ತುಮಕೂರು: ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ: ಅಭಿಮಾನಿಗಳ ರಕ್ತ ಸಹಿ ಸಂಗ್ರಹ

1 min read

 

ಪರಮೇಶ್ವರಗೆ ಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹ: ಅಭಿಮಾನಿಗಳ ರಕ್ತ ಸಹಿ ಸಂಗ್ರಹ

Tumkurnews
ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಇಂದು ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‍ ಸೇನೆ ವತಿಯಿಂದ ನಗರದಲ್ಲಿ ರಕ್ತದಲ್ಲಿ ಸಹಿ ಸಂಗ್ರಹಿಸಿ ಎಐಸಿಸಿಗೆ ಕಳುಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸಲಾಯಿತು.
ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‍ ಸೇನೆ ರಾಜ್ಯಾಧ್ಯಕ್ಷ ನಗುತಾರಂಗನಾಥ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ನಗರದ ಟೌನ್‍ಹಾಲ್ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ತದ ನಂತರ ರಕ್ತದಲ್ಲಿ ಸಹಿ ಸಂಗ್ರಹಿಸುವ ಮೂಲಕ ಎಐಸಿಸಿಗೆ ಮನವಿ ಪತ್ರವನ್ನು ರವಾನಿಸಿದರು.
ಈ ವೇಳೆ ಮಾತನಾಡಿದ ನಗುತಾ ರಂಗನಾಥ್, ಪ್ರಸ್ತುತ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿಯೂ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಅಲ್ಲದೆ ಉಪಮುಖ್ಯಮಂತ್ರಿಯಾಗಿ, ಗೃಹ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ರೇಷ್ಮೆ ಇನ್ನಿತರ ಇಲಾಖೆಗಳಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಸಜ್ಜನರಾಜಕಾರಣಿಯಾಗಿದ್ದಾರೆ. ಎಐಸಿಸಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅವರ ಪಕ್ಷ ನಿಷ್ಠೆ ಮತ್ತುಕಾರ್ಯವೈಖರಿಯನ್ನು ಹಾಗೂ ಪಕ್ಷಕ್ಕಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ನಮ್ಮಒತ್ತಾಯವಾಗಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದು 76 ವರ್ಷ ಕಳೆದರೂ ಕರ್ನಾಟಕದಲ್ಲಿ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ದಲಿತ ಸಮುದಾಯಕ್ಕೆ ಇದುವರೆಗೂ ಮುಖ್ಯಮಂತ್ರಿ ಸ್ಥಾನ ಲಭಿಸಿಲ್ಲ. 2013ರಲ್ಲಿ ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹುದ್ದೆಗೆ ಹಠ ಹಿಡಿಯದೆ ತ್ಯಾಗ ಮಾಡಿದ್ದಾರೆ. ದಲಿತ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆರ್ಹರಿರುವ ಅನೇಕ ಜನರಿದ್ದರೂ, ಪಕ್ಷದ ನಿಷ್ಠೆ, ಸಂಘಟನೆ ಎಲ್ಲ ದೃಷ್ಟಿಯಿಂದಲೂ ಡಾ.ಜಿ.ಪರಮೇಶ್ವರ್ ಮೊದಲ ಸಾಲಿನಲ್ಲಿದ್ದಾರೆ. ಹಾಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಒಂದು ವೇಳೆ ಕೆಪಿಸಿಸಿ, ಎಐಸಿಸಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ದಲಿತರು ನಿಲ್ಲುವುದು ಅನಿವಾರ್ಯ ಎಂದು ನಗುತಾರಂಗನಾಥ್ ತಿಳಿಸಿದರು.
ನಗರಸಭೆಯ ಮಾಜಿ ಉಪಾಧ್ಯಕ್ಷ ವಾಲೆ ಚಂದ್ರಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಅಧಿಕಾರದಲ್ಲಿದೆ. ಕಳೆದ ನಲವತ್ತು ವರ್ಷಗಳಿಂದ ಡಾ.ಜಿ.ಪರಮೇಶ್ವರ್‍ ರಾಜಕಾರಣದಲ್ಲಿ, ಅದರಲ್ಲಿಯೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು, ತನು, ಮನ, ಧನ ಎಲ್ಲವೂ ಪಕ್ಷಕ್ಕೆ ಅರ್ಪಿಸಿದ್ದಾರೆ. ಹಾಗೆಯೇ ಯಾವುದೇ ಕಳಂಕವಿಲ್ಲದ ರಾಜಕಾರಣಿಯಾಗಿದ್ದಾರೆ. ಹಾಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ಕೆಪಿಸಿಸಿ ಯುವಕಾಂಗ್ರೆಸ್‍ ಜಿಲ್ಲಾ ಕಾನೂನು ವಿಭಾಗದ ಮುಖ್ಯಸ್ಥ ಕೋಕಿಲ್ ಸಂದೀಪ, ಡಾ.ಜಿ.ಪರಮೇಶ್ವರ್‍ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಎಐಸಿಸಿ ಮತ್ತು ಕೆಪಿಸಿಸಿಗೆ ಬರೆದ ತಮ್ಮರಾಜೀನಾಮೆ ಪತ್ರವನ್ನು ಪ್ರತಿಭಟನೆಯಲ್ಲಿ ಪ್ರದರ್ಶಿಸುವ ಮೂಲಕ ಸಂದೇಶವನ್ನು ರವಾನಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‍ ಸೇನೆ ಉಪಾಧ್ಯಕ್ಷ ಭೀಮಸಂದ್ರ ಮಹೇಶ್, ರಾಜ್ಯಾಕಾರ್ಯಾಧ್ಯಕ್ಷ ಆದೇಶ್.ಸಿ.ಎಂ., ಗುಲ್ಬರ್ಗ ಜಿಲ್ಲಾಧ್ಯಕ್ಷ ಶ್ರೀಧರ್ ಡಿ.ಇಂಗನಕಲ್ಲು, ತುಮಕೂರು ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ಕಾಂಗ್ರೆಸ್ ಮುಖಂಡರಾದ ಅರಕೆರೆ ಶಂಕಕರ್, ಕೊರಟಗೆರೆ ಮಲ್ಲಿಕಾರ್ಜುನ್, ಮೋಹನಕುಮಾರ್, ಹೆಗ್ಗೆರೆಕೃಷ್ಣಮೂರ್ತಿ, ಸಿ.ಭಾನುಪ್ರಕಾಶ್, ಛಲವಾದಿ ಶೇಖರ್, ಬಂಡೆಕುಮಾರ್, ನಾಗಮಣಿ, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ನಾಗಣ್ಣ, ಎನ್.ಕೆ.ನಿಧಿಕುಮಾರ್, ಧರಣೇಂದ್ರಕುಮಾರ್ ಪಾಲ್ಗೊಂಡಿದ್ದರು.

You May Also Like

More From Author

+ There are no comments

Add yours