ಬಗರ್ ಹುಕುಂ ಮಂಜೂರಾತಿ ನಿಂತರೂ ದಾಖಲೆ ಸಂಗ್ರಹಕ್ಕೆ ಮುಗಿ ಬಿದ್ದಿರುವ ಮಧ್ಯವರ್ತಿಗಳು!

1 min read

 

 

 

 

 

ತುಮಕೂರು ನ್ಯೂಸ್. ಇನ್
Tumkurnews.in

(ವಿಶೇಷ ವರದಿ)
*ಜಿ.ಆರ್.ರಮೇಶ್‍ಗೌಡ
ಗುಬ್ಬಿ: ಮಳೆ ನಿಂತರೂ ಮರದ ಹನಿ ನಿಂತಿಲ್ಲ’ ಎಂಬ ಗಾದೆಯಂತೆ ಬಡ ರೈತಾಪಿ ವರ್ಗಕ್ಕೆ ವರದಾನವಾಗಿರುವ ಬಗರ್ ಹುಕುಂ ಮಂಜೂರಾತಿ ನಿಂತಿದ್ದರೂ ದಾಖಲೆ ಸಂಗ್ರಹಣೆಗೆ ಮುಗಿಬಿದ್ದ ಮಧ್ಯವರ್ತಿಗಳ ಹಾವಳಿ ಭ್ರಷ್ಟಾಚಾರಕ್ಕೆ ಮೂಲವಾಗುತ್ತಿದೆ ಎನ್ನುವ ಆರೋಪ ಸಾಮಾಜಿಕ ಕಾರ್ಯಕರ್ತರ ತಂಡದ್ದಾಗಿದೆ.
ಈ ಹಿಂದೆ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಡೆದ ಬಗರ್ ಹುಕುಂ ಮಂಜೂರಾತಿ ಕೆಲಸ ಇಡೀ ಕಂದಾಯ ಇಲಾಖೆಯಲ್ಲಿ ಬೇರೆ ಯಾವುದೇ ಕಾರ್ಯಗಳು, ಯೋಜನೆಗಳು ಅನುಷ್ಠಾನಕ್ಕೆ ಬರದಷ್ಟು ವೇಗವಾಗಿ ಈ ಮಂಜೂರಾತಿ ಕಾರ್ಯಕ್ರಮ ನಡೆದುಹೋಗಿದೆ. ಸರ್ಕಾರ ಬದಲಾವಣೆ ನಂತರದಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗಬೇಕಿರುವ ಕಾರಣ ಮಂಜೂರಾತಿಯಾಗಲಿ, ಅರ್ಜಿ ಸ್ವೀಕೃತಿಯಾಗಲಿ ನಡೆಯುತ್ತಿಲ್ಲ. ಕೊರೋನಾ ಭೀತಿಯಲ್ಲಿ ಸರ್ಕಾರ ವೈರಸ್ ತಡೆಗೆ ಸರ್ಕಸ್ ಮಾಡುತ್ತಿದ್ದರೆ, ಇತ್ತ ಬಗರ್ ಹುಕುಂ ಮಂಜೂರಾತಿಗೆ ಅವಶ್ಯವಿರುವ ದಾಖಲೆ ಸಂಗ್ರಹಣೆ ನಡೆದಿದೆ.
ದಾಖಲೆ ಹುಡುಕಾಟಕ್ಕೆ ಹಣ ನೀಡಬೇಕೆಂಬ ಮಧ್ಯವರ್ತಿಗಳ ಹಾವಳಿ ಇಡೀ ತಾಲ್ಲೂಕು ಅಡಳಿತಕ್ಕೆ ಕೆಟ್ಟ ಹೆಸರು ತರಲಿದೆ.
ತಾಲ್ಲೂಕಿನಲ್ಲಿ ಈಗಾಗಲೇ ಸಾವಿರಾರು ಅರ್ಜಿಗಳು ಬಂದಿದ್ದವು. ಸರ್ಕಾರಿ ಜಮೀನು, ಗೋಮಾಳ ಸ್ಥಳಗಳ ಹುಡುಕಾಟ ಸಹ ನಡೆಸಿದ ಕೆಲ ದಲ್ಲಾಳಿಗಳು ಗುರುತಿಸಿದ ಬಗರ್ ಹುಕುಂ ಸ್ಥಳಗಳು ಅಧಿಕಾರಿಗಳಿಗೆ ಅಚ್ಚರಿ ತಂದಿದ್ದು ಸತ್ಯ. ಈ ಜತೆಗೆ ಬಗರ್ ಹುಕುಂ ಕಡತ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೂ ಸಂಪೂರ್ಣ ಮಾಹಿತಿ ಇದೆ. ಹಲವು ವರ್ಷಗಳಿಂದ ಈ ಕೆಲಸ ಮಾಡಿರುವ ಬೆರಳೆಣಿಕೆ ಮಂದಿ ಸಿಬ್ಬಂದಿಗಳು ದಾಖಲೆ ಸಂಗ್ರಹಣೆ ಮಾಡುವಲ್ಲಿ ಕೈ ಚಳಕ ತೋರಬಲ್ಲರು. ಇವರ ಪರಿಶ್ರಮ ಹಗಲಿರುಳು ನಡೆದ ಕಾಲದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣವೇ ಇರಲಿಲ್ಲ. ಮಂಜೂರಾತಿ ಕೆಲಸ ಒಂದು ವರ್ಷದಿಂದ ನಿಂತರೂ ದಾಖಲೆ ಸೃಷ್ಟಿಯಲ್ಲಿ ನಿರತರಾಗಿರುವ ಕೆಲವರು ದಂಧೆ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ಆರೋಪಿಸುತ್ತಾರೆ.
ಬಗರ್ ಹುಕುಂ ಹೆಸರಿನಲ್ಲೇ ಲಕ್ಷಾಂತರ ರೂಗಳ ಲಂಚಾವತಾರ ನಡೆದಿರುವ ಕುರುಹುಗಳು ಸಾಕಷ್ಟಿವೆ. ಆದರೆ ಲಂಚ ಕೊಟ್ಟ ಮಂದಿ ಎಲ್ಲಿಯೋ ಹೇಳಿಕೊಳ್ಳದೇ ಮುಂದಿನ ಬಾರಿ ಜಮೀನು ಮಂಜೂರು ಆಗಬಹುದು ಎಂದು ಕಾದು ಕುಳಿತಿದ್ದಾರೆ. ಇದೇ ಅವಕಾಶ ಬಳಸಿಕೊಂಡ ಕೆಲ ವಂಚಕರು ಮುಗ್ದ ರೈತರಿಂದ ಹಣ ವಸೂಲಿ ಮಾಡಿ ಮೋಸ ಮಾಡಿರುವ ನಿದರ್ಶನ ಕೂಡಾ ಸಾಕಷ್ಟಿದೆ. ಈ ಮಧ್ಯೆ ಬಗರ್ ಹುಕುಂ ಮಂಜೂರಾತಿಗೆ ಕಡತಗಳ ರಚನೆ ಈಗಿನಿಂದಲೇ ನಡೆದಿರುವ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಬಡ ರೈತರಿಗೆ ಸಿಗಬೇಕಾದ ಜಮೀನು ಸಿರಿವಂತರ ಪಾಲಾಗುತ್ತಿರುವ ಬಗ್ಗೆ ಹಲವು ಜನಪ್ರತಿನಿಧಿಗಳೇ ಆರೋಪ ಮಾಡಿದ್ದಾಗಿದೆ. ಆದರೆ ಬೇರೆ ಊರುಗಳಿಂದ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಹುಡುಕಿ ಬಗರ್ ಹುಕುಂ ಮಂಜೂರಾತಿಗೆ ಓಡಾಡುವವರ ಸಂಖ್ಯೆ ಬೆಳೆದಿದೆ. ಅನುಭವದಲ್ಲಿರುವ ರೈತನಿಂದ ಮಂಜೂರು ಮೂಲಕ ಖಾತೆ ಮಾಡಿಸಿಕೊಂಡವರು ವಾಸ್ತವದಲ್ಲಿ ಆ ಜಾಗವನ್ನೇ ನೋಡಿರುವುದಿಲ್ಲ. ಇಂತಹ ವಿಚಿತ್ರ ಘಟನೆಗಳು ತಾಲ್ಲೂಕಿನಲ್ಲಿ ನಡೆದಿವೆ.
ರೈತರಲ್ಲದ ಕುಟುಂಬಕ್ಕೆ ಜಮೀನು ಸಿಕ್ಕರೆ, ಕೆಲ ಹೋಬಳಿಗಳಲ್ಲಿ ಒಂದೇ ಕುಟುಂಬದ ಎಲ್ಲಾ ಸದಸ್ಯರ ಹೆಸರಿಗೆ ಜಮೀನು ದೊರೆಕಿದೆ. ತೆರಿಗೆ ಪಾವತಿದಾರರ ಕುಟುಂಬದ ಇನ್ನಿತರ ಸದಸ್ಯರಿಗೂ ಜಮೀನು ನೀಡಲಾಗಿದೆ. ಇಂತಹ ಭೂ ಕಬಳಿಕೆಗೆ ಸಾತ್ ನೀಡುವ ಸರ್ಕಾರಿ ಸಿಬ್ಬಂದಿಗಳ ಬಗ್ಗೆ ಜಿಲ್ಲಾಡಳಿತ ತನಿಖೆಗೆ ನಡೆಸಬೇಕಿದೆ. ಇಂದಿಗೂ ತಾಲ್ಲೂಕು ಕಚೇರಿಯಲ್ಲಿ ಕಡತ ರಚಿಸುವ ಮಧ್ಯವರ್ತಿಗಳ ಹಾವಳಿ ಸಾಕಷ್ಟು ನಡೆದಿದೆ. ಮುಗ್ದ ರೈತರಿಂದ ಹಣ ವಸೂಲಿ ಮಾಡಿ ಹಂಚುವ ಪ್ರಕ್ರಿಯೆ ಬಗ್ಗೆ ಈ ಹಿಂದೆ ದೂರುಗಳು ಸಾಕಷ್ಟು ಮಾಡಲಾಗಿತ್ತು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದತೆ ಉನ್ನತ ಅಧಿಕಾರಿಗಳೇ ಶಾಮೀಲು ಆಗಿದ್ದ ಮಾಹಿತಿ ಶಾಕ್ ನೀಡಿತ್ತು. ಮಂಜೂರಾತಿ ನಡೆಯದ ಸಂದರ್ಭದಲ್ಲಿ ಮಂಜೂರಾತಿ ಪ್ರಕ್ರಿಯೆಗೆ ಕಡತ ರೆಡಿ ಮಾಡುವ ಕೆಲಸ ಮಾಡುವುದನ್ನು ಬಿಟ್ಟು ಕೊರೋನಾ ವೈರಸ್ ವಿರುದ್ದ ಹೋರಾಟ ನಡೆಸಿ ಜನಸೇವೆ ಮಾಡುವ ಕಾಯಕ ಮಾಡಲಿ ಎಂದು ಹೋರಾಟಗಾರ ನಾಗಸಂದ್ರ ವಿಜಯ್‍ಕುಮಾರ್ ಆಗ್ರಹಿಸುತ್ತಾರೆ.

You May Also Like

More From Author

+ There are no comments

Add yours