web analytics
My page - topic 1, topic 2, topic 3
ಮಧುಗಿರಿಯಲ್ಲಿ ಬೀದಿ ನಾಯಿಗಳ ಉಪಟಳ; ಹೆಚ್ಚಿದ ವಾಹನ ಅಪಘಾತ

ಮಧುಗಿರಿಯಲ್ಲಿ ಬೀದಿ ನಾಯಿಗಳ ಉಪಟಳ; ಹೆಚ್ಚಿದ ವಾಹನ ಅಪಘಾತ

 682 

* ಪುರಸಭೆ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
* ವಾಹನ ಸವಾರರ ಗೋಳು ಕೇಳುವವರಾರು?
– ನಾಗಾರ್ಜುನ. ಹೆಚ್.ಎನ್ ಮಧುಗಿರಿ Tumkurnews.in
ಮಧುಗಿರಿ; ಪಟ್ಟಣದ ಹಲವು ಕಡೆಗಳಲ್ಲಿ ಹಗಲು, ರಾತ್ರಿ ಎನ್ನದೆ ಬೀದಿ ನಾಯಿಗಳು ನೀಡುತ್ತಿರುವ ಕಾಟದಿಂದ ವಾಹನ ಸವಾರರು ಸೇರಿದಂತೆ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರಿಗೆ ಕಾಟ ನೀಡುತ್ತಿರುವ ಬೀದಿನಾಯಿಗಳ ಹಾವಳಿ ನಿಯಂತ್ರಿಸುವುದು ಅಥವಾ ಅವುಗಳ ಸಂತಾನ ಶಕ್ತಿ ಹರಣದಂತಹ ಶಸ್ತ್ರಚಿಕಿತ್ಸೆಗೆ ಪುರಸಭೆ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಪುರಸಭೆಯು ಈ ಬಗ್ಗೆ ಮೌನವಾಗಿರುವುದು ಪಟ್ಟಣದ ನಾಗರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪಾವಗಡ ಗೇಟ್ ಸುತ್ತಮುತ್ತಲೂ, ಗೌರಿಬಿದನೂರು ರಸ್ತೆ, ಮಾಂಸದ ಮಾರುಕಟ್ಟೆ, ದೊಡ್ಡಪೇಟೆ, ಖಾಸಗಿ ಬಸ್ ನಿಲ್ದಾಣ, ತುಮಕೂರು  ರಸ್ತೆ, ಕೆ.ಆರ್ ಬಡಾವಣೆ, ರಾಘವೇಂದ್ರ ಕಾಲೋನಿ ಸೇರಿದಂತೆ ಪಟ್ಟಣದ ಹಲವು ಕಡೆಗಳಲ್ಲಿ ದಿನದಿಂದ ದಿನಕ್ಕೆ ನಾಯಿಗಳ ದಂಡು ಹೆಚ್ಚುತ್ತಲೇ ಇವೆ. ಹಲವು ವರ್ಷಗಳ ಹಿಂದೆ ಪುರಸಭೆ ಬೀದಿನಾಯಿಗಳ ನಿಯಂತ್ರಣದ ಬಗ್ಗೆ ಕೆಲವು ಕ್ರಮ ಕೈಗೊಂಡಿತ್ತು. ಅದನ್ನು ಹೊರತುಪಡಿಸಿದರೆ, ಇತ್ತಿಚಿನ ದಿನಗಳವರೆಗೂ ಯಾವುದೇ ಸೂಕ್ತ ಕ್ರಮ ‌ವಹಿಸದೇ ಇರುವುದು ಪಟ್ಟಣದ ನಿವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಕ್ಕಳ ಮೇಲೆ ದಾಳಿ; ಬೀದಿ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ಚಿಕ್ಕ ಮಕ್ಕಳ ಮೇಲೆ ಮುಗಿ ಬೀಳುತ್ತಿರುವುದರಿಂದ, ಮಕ್ಕಳು ನಾಯಿ ಕಡಿತಕ್ಕೆ ತುತ್ತಾಗುತ್ತಿರುವುದರಿಂದ ಮಕ್ಕಳಿಗೆ ರೇಬಿಸ್ ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುವ ಭೀತಿ ಎದುರಾಗಿದೆ. ಮಕ್ಕಳು ರಸ್ತೆಗಳಲ್ಲಿ ಸಂಚರಿಸಲು, ಮನೆಯ ಮುಂದೆ ಆಟವಾಡಲು ಕೂಡ ಭಯಬೀತರಾಗಿದ್ದಾರೆ. ಕೆಲವರ ನಿರ್ಲಕ್ಷ್ಯದಿಂದ ಹಲವು ಮಕ್ಕಳು  ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿರುವುದು ಶೋಚನಿವಾದದ್ದಾಗಿದೆ.

(ಮಧುಗಿರಿಯಲ್ಲಿ ಬೀದಿ ನಾಯಿಗಳ ದಂಡು)
ಪುರಸಭೆ ಅಧಿಕಾರಿಗಳ ವಾದ; ಪಟ್ಟಣದ ಎಲ್ಲಾ ವಲಯಗಳ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಸಾಕಷ್ಟು ಹಣದ ಅವಶ್ಯಕತೆಯಿದೆ. ಶಸ್ತ್ರಚಿಕಿತ್ಸೆ ನಂತರವೂ ನಾಯಿಗಳ ಸಂತಾನ ನಿಲ್ಲುತ್ತದೆ ಎನ್ನಲು ಸಾಧ್ಯವಿಲ್ಲ ಮತ್ತು ಕಚ್ಚುವುದಿಲ್ಲ ಎಂದು ಹೇಳಲಾಗುವುದಿಲ್ಲ ಎನ್ನುವುದು ಪುರಸಭಾ ಅಧಿಕಾರಿಗಳ ವಾದವಾಗಿದೆ.
‘ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ತುಂಬ ಪ್ರಯತ್ನ ಪಡುತ್ತಿದ್ದೇವೆ ಹಾಗೂ ನಿಯಂತ್ರಣದಲ್ಲಿ ಇಟ್ಟಿದ್ದೇವೆ. ಆದರೂ ಕೆಲವು ಕಡೆಗಳಲ್ಲಿ ನಿಯಂತ್ರಣವಾಗುತ್ತಿಲ್ಲ. ಇದಕ್ಕೆ ಹೊಸ ರೀತಿಯ ಮಾರ್ಗ ಹುಡುಕ ಬೇಕಾದ ಪರಿಸ್ಥಿತಿ ಬಂದೊದಗಿದೆ’ ಎನ್ನುತ್ತಾರೆ ಅಧಿಕಾರಿಗಳು.
ಇದೊಂದು ರಾಜ್ಯ ವ್ಯಾಪಿ ಸಮಸ್ಯೆ; ಕೇವಲ ಪುರಸಭೆ ವತಿಯಿಂದ ನಾಯಿಗಳ ಹಾವಳಿ ನಿಯಂತ್ರಿಸಲು ಸಾಧ್ಯವಿಲ್ಲ. ಹುಚ್ಚು ಹಿಡಿದ ಹಾಗೂ ಅತೀ ವ್ಯಾಘ್ರವಾಗಿ ವರ್ತಿಸುವ ನಾಯಿಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ನಾಶ ಪಡಿಸುವ ಯೋಜನೆಯು ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಅನುಷ್ಟಾನವಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಏಕೆಂದರೆ ರಾಜ್ಯದ ಬಹುತೇಕ ಪಟ್ಟಣ ಹಾಗೂ ನಗರಗಳಲ್ಲಿ ಈ ರೀತಿಯ ಸಮಸ್ಯೆ ಇದೆ ಇದನ್ನು ತಡೆಯ ಬೇಕಾದಂತಹ ಜವಬ್ದಾರಿ ಸರಕಾರದ್ದಾಗಿದೆ ಎನ್ನುವುದು ಜನರ ಅಭಿಪ್ರಾಯ.
ಕಚ್ಚಿದ ಬಳಿಕವೇ ಕಾರ್ಯಾಚರಣೆಗೆ ಮುಂದಾಗಬೇಕೆ?; ಜನರಿಗೆ ನಾಯಿ ಕಚ್ಚಿದ ಬಗ್ಗೆ ಸುದ್ದಿಯಾದಾಗ ಮಾತ್ರವೇ ಕಾರ್ಯಾಚರಣೆ ಪ್ರಾರಂಭಿಸಲು ಮುಹೂರ್ತ ಕೂಡಿಬರುತ್ತದೆಯೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಪುರಸಭೆಯವರು ಉತ್ತರಿಸಬೇಕಾಗಿದೆ. ಏಕೆಂದರೆ ಪುರದಭೆಯ ಆಡಳಿತ ವೈಖರಿ ಹಳ್ಳ ಹಿಡಿದಿದ್ದು, ಪಟ್ಟಣದ ಯಾವುದೇ ಸಮಸ್ಯೆ ಇದ್ದರೂ ಯಾವುದಾದರೂ ಘಟನೆ ಸಂಭವಿಸಿದಾಗ ಮಾತ್ರ ಎಚ್ಚೆತ್ತು ಕೊಳ್ಳುತ್ತಾರೆ. ಇಲ್ಲವಾದರೆ ಮುಂಜಾಗ್ರತೆಯಾಗಿ ಯಾವ ಕೆಲಸವೂ ನಿರ್ವಹಿಸುವುದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
**
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪುರಸಭೆಯವರಿಗೆ ಹಲವು ಬಾರಿ ತಿಳಿಸಿದರೂ ಅವರು ಗಮನ ಹರಿಸುವುದಿಲ್ಲ. ಬೀದಿನಾಯಿಗಳ ಹಾವಳಿಯಿಂದ ನೆಮ್ಮದಿಯಾಗಿ ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ”
– ಕಿರಣ್, ಮಧುಗಿರಿ
**
“ರಸ್ತೆಗಳಲ್ಲಿ ನಾವು ಸಂಚರಿಸುವ ಸಂದರ್ಭದಲ್ಲಿ ಬೀದಿ ನಾಯಿಗಳು ಇದ್ದಕ್ಕಿದ್ದಂತೆ ಅಡ್ಡ ಬರುತ್ತವೆ. ಪರಿಣಾಮವಾಗಿ ಅಪಘಾತಗಳಾಗಿ ಹಲವರು ತಮ್ಮ ಅಂಗಾಗಂಗಳನ್ನೇ ಕಳೆದುಕೊಂಡಿರುವ ಉದಾಹರಣೆಗಳಿವೆ.
– ಹರೀಶ್ ಕುಮಾರ್, ವಾಹನ ಸವಾರ
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!