1,974
Tumkurnews.in
ತುಮಕೂರು; ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜ.9 ಮತ್ತು 10ರಂದು ನಡೆಯಬೇಕಿದ್ದ ಇತಿಹಾಸ ಪ್ರಸಿದ್ಧ ಗೂಳೂರು ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ.
ಗೂಳೂರಿನ ಗಣೇಶ ದೇವಾಲಯದಲ್ಲಿ ಶುಕ್ರವಾರ ಗ್ರಾಮದ 18 ಕೋಮಿನ ಜನಾಂಗದವರು ಸಭೆ ಸೇರಿ ಈ ಕುರಿತು ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅಕಾಲಿಕ ಮಳೆಯಾಗುತ್ತಿರುವುದರಿಂದ ಜಾತ್ರೆಗೆ ಅಡಚಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಜ.23 ಮತ್ತು 24ಕ್ಕೆ ಜಾತ್ರೆಯನ್ನು ಮುಂದೂಡಲಾಗಿದೆ. ಈ ಬಾರಿ ಎರಡನೇ ಬಾರಿಗೆ ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಜಾತ್ರೆಯನ್ನು ಜನವರಿ 9 ಮತ್ತು 10ಕ್ಕೆ ಮುಂದೂಡಲಾಗಿತ್ತು. ಈಗ ಅಕಾಲಿಕ ಮಳೆಯಾಗುತ್ತಿರುವ ಕಾರಣದಿಂದಾಗಿ ಪುನಃ 2ನೇ ಬಾರಿಗೆ ಮುಂದಕ್ಕೆ ಹಾಕಲಾಗಿದೆ ಎಂದು ಗೂಳೂರು ಗಣೇಶ ಭಕ್ತಮಂಡಳಿಯ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಶಿವಕುಮಾರ್ ತಿಳಿಸಿದರು.
ಅನಿವಾರ್ಯ ಕಾರಣಗಳಿಂದಾಗಿ 2ನೇ ಬಾರಿಗೆ ಗಣೇಶ ಜಾತ್ರೆಯನ್ನು ಮುಂದೂಡಿರುವುದರಿಂದ ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಅಕಾಲಿಕ ಮಳೆಯಿಂದಾಗಿ ಗಣೇಶೋತ್ಸವದ ರಥ ಗ್ರಾಮದಿಂದ ಕೆರೆಯಂಗಳಕ್ಕೆ ಹೋಗಲು ಸಾಧ್ಯವಿಲ್ಲ. ಹೊಲಗಳಲ್ಲಿ ರಥ ಸಾಗುವುದಿಲ್ಲ. ಹಾಗಾಗಿ ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಅವರು ಹೇಳಿದರು.
ಜ. 23 ಶನಿವಾರದಂದು ರಾತ್ರಿ 10 ಗಂಟೆಗೆ ಗಣೇಶಮೂರ್ತಿಯನ್ನು 18 ಕೋಮಿನ ಜನಾಂಗದವರ ಸಮ್ಮುಖದಲ್ಲಿ ದೇವಾಲಯದಿಂದ ಹೊರಗೆ ತರಲಾಗುವುದು. ಮಧ್ಯರಾತ್ರಿವರೆಗೂ ಮೆರವಣಿಗೆ ನಡೆಸಲಾಗುವುದು. ಜಾತ್ರೆಯ ವಿಶೇಷವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗುತ್ತದೆ. ಜಾತ್ರಾ ಮಹೋತ್ಸವದಲ್ಲಿ ವಿಶೇಷ ಕಲಾ ತಂಡಗಳು ಭಾಗವಹಿಸಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಆಕರ್ಷಕ ಪ್ರದರ್ಶನ ನೀಡಲಿವೆ. ಜ.24 ಭಾನುವಾರ ಮಧ್ಯಾಹ್ನ 12 ಗಂಟೆಗೆ ಗಣೇಶಮೂರ್ತಿಯ ಮೆರವಣಿಗೆ ಆರಂಭವಾಗಲಿದ್ದು, ಗ್ರಾಮದ ರಾಜಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾಗಿ ಸಂಜೆ ಕೆರೆಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಪಂ ಸದಸ್ಯ ಕೃಷ್ಣೇಗೌಡ, ಗೂಳೂರು ಸಿದ್ದರಾಜು, ಜಿ.ಎಲ್ ಕುಮಾರ್, ನವೀನ್, ಚಿಕ್ಕರಂಗಪ್ಪ, ನಂಜುಂಡಶಾಸ್ತ್ರಿ, ಚಂದ್ರಶೇಖರ್, ಬಿ.ಕೆ ಕೃಷ್ಣಮೂರ್ತಿ ಸೇರಿದಂತೆ ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಪಂ ಎಲ್ಲ ಸದಸ್ಯರುಗಳು ಪಾಲ್ಗೊಂಡಿದ್ದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/