಾದಿ ಹಾಕಿದ ಅಟವೀ ಶ್ರೀಗಳು ಮತ್ತು ಉದ್ಧಾನ ಶಿವಯೋಗಿಗಳು ಈ ಧಾರ್ಮಿಕ ಆಚರಣೆ ಜತೆಗೆ ಐತಿಹಾಸಿಕವಾದಂತಹ ದಾಸೋಹ ಕಾಯಕ, ಶಿಕ್ಷಣ ಸೇವೆಯನ್ನು ಸೇರಿಸುವ ಮೂಲಕ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿದರು. ಶಿವಯೋಗಿಗಳ ಈ ಮಹತ್ಕಾರ್ಯವನ್ನು ಸ್ಮರಣಿಸುವುದು ನಮ್ಮೆಲ್ಲ ಪುಣ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು.