web analytics
My page - topic 1, topic 2, topic 3
ತಾಯಿ ಇಲ್ಲದ ತಬ್ಬಲಿ ಮಗಳನ್ನು ಕೊಂದನಾ ಕುಡುಕ ತಂದೆ?; ಬಾಲಕಿಯ ಅನುಮಾನಸ್ಪದ ಸಾವು

ತಾಯಿ ಇಲ್ಲದ ತಬ್ಬಲಿ ಮಗಳನ್ನು ಕೊಂದನಾ ಕುಡುಕ ತಂದೆ?; ಬಾಲಕಿಯ ಅನುಮಾನಸ್ಪದ ಸಾವು

 2,825 

Tumkurnews.in
ತುಮಕೂರು; ತಾಲ್ಲೂಕಿನ ಸಮುದ್ರಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕಿಯ ತಂದೆ ವಿರುದ್ಧ ದೂರು ದಾಖಲಾಗಿದೆ.
ಸಮುದ್ರದಹಳ್ಳಿಯ ರಾಜಣ್ಣ ಎಂಬಾತನ ಪುತ್ರಿ ಚೆಲ್ವಿ(15) ಜ‌.12ರಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದನ್ನು ಗಮನಿಸಿದ ನೆರೆಹೊರೆಯವರು ಬೆಂಗಳೂರಿನಲ್ಲಿ ವಾಸವಿರುವ ಆಕೆಯ ಅಜ್ಜ, ಅಜ್ಜಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ತುಮಕೂರಿಗೆ ಆಗಮಿಸಿರುವ ಬಾಲಕಿಯ ಅಜ್ಜ, ಅಜ್ಜಿ ಆಕೆಯ ತಂದೆಯೇ ಕೊಲೆ ಮಾಡಿ ನೇಣು ಹಾಕಿರಬಹುದೆಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.


9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ತಾಯಿ ಈಗಾಗಲೇ ಮೃತರಾಗಿದ್ದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಆಕೆ ಬೆಂಗಳೂರಿನ ಅಜ್ಜ, ಅಜ್ಜಿ(ತಾಯಿಯ ಪೋಷಕರು) ಮನೆಗೆ ತೆರಳಿದ್ದಳು. ಇದೀಗ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ಕಳೆದ ಭಾನುವಾರವಷ್ಟೇ ಸಮುದ್ರದಹಳ್ಳಿಗೆ ಬಂದಿದ್ದಳು. ಆದರೆ ವಾರ ಕಳೆಯುವಷ್ಟರಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ.
ಬಾಲಕಿಯ ತಂದೆ ಮದ್ಯವ್ಯಸನಿಯಾಗಿದ್ದು, ಕುಡಿದ ಮತ್ತಿನಲ್ಲಿ ಮಗಳನ್ನು ಹತ್ಯೆ ಮಾಡಿರಬಹುದೆಂದು ಬಾಲಕಿಯ ಅಜ್ಜ ಶಿವಪ್ಪ ಹಾಗೂ ಅಜ್ಜಿ ಸರೋಜಮ್ಮ ನೀಡಿರುವ ದೂರು ಆಧರಿಸಿ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.
ತಂದೆ ವರ್ತನೆ ಬಗ್ಗೆ ಶಂಕೆ; ಮಗಳು ಮೃತ ಪಟ್ಟಿದ್ದರೂ ತಂದೆಯ ಕಣ್ಣಲ್ಲಿ ಒಂದೇ ಒಂದು ಹನಿ ನೀರು ಬಂದಿಲ್ಲ, ಮೃತ ದೇಹದ ಬಳಿಗೂ ಆತ ಸುಳಿಯುತ್ತಿಲ್ಲ, ಆತನ ವರ್ತನೆಯೇ ಅನುಮಾನಸ್ಪದವಾಗಿದೆ ಎಂದು ಬಾಲಕಿಯ ಸಂಬಂಧಿಕರು ತಿಳಿಸಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!