web analytics
My page - topic 1, topic 2, topic 3
2ನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಶೇ.88.60ರಷ್ಟು ಮತದಾನ; ತಾಲ್ಲೂಕುವಾರು ಮಾಹಿತಿ ಇಲ್ಲಿದೆ

2ನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಶೇ.88.60ರಷ್ಟು ಮತದಾನ; ತಾಲ್ಲೂಕುವಾರು ಮಾಹಿತಿ ಇಲ್ಲಿದೆ

 1,636 

Tumkurnews.in
ತುಮಕೂರು; ಎರಡನೇ ಹಂತದ 161 ಗ್ರಾಮ ಪಂಚಾಯತಿಗಳ 2400 ಸದಸ್ಯ ಸ್ಥಾನಗಳಿಗೆ ಭಾನುವಾರ ನಡೆದ ಮತದಾನವು ಶಾಂತಿಯುತವಾಗಿ  ಮುಕ್ತಾಯಗೊಂಡಿದ್ದು, ಅಂದಾಜು ಶೇ.88.60 ರಷ್ಟು ಮತದಾನವಾಗಿದೆ.
ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆದಿದೆ.
ಮತದಾರರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು, ಜಿಲ್ಲೆಯ ಜೆ.ಸಿ.ಪುರ, ಸೂಳೆಕೆರೆ, ಕುಂದೂರು, ಲೋಕಮ್ಮನಹಳ್ಳಿ, ಹಾವಳ, ತೊರೆಮಾವಿನಹಳ್ಳಿ, ತಾವರೆಕೆರೆ ಸೇರಿದಂತೆ ಹಲವೆಡೆ ಕಂಡು ಬಂದಿತು.
ಪ್ರತಿ ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಮತದಾನ ಮಾಡಲು ಆಗಮಿಸುವ ಮತದಾರರಿಗೆ  ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸ್ ಮಾಡಿದ ನಂತರ ಮತ ಕೇಂದ್ರವನ್ನು ಪ್ರವೇಶಿಸಿದ ಮತದಾರರು ಎಡಗೈ ಹೆಬ್ಬರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಿಸಿಕೊಂಡು ಒಟ್ಟು 1321 ಮತ ಕೇಂದ್ರಗಳಲ್ಲಿ  ತಮ್ಮ ಹಕ್ಕನ್ನು ಚಲಾಯಿಸಿದರು.
ಯುವ ಮತದಾರರು ಉತ್ಸಾಹಿಗಳಾಗಿ ಮತಕೇಂದ್ರಕ್ಕೆ ಬಂದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.
ಮತದಾನದ ಕಾರ್ಯ ಮುಕ್ತಾಯವಾದ ನಂತರ ಮತಗಟ್ಟೆಯಿಂದ ಡಿ-ಮಸ್ಟರಿಂಗ್, ಮತ ಎಣಿಕೆ ಕೇಂದ್ರಗಳಿಗೆ ಮತ ಪತ್ರ ತುಂಬಿದ ಮತ ಪೆಟ್ಟಿಗೆಗಳನ್ನು ಕಳುಹಿಸಲಾಯಿತು.
ಡಿಸೆಂಬರ್ 30ರಂದು ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ನಡೆಯಲಿದೆ.  ಎರಡನೇ ಹಂತದ ಗ್ರಾಮ ಪಂಚಾಯಿತಿಯ  ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ  ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡಿತ್ತು.
(ಇದು ತಾತ್ಕಾಲಿಕ ಮತದಾನ ಪ್ರಮಾಣ, ಅಂತಿಮ ಮಾಹಿತಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಬಿಡುಗಡೆಯಾಗಬೇಕಿದೆ)
ಕೊರೊನಾ ಸೋಂಕಿತರಿಂದ ಮತದಾನ; ಮತದಾನದ ಕೊನೆಯ ಅವಧಿಯ 1 ಗಂಟೆ ಅಂದರೆ 4ರಿಂದ 5 ಗಂಟೆಯವರೆಗೂ ಕೊರೊನಾ ಸೋಂಕಿತರು, ಶಂಕಿತರ ಮತದಾನಕ್ಕೆ ಅವಕಾಶ ನೀಡಲಾಗಿತ್ತು.
ಶಿರಾ ತಾಲೂಕಿನ 21, ತಿಪಟೂರು-4, ಮಧುಗಿರಿ-16, ತುರುವೇಕೆರೆ-14, ಚಿಕ್ಕನಾಯಕನಹಳ್ಳಿ-17 ಸೇರಿದಂತೆ ಒಟ್ಟು 72 ಮಂದಿ ಸೋಂಕಿತರು ತಮ್ಮ ಹಕ್ಕನ್ನು ಚಲಾಯಿಸಲು ಇಚ್ಚೆ ವ್ಯಕ್ತಪಡಿಸಿದ್ದರು. ಆರೋಗ್ಯ ಇಲಾಖೆಯು ಈ ಮತದಾರರಿಗೆ  ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಿತ್ತು. ಪಿಪಿ ಕಿಟ್ ಧರಿಸಿ ಸೋಂಕಿತರು ಮತದಾನ ಮಾಡಿದರು.
ಬಂದೋಬಸ್ತ್; ಶಾಂತಿಯುತ  ಮತದಾನಕ್ಕಾಗಿ ಮತ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. 5 ಡಿವೈಎಸ್‍ಪಿ, 15 ಮಂದಿ ಇನ್ಸ್‍ಪೆಕ್ಟರ್, 49 ಪಿಎಸ್‍ಐ, 73 ಎಎಸ್‍ಐ, ಕೆಎಸ್‍ಆರ್‍ಪಿ ತುಕಡಿ ಸೇರಿದಂತೆ 1792ಕ್ಕೂ ಹೆಚ್ಚು ಸಿಬ್ಬಂದಿಗಳು ಭದ್ರತಾ ಕಾರ್ಯ ನಿರ್ವಹಿಸಿದರು.
(ಚಿತ್ರ ವಿವರ)
ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣಾ ಮತದಾನ ನಡೆದ ಗುಳಿಗೇನಹಳ್ಳಿ ರತ್ನಸಂದ್ರ ಹಾಗೂ ಮಾಗೋಡು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!