4,555
Tumkurnews.in
ತುಮಕೂರು; ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಯಶಸ್ವಿನಿ ಬಂಧಿತ ಆರೋಪಿಯಾಗಿದ್ದು, ಈಕೆ ಕಳೆದೊಂದು ವರ್ಷದಿಂದ ತಲೆ ಮರೆಸಿಕೊಂಡಿದ್ದಳು ಎನ್ನಲಾಗಿದೆ.
ಜಿಲ್ಲೆಯ ಪೊಲೀಸರ ಪ್ರಯಾಣ ಭತ್ಯೆ ಮೊತ್ತ ಸುಮಾರು 20 ಲಕ್ಷ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಈಕೆಯ ಮೇಲಿದೆ.
ಪ್ರಕರಣ ಬೆಳಕಿಗೆ ಬಂದು ಒಂದು ವರ್ಷ ಕಳೆದಿದ್ದರೂ ಆರೋಪಿಯ ಬಂಧನವಾಗಿರಲಿಲ್ಲ, ಈ ಬಗ್ಗೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ತನಿಖೆ ನನೆಗುದಿ ಬಿದ್ದಿತ್ತು.

(ಯಶಸ್ವಿನಿ)
ಇತ್ತೀಚೆಗೆ ನ್ಯಾಯಾಲಯದಲ್ಲಿ ನಡೆದ ಪ್ರಕರಣದ ವಿಚಾರಣೆ ವೇಳೆ ಆರೋಪಿಯನ್ನು ಬಂಧಿಸದೇ ಕಾಲಹರಣ ಮಾಡುತ್ತಿರುವ ಪೊಲೀಸರ ನಡೆಗೆ ನ್ಯಾಯಾಧೀಶರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಬುಧವಾರ ಆರೋಪಿ ಯಶಸ್ವಿನಿಯನ್ನು ಬಂಧಿಸಿದ್ದಾರೆ.
ಕ್ರಿಮಿನಲ್ ಪ್ರಕರಣ ಇದಾಗಿದ್ದು, ಈಕೆಯ ಜತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಆಡಳಿತಾಧಿಕಾರಿ ಮತ್ತು ಕೋಶಾಧಿಕಾರಿಗಳಾದ ಕೃಷ್ಣಪ್ಪ ಹಾಗೂ ಪುಟ್ಟಾರಾಧ್ಯ ಎಂಬುವರ ಮೇಲೆಯೂ ಇದೇ ಆರೋಪ ಕೇಳಿ ಬಂದಿದೆ. ತನಿಖೆ ಮುಂದುವರೆದಿದೆ.
*
ಯಶಸ್ವಿನಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.
-ಡಾ.ಕೆ ವಂಶಿಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ.