852
Tumkurnews.in
ತುಮಕೂರು; ರೈತವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರಕಾರವು ಹಲ್ಲೆ, ದೌರ್ಜನ್ಯ, ದಬ್ಬಾಳಿಕೆಯನ್ನು ನಡೆಸುತ್ತಿದೆ ಎಂದು ಆರೋಪಿಸಿ ರೈತ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಡಾ.ಬಸವರಾಜು, ದೆಹಲಿಯಲ್ಲಿ ಪ್ರತಿಭಟನೆ ನಿರತ ರೈತರನ್ನು ಕೇಂದ್ರ ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ.
ಅವರ ಪ್ರತಿಭಟನಾ ಹಕ್ಕಗಳನ್ನು ದಮನ ಮಾಡುವ ಕ್ರಿಯೆಯನ್ನು ಪೊಲೀಸರು, ಅರೆ ಸೇನಾ ಪಡೆಗಳ ಮೂಲಕ ಮಾಡುತ್ತಿದೆ. ಇದರ ವಿರುದ್ಧ ನಾವೆಲ್ಲರೂ ನಾವು ಇರುವಲ್ಲಿಯೇ ಹೋರಾಟ ನಡೆಸುವ ಮೂಲಕ ಅನ್ನದಾತರಿಗೆ ಬೆಂಬಲ ಸೂಚಿಸಬೇಕಾಗಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕೆಂಬುದು ರೈತರ ಬೇಡಿಕೆಯಾಗಿದೆ.
ಅಲ್ಲದೆ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ.
ಆದರೆ ಕೇಂದ್ರ ಸರಕಾರ ರೈತರಿಗೆ ಮರಣ ಶಾಸನವಾಗಿರುವ ಎಪಿಎಂಸಿ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ ಕಾಯ್ದೆ ತಂದು ರೈತರು, ಕಾರ್ಮಿಕರು, ಬಡವರನ್ನು ಕಾರ್ಪೋರೇಟ್ ಕಂಪನಿಗಳ ಜೀತದಾಳುಗಳನ್ನಾಗಿ ಮಾಡಲು ಹೊರಟಿದೆ.
ಇದರ ವಿರುದ್ಧದ ನಿರಂತರ ಹೋರಾಟ ರೂಪಿಸಬೇಕಾಗಿದೆ ಎಂದರು.
ಈ ಸಂಬಂಧ ಡಿಸೆಂಬರ್ 07 ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಕೆ.ದೊರೈರಾಜು ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ದೇಶದ ಅನ್ನದಾತರನ್ನು ಅತ್ಯಂತ ನಿರ್ಧಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರಕ್ಕೆ ರೈತರನ್ನು ನಾಶ ಮಾಡಿದರೆ ಅನ್ನವಿಲ್ಲ, ಕಾರ್ಮಿಕರನ್ನು ನಾಶ ಮಾಡಿದರೆ ಸಂಪತ್ತು ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.
ರೈತರ ಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ಮಾತನಾಡಿ, ರೈತರು, ಕಾರ್ಮಿಕರ ಮೇಲೆ ಹಲ್ಲೆ, ಲಾಠಿ ಚಾರ್ಜ್, ದಾರಿಗೆ ಅಡ್ಡಲಾಗಿ ಹಳ್ಳ ತೋಡುವುದು, ಮರಳು ಸುರಿಯುವುದು, ಜಲಫಿರಂಗಿ ಬಳಕೆಯಂತಹ ಅಮಾನುಷ ಕೃತ್ಯಗಳು ನಡೆಯುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕೇಂದ್ರದ ಮಾನವ ಹಕ್ಕುಗಳ ಆಯೋಗ ಮತ್ತು ಸುಪ್ರಿಂಕೋರ್ಟು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕಾಗಿತ್ತು. ಆದರೆ ಇದ್ಯಾವುದೇ ಪ್ರಕ್ರಿಯೆಗಳು ಇದುವರೆಗೂ ನಡೆದಿಲ್ಲ. ರೈತರನ್ನು ಉಗ್ರಗಾಮಿಗಳ ರೀತಿ ನೋಡಿಕೊಳ್ಳಲಾಗುತ್ತಿದೆ. ಇದನ್ನು ದೇಶದ ಪ್ರತಿ ಹಳ್ಳಿಯಲ್ಲಿರುವ ರೈತರು ಖಂಡಿಸಬೇಕು, ತಾವು ಇರುವಲ್ಲಿಯೇ ದೆಹಲಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಹೋರಾಟಕ್ಕೆ ಇಳಿಯಬೇಕು ಎಂದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸೈಯದ್ ಮುಜೀಬ್, ಗಿರೀಶ್, ಬಿ.ಉಮೇಶ್, ಅಜ್ಜಪ್ಪ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿಯ ಸಿ.ಯತಿರಾಜು, ಲೇಖಕಿಯರ ಬಳಗದ ಲಲಿತಾ ಬಸವರಾಜು, ಉಮಾಪತಿ, ಆನಂದಮೂರ್ತಿ ಮತ್ತಿತರರು ಮಾತನಾಡಿದರು.
ರೈತ ಮುಖಂಡರಾದ ಕೆಂಕೆರೆ ಸತೀಶ್, ರವೀಶ್, ವಿಶ್ವಾರಾಧ್ಯ, ಎನ್.ಕೆ.ಸುಬ್ರಮಣ್ಯ, ಡಾ.ಅರುಂಧತಿ ಮತ್ತಿತರರಿದ್ದರು.
ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲಿನ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು, ರೈತರೊಂದಿಗೆ ಷರತ್ತು ರಹಿತ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಧರಣಿ ಸತ್ಯಾಗ್ರಹದ ನಂತರ ಆನಂದ ಪಟೇಲ್ ನೇತೃತ್ವದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಕೋಟೆ ಆಂಜನೇಯಸ್ವಾಮಿ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದರು.