web analytics
My page - topic 1, topic 2, topic 3
ಕೃಷಿ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸೂಚನೆ; ಕೇಂದ್ರಕ್ಕೆ ಕೋರ್ಟ್ ಮಾಡಿದ ಕಪಾಳ ಮೋಕ್ಷ ಎಂದ ರೈತ ಸಂಘ

ಕೃಷಿ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸೂಚನೆ; ಕೇಂದ್ರಕ್ಕೆ ಕೋರ್ಟ್ ಮಾಡಿದ ಕಪಾಳ ಮೋಕ್ಷ ಎಂದ ರೈತ ಸಂಘ

 1,542 

Tumkurnews.in

ತುಮಕೂರು; ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು, ಅಸಂವಿಧಾನಾತ್ಮಕವಾಗಿ ವರ್ತಿಸುತ್ತಿದ್ದ ಕೇಂದ್ರ ಸರಕಾರಕ್ಕೆ ರೈತ ವಿರೋಧಿ ಕಾಯ್ದೆಗಳನ್ನು ತಡೆ ಹಿಡಿಯಿರಿ ಎಂದು ಹೇಳುವ ಮೂಲಕ ಸುಪ್ರಿಂಕೋರ್ಟ್ ಕಪಾಳಮೋಕ್ಷ ಮಾಡಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.26 ರಂದು ದೆಹಲಿಯಲ್ಲಿ ಹೋರಾಟ ನಿರತ ರೈತರು ನಡೆಸುವ ಟ್ರಕ್‍ ಮತ್ತು ಟ್ಯಾಕ್ಟರ್ ಪೆರೆಡ್‍ಗೆ ಪರ್ಯಾಯವಾಗಿ, ಕರ್ನಾಟಕದಲ್ಲಿಯೂ ಹೋರಾಟ ರೂಪಿಸಲಾಗುವುದು ಎಂದರು.

“ಪ್ರಜಾಸತ್ತಾತ್ಮಕವಾಗಿ ಜನಾಭಿಪ್ರಾಯದ ನಂತರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಸಿ ಕಾಯ್ದೆ ಜಾರಿಗೆ ತಂದಿದ್ದರೆ ರೈತರು ವಿರೋಧ ಮಾಡುತ್ತಿರಲಿಲ್ಲ. ಆದರೆ ಕೇಂದ್ರ ಸರಕಾರವು ಸರ್ವಾಧಿಕಾರಿ ಧೋರಣೆಯಿಂದ ಸುಗ್ರಿವಾಜ್ಞೆ ಮೂಲಕ ಜಾರಿಗೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸದರಿ ಕಾಯ್ದೆಗಳ ಜಾರಿಯನ್ನು ತಡೆ ಹಿಡಿಯಿರಿ. ಇಲ್ಲವೇ ನಾವೇ ತಡೆ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡುವ ಮೂಲಕ, ಈ ಕಾಯ್ದೆಗಳು ಜನಪರವಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬಂದಿದೆ ಎಂದು ತಿಳಿಸಿದರು.
ರಾಜ್ಯಪಾಲರಿಗೆ ಸಾಮಾನ್ಯ ಪ್ರಜ್ಞೆ ಇರಬೇಕು, ಗೋಹತ್ಯೆ ನಿಷೇಧ ಕಾಯ್ದೆ ವಿಧಾನ ಪರಿಷತ್ ಮತ್ತು ಸಭೆಯಲ್ಲಿ ಪಾಸ್ ಆಗಬೇಕು ಎಂಬ ಅರಿವಾರದರೂ ಇರಬೇಕು, ಅದನ್ನು ಬಿಟ್ಟು ಕಾನೂನಿನ ಬಿಕ್ಕಟ್ಟು ಇದ್ದರೂ ಕಾಯ್ದೆ ಜಾರಿಗೆ ರಾಜ್ಯಪಾಲರು ಸಹಿ ಹಾಕುವ ಮೂಲಕ ತಮ್ಮ ಹುದ್ದೆಗೆ ಅಗೌರವ ತರುವ ರೀತಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಜ.26ರಂದು ನಡೆಯಲಿರುವ ಮೋದಿ ಅವರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ, ರಾಷ್ಟ್ರಧ್ವಜದೊಂದಿಗೆ ದೆಹಲಿಯಲ್ಲಿ ಟ್ರಾಕ್ಟರ್, ಟ್ರಕ್ ಗಳೊಂದಿಗೆ ಪರೇಡ್ ಮಾಡುತ್ತೇವೆ. ಬೆಂಗಳೂರಿನಲ್ಲಿಯೂ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ನಡೆದಿದೆ, ಸದ್ಯದಲ್ಲಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಲಾಗುವುದು ಎಂದರು.
ರೈತರ ಸಂಕಷ್ಟಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಂದಿಸಿಲ್ಲ. ಕಾನೂನು ಮಂತ್ರಿಗಳಿಗೂ ಗೊತ್ತಿಲ್ಲದಂತೆಯೇ ಜಾನುವಾರು ಹತ್ಯೆ ನಿಷೇದ ಕಾಯ್ದೆ ರೂಪಿಸಲಾಗುತ್ತಿದೆ. ಹೊಸದಾಗಿ ಜಾರಿಗೆ ಬಂದಿರುವ ಕಾಯ್ದೆಗಳ ಬಗ್ಗೆ ಸಂಸದರು ಮತ್ತು ಶಾಸಕರುಗಳಿಗೆ ಮಾಹಿತಿಯೇ ಇಲ್ಲ. ಎಲ್ಲವನ್ನು ಕಾರ್ಪೋರೇಟ್ ಕಂಪನಿಗಳು ನಿರ್ಧರಿಸುತ್ತಿದ್ದು, ಮೋದಿ ಅವುಗಳ ಗುಲಾಮರಂತೆ ವರ್ತಿಸುತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ರೈತರಿಗೆ ಕರ್ನಾಟಕ ಸರಕಾರ ಸುಳ್ಳು ಭರಸವೆಯ ಕೋಟೆ ಕಟ್ಟುತ್ತಿದೆ. ಕೃಷಿ ಮಾರುಕಟ್ಟೆ ಮುಚ್ಚಿಸುವುದಿಲ್ಲ ಎಂದು ಎಪಿಎಂಸಿ ಬೈಪಾಸ್ ಕಾಯ್ದೆಯನ್ನು ಜಾರಿಗೆ ತಂದು ಕಾರ್ಪೋರೆಟ್ ಮತ್ತು MNCಗಳಿಗೆ ಕೃಷಿ ಉತ್ಪನ್ನ ಖರೀದಿಸಲು, ಮಾರಾಟ ಮಾಡಲು ಅವಕಾಶ ಕಲ್ಪಿಸಿ, ನಾಜೂಕಾಗಿ ರೈತರ ದಾರಿ ತಪ್ಪಿಸಿ, ರೈತರನ್ನು ಬೀದಿಪಾಲು ಮಾಡಲು ಹೊರಟಿದೆ.

ಒಂದೆಡೆ ನಾವು ಕೃಷಿ ಮಾರಾಟ ವ್ಯವಸ್ಥೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ರಿಲೆಯನ್ಸ್ ಕಂಪನಿ ಹೇಳುತ್ತಿದೆ. ಆದರೆ ರಾಯಚೂರು, ಸಿಂಧನೂರು ರೈತರ ಬಳಿ ಭತ್ತ ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಯಡಿಯೂರಪ್ಪನವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಅಮೆರಿಕಾದ ಹಾಲು ಉತ್ಪನ್ನ ಖರೀದಿಸಿ, ದೇಶದ ಗ್ರಾಮೀಣ ಭಾಗದ ಹೈನುಗಾರಿಕೆ ಕೈಬಿಡಿಸುವ ಪ್ರಯತ್ನದ ಹಿನ್ನೆಲೆಯಲ್ಲಿ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. ಎಂಎಸ್ ಪಿ ಇಲ್ಲದ ಮೇಲೆ ದರ ನಿಗದಿ ಪಡಿಸುವುದು ಹೇಗೆ, ಪಂಜಾಬ್‍ನಲ್ಲಿ ಯಾವುದೇ ಖರೀದಿದಾರ ಎಂಎಸ್ ಪಿಗಿಂತ ಕಡಿಮೆ ಖರೀದಿಸಿದರೆ ಜೈಲು ಶಿಕ್ಷೆಯ ಕಾಯ್ದೆ ತರಲಾಗಿದೆ. ಯಡಿಯೂರಪ್ಪ ಕರ್ನಾಟಕದಲ್ಲಿಯೂ ಈ ಕಾಯ್ದೆ ಜಾರಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಎಂಎಸ್ಪಿಗೆ ಯಾವುದೇ ಮಾನ್ಯತೆ ಇಲ್ಲ. ಅಲ್ಲದೆ ಎಪಿಎಂಸಿಯಿಂದ ಹೊರಗೆ ಖರೀದಿ ನಡೆದು ಅನ್ಯಾಯವಾದರೆ ಯಾರನ್ನು ಪ್ರಶ್ನಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲ. ಎಪಿಎಂಸಿಯ ಯಾವ ಕಾಯ್ದೆಗಳೂ ರಿಲೆಯನ್, ಅದಾನಿ ಗ್ರೂಪ್ ಕಂಪನಿಗಳಿಗೆ ಅನ್ವಯವಾಗಲ್ಲ. ಮೋಸ ಮಾಡುವವರ ಬೆನ್ನ ಹಿಂದೆ ಬಿಜೆಪಿ ನಿಂತಿದೆ, ರಿಲೆಯನ್ಸ್ ಸಹ ಕಾನೂನಿನ ಚೌಕಟ್ಟಿಗೆ ಒಳಪಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಬಸವರಾಪ್ಪ, ತುಮಕೂರು ಜಿಲ್ಲಾಧ್ಯಕ್ಷ ಆನಂದಪಟೇಲ್, ವಿವಿಧ ಜಿಲ್ಲೆಗಳ ಅಧ್ಯಕ್ಷರುಗಳು , ಪದಾಧಿಕಾರಿಗಳು ಉಪಸ್ಥಿತರಿದ್ದರು.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!