web analytics
My page - topic 1, topic 2, topic 3
ಶಿರಾ; ಹಳೆ ಕಡತಗಳಿಗೆ ಸಹಿ ಪ್ರಕರಣ; ಪಿಡಿಓ ರಕ್ಷಣೆಗೆ ಅಧಿಕಾರಿಗಳ ಕಸರತ್ತು?; ಹೋರಾಟಕ್ಕೆ ಸಿದ್ಧತೆ

ಶಿರಾ; ಹಳೆ ಕಡತಗಳಿಗೆ ಸಹಿ ಪ್ರಕರಣ; ಪಿಡಿಓ ರಕ್ಷಣೆಗೆ ಅಧಿಕಾರಿಗಳ ಕಸರತ್ತು?; ಹೋರಾಟಕ್ಕೆ ಸಿದ್ಧತೆ

 1,974 

Tumkurnews.in
ಶಿರಾ; ತಾಲ್ಲೂಕಿನ ಗೋಪಾಲದೇವರಹಳ್ಳಿ ಗ್ರಾಪಂನಲ್ಲಿ ಹಳೆಯ ಕಡತಗಳಿಗೆ ಸಹಿ ಹಾಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ಸಬಾ ಮೆಹರಿನ್ ಹಾಗೂ ಮಾಜಿ ಅಧ್ಯಕ್ಷ ಚಂದ್ರಣ್ಣ ಅವರನ್ನು ಕಾನೂನು ಕ್ರಮದಿಂದ ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಡಿ.17ರಂದು ಸದರಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಣ್ಣ ಅವರನ್ನು ಗ್ರಾಪಂ ಕಚೇರಿಯಲ್ಲಿ ಕೂರಿಸಿ ಒಂದು ವರ್ಷಕ್ಕೂ ಹಿಂದಿನ ಕಡತಗಳಿಗೆ ಸಹಿ ಹಾಕಿಸಲಾಗುತ್ತಿತ್ತು. ಈ ಕಾನೂನು ಬಾಹಿರ ಕೃತ್ಯವನ್ನು ಸ್ವತಃ ಗ್ರಾಮಸ್ಥರು ಪತ್ತೆ ಹಚ್ಚಿದ್ದರು. ಅಲ್ಲದೇ ಮಾಜಿ ಅಧ್ಯಕ್ಷರಿಂದ ಹಳೆಯ ಕಡತಗಳಿಗೆ ಸಹಿ ಹಾಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಓ ಅವರನ್ನು ಅಮಾನತು ಮಾಡಬೇಕು, ಮಾಜಿ ಅಧ್ಯಕ್ಷರ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಆಗ ಸ್ಥಳಕ್ಕೆ ಧಾವಿಸಿದ್ದ ತಾಪಂ ಇಓ ಲಕ್ಷ್ಮಿ ನಾರಾಯಣ ಸ್ವಾಮಿ, ಗ್ರಾಮಸ್ಥರ ಅಹವಾಲು ಆಲಿಸಿ, ಮಾಜಿ ಅಧ್ಯಕ್ಷರು
ಸಹಿ ಹಾಕಿದ್ದ ಕಡತಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದರು. ಈ ವಿಚಾರಣೆ ವೇಳೆ ತಾವು ಯಾವುದೇ ಕಡತಗಳಿಗೆ ಸಹಿ ಹಾಕಿಸಿಲ್ಲ, ಸಿಬ್ಬಂದಿ ರಾಜೇಶ್ ಅವರು ಸಹಿ ಹಾಕಿಸಿದ್ದಾರೆ ಎಂದು ಪಿಡಿಓ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿ, ಸಿಬ್ಬಂದಿ ಮೇಲೆ ತಪ್ಪು ಹೊರಿಸಿದ್ದರು. ಆದರೆ ಸ್ಥಳದಲ್ಲೇ ಇದ್ದ ರಾಜೇಶ್, ಪಿಡಿಓ ಸಬಾ ಮೆಹರಿನ್ ಅವರು ಸೂಚಿಸಿದ್ದರಿಂದಲೇ ಹಳೆಯ ಕಡತಗಳಿಗೆ ಸಹಿ ಹಾಕಿಸಿದ್ದು, ಇದರಲ್ಲಿ ತಮ್ಮ ನೇರ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಈ ವೇಳೆ ಹಳೆ ಕಡತಗಳಿಗೆ ಸಹಿ ಹಾಕಿದ ದೃಶ್ಯ ಗ್ರಾಪಂ ಕಚೇರಿಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ತಮ್ಮ ಸಮ್ಮುಖದಲ್ಲಿ ವೀಕ್ಷಿಸಿ, ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಆದರೆ ಗ್ರಾಮಸ್ಥರ ಸಮ್ಮುಖದಲ್ಲಿ ಸಿಸಿ ಟಿವಿ ದೃಶ್ಯ ವೀಕ್ಷಿಸಲು ನಿರಾಕರಿಸಿದ ಇಓ, ವಿಚಾರಣೆ ಬಳಿಕ ಸಿಸಿ ಟಿವಿ ದೃಶ್ಯಗಳನ್ನು ತಮ್ಮ ವಶಕ್ಕೆ ಪಡೆದು ಕೊಂಡೊಯ್ದರು.
ಪ್ರಕರಣದ ಬಗ್ಗೆ ಜಿಪಂ ಸಿಇಓ ಶುಭ ಕಲ್ಯಾಣ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಅವರಿಗೆ ತಾಪಂ ಇಓ ವರದಿ ಸಲ್ಲಿಸಿದ್ದು, ಅದರಲ್ಲಿ ಸತ್ಯಾಂಶಗಳನ್ನು ಮರೆ ಮಾಚಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.
ಇಓ ಸಲ್ಲಿಸಿರುವ ವರದಿಯಲ್ಲಿ ಪಿಡಿಓ ಸಬಾ ಮೆಹರಿನ್ ಅವರು ಸಹಿ ಹಾಕಿಸಿಲ್ಲ, ಸಿಬ್ಬಂದಿ ರಾಜೇಶ್ ಅವರು ಸಹಿ ಹಾಕಿಸಿದ್ದಾರೆ, ಪಿಡಿಓ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ ಪಿಡಿಓ ಸೂಚನೆ ನೀಡಿದ್ದರಿಂದಲೇ ತಾವು ಸಹಿ ಹಾಕಿಸಿರುವುದಾಗಿ ಸಿಬ್ಬಂದಿ ರಾಜೇಶ್ ನೀಡಿರುವ ಹೇಳಿಕೆಯನ್ನು ದಾಖಲಿಸಿಲ್ಲ. ಮುಖ್ಯವಾಗಿ ಸಿಸಿ ಟಿವಿ ದೃಶ್ಯಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿಲ್ಲ. ಅದನ್ನು ಸಾಕ್ಷಿಯನ್ನಾಗಿ ಪರಿಗಣಿಸಿಲ್ಲ, ಇದೇ ಸಂದರ್ಭದಲ್ಲಿ “ಸಿಸಿ ಟಿವಿ ಹಾಳಾಗಿತ್ತು” ಎಂದು ಗ್ರಾಪಂ ಸಿಬ್ಬಂದಿಗಳು ಹೇಳುತ್ತಿದ್ದು, ಸಾಕ್ಷಿ ನಾಶ ಪಡಿಸಿರುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮುಖ್ಯವಾಗಿ ಪರಿಶೀಲನೆ ವೇಳೆ ಇಓ, ಸಿಇಓ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ, “ನರೇಗಾ ಎಂ.ಬಿ ಪುಸ್ತಕಕ್ಕೆ ಸಹಿ ಹಾಕಿಸಿದ್ದಾರೆ” ಎಂದು ಮೌಖಿಕ ವರದಿ ನೀಡಿದ್ದಾರೆ. ಅಂದರೆ ಎಂ.ಬಿ ಪುಸ್ತಕಕ್ಕೆ ಸಹಿ ಹಾಕಿಸದೆ ಹಣ ಹೇಗೆ ಬಿಡುಗಡೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.
ಇಓ ಸಲ್ಲಿಸಿರುವ ದೋಷಪೂರಿತ ವರದಿಯ ಹಿನ್ನೆಲೆಯಲ್ಲಿ ಪಿಡಿಓ ಸಬಾ ಮೆಹರಿನ್ ಹಾಗೂ ಹಳೆ ಕಡತಗಳಿಗೆ ಸಹಿ ಹಾಕಿದ ಮಾಜಿ ಅಧ್ಯಕ್ಷ ಚಂದ್ರಣ್ಣ ಇಬ್ಬರೂ ಕಾನೂನಿನ ಕ್ರಮದಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ತಾಪಂ ಇಓ ವಿರುದ್ಧವೂ ಸೇರಿದಂತೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದವರ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಸದರಿ ಗ್ರಾಪಂನಲ್ಲಿ ಹಿಂದಿನ ಪಿಡಿಓ ಶಿವಾನಂದ ಸಾತೀಹಾಳ್ ಅವಧಿಯಲ್ಲಿ ನಡೆದಿದ್ದ ಲಕ್ಷಾಂತರ ರೂ.ಗಳ ನರೇಗಾ ಹಗರಣವನ್ನು ಗ್ರಾಮಸ್ಥರು ಬಯಲಿಗೆ ಎಳೆದಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂನಲ್ಲಿ ಸ್ವಚ್ಛ ಮತ್ತು ಪಾರದರ್ಶಕ ಆಡಳಿತವನ್ನು ಬಯಸಿರುವ ಗ್ರಾಮಸ್ಥರು ಈಗಿನ ಪಿಡಿಓ ಅವಧಿಯಲ್ಲಿ ನಡೆದಿರುವ ಹಳೆ ಕಡತಗಳಿಗೆ ಸಹಿ ಹಾಕಿಸಿದ್ದ ಪ್ರಕರಣವನ್ನು ಸಮಗ್ರ ತನಿಖೆಗೆ ಆಗ್ರಹಿಸಿದ್ದು, ಸಾಕ್ಷಿ ನಾಶಕ್ಕೆ ಯತ್ನಿಸುವವರ ವಿರುದ್ಧವೂ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
**
ನರೇಗಾ ಫೈಲ್‌ಗಳಿಗೆ ಹಿಂದಿನ ಅಧ್ಯಕ್ಷ ಚಂದ್ರಣ್ಣ ಸಹಿ ಹಾಕಿರಲಿಲ್ಲ, ಅವರನ್ನು ಕರೆಯಿಸಿ ಅಲ್ಲಿನ ಸಿಬ್ಬಂದಿ ಸಹಿ ಹಾಕಿಸುತ್ತಿದ್ದರು, ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತು ಸ್ಥಿತಿಯನ್ನು ಜಿಪಂ ಸಿಇಓ ಮತ್ತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಯಾರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಿಲ್ಲ, ಮೇಲಧಿಕಾರಿಗಳ
ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದು.
– ಲಕ್ಷ್ಮಿ ನಾರಾಯಣ ಸ್ವಾಮಿ, ಇಓ, ಶಿರಾ ತಾಪಂ
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!