ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ; ಕಾಂಗ್ರೆಸ್ ಆಗ್ರಹ

1 min read

 

 

 

 

 

ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ಘೋಷಿಸಲು ಆಗ್ರಹ

Tumkurnews
ತುಮಕೂರು; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತವನ್ನು ಕಡೆಗಣಿಸಿದ್ದು, ಕೂಡಲೇ ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ರೈತ ವಿರೋಧಿ ಸರ್ಕಾರದ ವಿರುದ್ಧ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಬ್ಬರಿ ಬೆಲೆ ನೆಲ ಕಚ್ಚಿದೆ. ಡಬಲ್ ಎಂಜಿನ್ ಸರ್ಕಾರಗಳು ಮೌನ ವಹಿಸಿವೆ. ನಮ್ಮನ್ನು ಆಳುತ್ತಿರುವ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕೇಂದ್ರದ ಬೆಲೆ ಏರಿಕೆ ನೀತಿಯಿಂದಾಗಿ ರೈತರ ಖರ್ಚು, ವೆಚ್ಚ ಜಾಸ್ತಿಯಾಗಿದ್ದರೂ ಈ ಬಗ್ಗೆ ಡಬಲ್ ಎಂಜಿನ್ ಸರ್ಕಾರಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಪಂಪ್‍ಸೆಟ್‍ಗಳಿಗೆ ಪ್ರತಿನಿತ್ಯ ಕನಿಷ್ಠ 8 ರಿಂದ 9 ಗಂಟೆಯಾದರೂ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಆದರೆ 3 ಗಂಟೆ ವಿದ್ಯುತ್ ಸರಬರಾಜು ಮಾಡದೆ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿವೆ ಎಂದು ದೂರಿದರು.
ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 5 ಸಾವಿರ ರೂಪಾಯಿ ಸಹಾಯಧನ ನೀಡಬೇಕು. ಸರಿಯಾದ ಸರಾಸರಿ ಗುಣಮಟ್ಟ ನಿಗದಿ (ಎಫ್‍ಎಕ್ಯೂ) ನಿಯಮದಂತೆಯೇ ಕೊಬ್ಬರಿ ಖರೀದಿ ಮಾಡಿದ 72 ಗಂಟೆಯೊಳಗೆ ರೈತರ ಖಾತೆಗೆ ಹಣ ವರ್ಗಾಯಿಸಬೇಕು. ತಪ್ಪಿದಲ್ಲಿ ತಿಂಗಳಿಗೆ ಕನಿಷ್ಟ ಶೇ.5 ರಂತೆ ಬಡ್ಡಿಯ ಜತೆ ಮೂರು ತಿಂಗಳ ಒಳಗೆ ರೈತರಿಗೆ ಹಣವನ್ನು ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.

ಗೃಹ ರಕ್ಷಕ ಹುದ್ದೆಗಳ ನೇಮಕ; ಸಂದರ್ಶನಕ್ಕೆ ದಿನಾಂಕ‌ ನಿಗದಿ
ಸರ್ಕಾರ ಕೊಬ್ಬರಿಯನ್ನು ಖರೀದಿ ಮಾಡುವಾಗ ಗರಿಷ್ಟ ಖರೀದಿ ನಿಯಮವನ್ನು ಕೈಬಿಡಬೇಕು ಮತ್ತು ರೈತರು ಬೆಳೆದು ತಂದ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿ ಮಾಡಿಕೊಳ್ಳಬೇಕು. ರೈತರು ಬೆಳೆದ ಬೆಳೆಗಳನ್ನು ಕಾಲ ಕಾಲಕ್ಕೆ ಬೆಳೆ ಸಮೀಕ್ಷೆಯಲ್ಲಿ (ಫ್ರೂಟ್ ಐಡಿ) ಲೋಪವಾಗದಂತೆ ರೈತರ ಉಪಸ್ಥಿತಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಸರ್ಕಾರವು ಸಕಾಲ ಕೇಂದ್ರಗಳಲ್ಲಿ ಪ್ರತಿ ಪಹಣಿಗೆ 25 ರೂಪಾಯಿ ಸುಲಿಗೆ ಮಾಡುವುದನ್ನು ನಿಲ್ಲಿಸಿ, ಕೇವಲ 5 ರೂಪಾಯಿ ಮಾತ್ರ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ತುಮಕೂರಿನಲ್ಲಿ ಧ್ರುವನಾರಯಣ್’ಗೆ ಶ್ರದ್ಧಾಂಜಲಿ; ಡಾ.ಜಿ ಪರಮೇಶ್ವರ್ ಭಾಗಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷವು ಒಂದಲ್ಲಾ ಒಂದು ಕಾರ್ಪೋರೇಟ್ ಪರ ಹಾಗೂ ರೈತ ವಿರೋಧಿ ನಿಲುವು ತಳೆಯುತ್ತಿವೆ. ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿವೆ. ರೈತರನ್ನು ಸಜೀವವಾಗಿ ಕೊಲ್ಲುತ್ತಿವೆ. ಸುಮಾರು ಒಂದೂವರೆ ವರ್ಷ ದೇಶಾದ್ಯಂತ ನಡೆದ ತೀವ್ರವಾದ ರೈತರ ದೆಹಲಿ ಪ್ರತಿಭಟನೆಗೆ ಮಣಿದ ಕೇಂದ್ರ ಸರಕಾರವು ನಂತರ ತನ್ನ ಕರಾಳ ಕೃಷಿ ಕಾನೂನು ಹಿಂಪಡೆದಿತ್ತು. ಆದರೆ ಕರ್ನಾಟಕ ಸರ್ಕಾರ ತನ್ನ ಹಠಮಾರಿತನದಿಂದ ಕರಾಳ ಕೃಷಿ ಕಾಯ್ದೆಗಳನ್ನು ಮುಂದುವರಿಸಿರುವ ಕಾರಣ, ಕೃಷಿ ಉತ್ಪನ್ನ ಮಾರಾಟ ಮಾಡುವ ಮಾರುಕಟ್ಟೆಗಳು ಮುಚ್ಚುತ್ತಿದ್ದು, ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ ಎಂದರು.
ಗಾಯದ ಮೇಲೆ ಬರೆ ಎಳೆದಂತೆ 9 ತಿಂಗಳಿಗೆ ನೈಸರ್ಗಿಕವಾಗಿ ಒಣಗಿ ಕೊಬ್ಬರಿಯಾಗಬೇಕಿದ್ದ ತೆಂಗಿನಕಾಯಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಕೊಬ್ಬರಿಯಾಗಲು ಸದ್ಯ 13 ರಿಂದ 15 ತಿಂಗಳು ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ರೈತರ ಮೇಲೆ ಆರ್ಥಿಕ ಒತ್ತಡ ಉಂಟಾಗಿ ರೈತರು ಹಸಿ ಕೊಬ್ಬರಿಯನ್ನೇ ಮಾರುಕಟ್ಟೆಗೆ ತರುವಂತಾಗಿದೆ. ರೈತರು ಕೊಬ್ಬರಿಯನ್ನು ಭಾರಿ ನಷ್ಟಕ್ಕೆ ಮಾರಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ರೈತ ಸಂಘಟನೆಗಳು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಏರಿಸಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬರುತ್ತಿವೆ. ಸರ್ಕಾರದ ತೋಟಗಾರಿಕೆ ಇಲಾಖೆಯು ಕೊಬ್ಬರಿಗೆ 16,730 ರೂಗಳ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಕೇಂದ್ರ ಸರ್ಕಾರ ಪುಡಿಗಾಸಿನ ಏರಿಕೆ ಮಾಡುತ್ತಿದೆ, ಈ ಅನ್ಯಾಯದ ಬಗ್ಗೆ ರಾಜ್ಯ ಸರ್ಕಾರವೂ ದಿವ್ಯ ಮೌನ ವಹಿಸಿದೆ. ಜತೆಗೆ ಜನಪ್ರತಿನಿಧಿಗಳು ಸಹ ಕಡತದ ಮೇಲೆ ಕುಳಿತು ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಕೊಬ್ಬರಿ ಬೆಲೆ 9,500 ಕ್ಕೆ ಕುಸಿದಿದೆ. ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಹೋರಾಟಗಳ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದರೂ ಕೂಡ ಸರ್ಕಾರವು ಯಾವುದೇ ದಿಟ್ಟ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ ಕಾರ್ಪೋರೇಟ್ ಕಂಪೆನಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಬಗ್ಗೆ ಕಿಂಚಿತ್ತು ಮಾನವೀಯತೆಯನ್ನು ತೋರದೆ, ಕೊಬ್ಬರಿಯ ಬೆಂಬಲ ಬೆಲೆಯನ್ನು ಕೇವಲ ರೂ. 11,750 ನಿಗದಿ ಮಾಡಿದೆ. ಆದ್ದರಿಂದ ಈಗ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಚಕ್ರವರ್ತಿ ಪ್ರಕಾಶ್, ಕುಚ್ಚಂಗಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತುಮಕೂರು; ಗಾಂಜಾ, ಡ್ರಗ್ಸ್, ಮಾದಕ ಜಾಲದಲ್ಲಿ ವಿದ್ಯಾರ್ಥಿಗಳು! ಡಿಸಿ, ಎಸ್.ಪಿ ಕಳವಳ, ಮಹತ್ವದ ಸಭೆ

You May Also Like

More From Author

+ There are no comments

Add yours