1,670
ನಮಗೆ ರೈಸ್, ದಾಲ್ ಗೊತ್ತು ಡ್ರಗ್ಸ್ ಬಗ್ಗೆ ಗೊತ್ತಿಲ್ಲ; ಡ್ರಗ್ಸ್ ಆರೋಪದ ಬಗ್ಗೆ ಸುದೀಪ್ ಪ್ರತಿಕ್ರಿಯೆ
ತುಮಕೂರು; ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ದಿನಗಳಿಂದ ಪ್ರಬಲವಾಗಿ ಕೇಳಿಬರುತ್ತಿರುವ ಡ್ರಗ್ಸ್ ಆರೋಪದ ಬಗ್ಗೆ ಚಿತ್ರನಟ ಸುದೀಪ್ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದರು.
ಲಿಂ.ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ದರ್ಶನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ಪ್ರಚಲಿತದಲ್ಲಿರುವ ಡ್ರಗ್ಸ್ ದಂಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅದರ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಸಹ ಚಿತ್ರರಂಗದವನು. ಆದರೆ, ನನಗೆ ಮಾಹಿತಿ ಇಲ್ಲದ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಬಾರದು ಮತ್ತು ಮಾತನಾಡಬಾರದು. ‘ನಮಗೆ ರೈಸ್ ಮತ್ತು ದಾಲ್ ಬಗ್ಗೆ ಗೊತ್ತಿದೆ. ಡ್ರಗ್ಸ್ ಬಗ್ಗೆ ಗೊತ್ತಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕನ್ನಡ ಚಿತ್ರರಂಗವನ್ನು ಹಿರಿಯರು ಹಾಗೂ ನಾವೆಲ್ಲರೂ ಸೇರಿ ಕಟ್ಟಿದ್ದೇವೆ. ಎಲ್ಲರ ಪಾತ್ರವೂ ಇದೆ. ಆದರೆ, ಚಿತ್ರರಂಗದಲ್ಲಿ ಡ್ರಗ್ಸ್ ಜಾಲ ದಂಧೆ ಇದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಕೇವಲ ಈ ವಿಚಾರದಿಂದ ಇಡೀ ಚಿತ್ರರಂಗವನ್ನು ದೂಷಿಸಬಾರದು ಎಂದರು.
ಸುದೀಪ್ ಅವರಿಗೆ ಚಿತ್ರರಂಗದಲ್ಲಿ ಪಾರ್ಟಿ ಆಫರ್ ಬಂದಿತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೆ ಪಾರ್ಟಿ ಆಫರ್ ಬಂದಿದೆ. ಆದರೆ, ಅದು ಚಿತ್ರರಂಗದಿಂದಲ್ಲ. ರಾಜಕೀಯ ಪಕ್ಷಗಳಿಂದ. ಬೇರೆ ಪಾರ್ಟಿಗಳ ಬಗ್ಗೆ ಮಾಹಿತಿ ಇಲ್ಲ ಎಂದರು.
ದಿ.ಚಿರಂಜೀವಿ ಸರ್ಜಾ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ವಿಷಯದ ಬಗ್ಗೆ ಮಾತನಾಡಿದ ನಟ ಸುದೀಪ್, ಚಿರಂಜೀವಿ ನನಗೆ ತಮ್ಮ ಇದ್ದಂತೆ ಅವನು ಈಗ ನಮ್ಮ ಜೊತೆಗೆ ಇಲ್ಲ. ಅವನ ಸಾವಿನ ಬಗ್ಗೆ, ಡ್ರಗ್ಸ್ ಬಗ್ಗೆ ಮಾತನಾಡುವುದು ಸರಿಯಲ್ಲ. ಅವನಿಗೆ ಕುಟುಂಬ ಇದೆ. ಪತ್ನಿಯೂ ಇದ್ದಾರೆ. ಅವನ ಬಗ್ಗೆ ಮಾತನಾಡುವುದು ಬೇಡ ಎಂದು ತಿಳಿಸಿದರು.