855
Tumkurnews.in
ಶಿರಾ; ಎಪಿಎಂಸಿ ಮಂಡಿ ವರ್ತಕರು ಮತ್ತು ಮದ್ಯವರ್ತಿಗಳ ಶೋಷಣೆ ಖಂಡಿಸಿ ಬೆಂಚೆಗೇಟ್ ಎಪಿಎಂಸಿ ಉಪ ಮಾರುಕಟ್ಟೆ ವ್ಯಾಪ್ತಿಯ ರೈತರು ಶುಕ್ರವಾರವಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಈ ಕುರಿತು ಗುರುವಾರ ಪೂರ್ವಭಾವಿ ಸಭೆ ನಡೆಸಿದ ರೈತರು, ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಪ್ರತಿಭಟನೆ ಆರಂಭಿಸಲು ನಿರ್ಧರಿಸಿದ್ದಾರೆ.
ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ವ್ಯಾಪ್ತಿಯ ಬೆಂಚೆಗೇಟ್ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಂಡಿ ವರ್ತಕರು ರೈತರ ಶೋಷಣೆ ಮಾಡುತ್ತಿದ್ದಾರೆ. ರೈತರಿಂದ ಕಾಯಿ ರೂಪದಲ್ಲಿ ಮತ್ತು ಹಣದ ರೂಪದಲ್ಲಿ ಎರಡು ರೀತಿಯಲ್ಲಿ ಕಮಿಷನ್ ಪಡೆದು ವಂಚಿಸುತ್ತಿದ್ದಾರೆ. ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಬೆಲೆ ನೀಡುತ್ತಿಲ್ಲ. ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ಶೋಷಣೆಗೆ ಅಧಿಕಾರಿಗಳು ಅಂತ್ಯ ಹಾಡಬೇಕು ಎಂದು ಒತ್ತಾಯಿಸಿ, ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
ಸದರಿ ಎಪಿಎಂಸಿ ಉಪ ಮಾರುಕಟ್ಟೆ ವ್ಯಾಪ್ತಿಯಲ್ಲಿ 11 ಹಳ್ಳಿಯಲ್ಲಿ ಸಾವಿರಾರು ರೈತರು ಬರಲಿದ್ದು, ಪ್ರತಿಭಟನೆ ಬಹಳ ದೊಡ್ಡ ಮಟ್ಟದಲ್ಲಿ ನಡೆಯುವ ಸಾಧ್ಯತೆ ಇದೆ.
ಗ್ರಾಮ ಪಂಚಾಯತ್ ಚುನಾವಣೆ ನೀತಿ ಸಂಹಿತೆ ನಡುವೆಯೂ ರೈತರು ಹೋರಾಟಕ್ಕೆ ಮುಂದಾಗಿದ್ದು, ಎಂತಹ ಬೆಲೆ ತರುವುದಕ್ಕೂ ರೈತರು ಸಿದ್ದರಾಗಿರುವುದು ಕಂಡು ಬಂದಿದೆ.
ಒಟ್ಟಾರೆಯಾಗಿ ಕೂಡಲೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ರೈತರ ಸಮಸ್ಯೆ ಬಗೆ ಹರಿಸಬೇಕಿದೆ, ಇಲ್ಲವಾದಲ್ಲಿ ರೈತರ ಈ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸುವ ಸಾಧ್ಯತೆ ಇದೆ.
ಏನಿದು ಶೋಷಣೆ?; ರೈತರು ಹೇಳುವಂತೆ,’ರೈತರಿಂದ ಖರೀದಿಸುವ ತೆಂಗಿನ ಕಾಯಿಗೆ 100 ರೂ.ಗೆ 4 ರೂ. ಕಮಿಷನ್ ಪಡೆಯುತ್ತಾರೆ, ಒಂದು ರಾಶಿ ಕಾಯಿಗೆ 25 ಕಾಯಿಯನ್ನು ಹಮಾಲರ ಕಾಯಿ, ರಾಶಿ ಕಾಯಿ ಎಂದು ಮಂಡಿಯವರು ತೆಗೆದುಕೊಳ್ಳುತ್ತಾರೆ. ಆದರೆ ಹಮಾಲರಿಗೆ ಕೇವಲ 500 ರೂ. ಕೂಲಿ ನೀಡಿ ಕಾಯಿಗಳನ್ನು ಮಂಡಿಯವರೇ ತೆಗೆದುಕೊಳ್ಳುತ್ತಾರೆ. ಬಳಿಕ ಮಂಡಿಯಲ್ಲೇ ಆ ಕಾಯಿಗಳನ್ನು ಸಂಗ್ರಹಿಸಿ, ತಮ್ಮ ಲಾಭಕ್ಕೆ ಮಾರಿಕೊಂಡು ರೈತರನ್ನು ವಂಚಿಸುತ್ತಿದ್ದಾರೆ, ಇಲ್ಲಿ ಬಿಳಿ ಚೀಟಿ ವ್ಯವಹಾರ ಹೆಚ್ಚಾಗಿದೆ. ರೈತರಿಗೆ ನ್ಯಾಯಯುತವಾಗಿ ಬೆಲೆ ದೊರೆಯಬೇಕು ಎನ್ನುವುದು ಪ್ರತಿಭಟನೆ ನಡೆಸಲು ಮುಂದಾಗಿರುವ ರೈತರ ಬೇಡಿಕೆಯಾಗಿದೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339
ಇಮೇಲ್: [email protected]
ವೆಬ್ ಸೈಟ್ : https://www.tumkurnews.in/